ಏಐಸಿಸಿ ಪ್ರಧಾನ ಕಾರ್ಯದರ್ಶಿಗಳಾಗಿ ಆಝಾದ್,ಕಮಲನಾಥ ನೇಮಕ
ಹೊಸದಿಲ್ಲಿ,ಜೂ.12: ಹಿರಿಯ ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಆಝಾದ್ ಮತ್ತು ಕಮಲನಾಥ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಗಳಾಗಿ ರವಿವಾರ ನೇಮಕಗೊಳಿಸಲಾಗಿದೆ. ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿಯವರ ಈ ಕ್ರಮದಿಂದಾಗಿ ಮುಂದಿನ ವರ್ಷ ಉತ್ತರ ಪ್ರದೇಶ ಮತ್ತು ಪಂಜಾಬ್‌ಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗೆ ಮುನ್ನ ಸಾಂಸ್ಥಿಕ ಬದಲಾವಣೆಗಳಿಗೆ ನಾಂದಿ ಹಾಡಿದಂತಾಗಿದೆ.
ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ಆಝಾದ್ ಉತ್ತರ ಪ್ರದೇಶದಲ್ಲಿ ಮತ್ತು ಕಮಲನಾಥ ಪಂಜಾಬ್ ಹಾಗೂ ಹರ್ಯಾಣಗಳಲ್ಲಿ ಪಕ್ಷದ ವ್ಯವಹಾರಗಳ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಅವರು ತಿಳಿಸಿದರು. ಕಮಲನಾಥ ಅವರು ಸುಮಾರು 15 ವರ್ಷಗಳ ಹಿಂದೆ ಪ್ರಧಾನ ಕಾರ್ಯದರ್ಶಿಯಾಗಿದ್ದು, ಗುಜರಾತ್ ಮತ್ತು ಪಶ್ಚಿಮ ಬಂಗಾಲಗಳಂತಹ ಪ್ರಮುಖ ರಾಜ್ಯಗಳ ಉಸ್ತುವಾರಿ ಹೊಂದಿದ್ದರು.
ರಾಹುಲ ಗಾಂಧಿಯವರನ್ನು ಪಕ್ಷಾಧ್ಯಕ್ಷರನ್ನಾಗಿ ಮಾಡಲಾಗುತ್ತದೆ ಎಂಬ ಮಾತುಗಳು ಮತ್ತೊಮ್ಮೆ ಕೇಳಿಬರುತ್ತಿರುವ ನಡುವೆಯೇ ಈ ನೇಮಕಗಳನ್ನು ಮಾಡಲಾಗಿದ್ದು, ಯುವಜನರಿಗೆ ಸ್ಥಾನ ಕಲ್ಪಿಸಲು ಪಕ್ಷದ ಹಿರಿಯರನ್ನು ದೂರವಿಡಲಾಗುತ್ತದೆ ಎಂಬ ಶಂಕೆಯನ್ನು ಈ ನೇಮಕಗಳು ನಿವಾರಿಸಿವೆ.