×
Ad

ಗೆದ್ದವನು ಕುದುರೆ, ಬಿದ್ದವನು ಕತ್ತೆ

Update: 2016-06-12 23:18 IST

ರಾಜ್ಯ ಸಭೆ ಚುನಾವಣೆಯನ್ನು ಹಲವರು ಕುದುರೆ ವ್ಯಾಪಾರ ಎಂದು ಕರೆದಿದ್ದಾರೆ. ವ್ಯಾಪಾರದಲ್ಲಿ ಸೋತವರು ‘ಕುದುರೆಯಲ್ಲ ಕತ್ತೆ ವ್ಯಾಪಾರ’ ಎಂದು ವ್ಯಂಗ್ಯ ಮಾಡಿದ್ದಾರೆ. ಒಟ್ಟಿನಲ್ಲಿ ಈ ಬಾರಿ ಹಲವು ಶ್ರೀಮಂತ ಕುದುರೆಗಳು ಮತ್ತು ಕತ್ತೆಗಳು ರಾಜ್ಯಸಭೆಗೆ ಆಯ್ಕೆಯಾಗಿರುವುದನ್ನು ಆಯಾ ಪಕ್ಷದ ನಾಯಕರೇ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಈ ವ್ಯಾಪಾರದಲ್ಲಿ ಯಾರು ಗೆದ್ದದ್ದಾರೆಯೋ ಅವರೆಲ್ಲ ಕುದುರೆ ವ್ಯಾಪಾರ ನಡೆಸಿದ್ದಾರೆ ಎಂದು, ಉಳಿದವರೆಲ್ಲ ಸತ್ಯವಂತರೆಂದು ಕರೆಯುವುದಕ್ಕಂತೂ ಸಾಧ್ಯವಿಲ್ಲ. ಹರಾಜಿಗೆ ಅವರೂ ನಿಂತಿದ್ದಾರೆ. ಕಟ್ಟ ಕಡೆಯವರೆಗೂ ತಮ್ಮಲ್ಲಿರುವ ಹಣ ಬಲದಿಂದ ಕುದುರೆಗಳನ್ನು, ಕತ್ತೆಗಳನ್ನು ಕೊಂಡುಕೊಳ್ಳುವ ಹವಣಿಕೆಯನ್ನು ನಡೆಸಿದ್ದಾರೆ. ಆದರೆ ವಿಫಲರಾಗಿದ್ದಾರೆ.

ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಾದದ್ದಲ್ಲ. ದೇಶಾದ್ಯಂತ ಇದು ನಡೆದಿದೆ. ಒಂದು ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದರೆ, ಮಗದೊಂದು ರಾಜ್ಯದಲ್ಲಿ ಬಿಜೆಪಿ ಗೆದ್ದಿದೆ. ಪ್ರಾದೇಶಿಕ ಪಕ್ಷಗಳೂ ಇದರಲ್ಲಿ ಹಿಂದೆ ಬಿದ್ದಿಲ್ಲ. ಕೆಲವು ಕಡೆ ರಾಷ್ಟ್ರೀಯ ಪಕ್ಷಗಳ ಎಂಎಲ್‌ಎಗಳನ್ನೇ ಪ್ರಾದೇಶಿಕ ಪಕ್ಷಗಳು ತಮ್ಮ ಬುಟ್ಟಿಗೆ ಹಾಕಿಕೊಂಡಿವೆ. ಕರ್ನಾಟಕದಲ್ಲಿ ತನ್ನ ಮೂರನೆ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಬಹುದೊಡ್ಡ ವಿಜಯವನ್ನು ತನ್ನದಾಗಿಸಿಕೊಂಡಿದೆ. ಅಷ್ಟೇ ಅಲ್ಲ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಈ ಚುನಾವಣೆಯಲ್ಲಿ ಜೆಡಿಎಸ್‌ಗೆ ಬಲವಾದ ಹೊಡೆತವನ್ನು ನೀಡಿದೆ. ಜೆಡಿಎಸ್‌ನ 8 ಶಾಸಕರು ಕಾಂಗ್ರೆಸ್‌ಗೆ ಮತ ಹಾಕಿರುವುದು ಜೆಡಿಎಸ್‌ನ ಬಹುದೊಡ್ಡ ವೈಫಲ್ಯ. ಇದರ ಪರಿಣಾಮವನ್ನು ಜೆಡಿಎಸ್ ಮುಂದೆಯೂ ಅನುಭವಿಸಬೇಕಾಗುತ್ತದೆ. ಅನಿವಾರ್ಯವಾಗಿ ತನ್ನ ಎಂಟು ಶಾಸಕರನ್ನು ಜೆಡಿಎಸ್ ಅಮಾನತು ಮಾಡಲೇ ಬೇಕಾಗಿದೆ. ಇಲ್ಲವಾದರೆ ಜೆಡಿಎಸ್‌ನ ನಾಯಕರಾದ ದೇವೇಗೌಡ ಮತ್ತು ಕುಮಾರಸ್ವಾಮಿ ಬೆಲೆ, ನೆಲೆ ಎರಡನ್ನೂ ಕಳೆದುಕೊಳ್ಳಬೇಕಾಗುತ್ತದೆ. ಜೆಡಿಎಸ್‌ನಿಂದ ಅವರು ಹೊರ ಹೋದರೆ, ಅದರ ಲಾಭ ಮತ್ತೆ ಕಾಂಗ್ರೆಸ್‌ಗೆ ಎನ್ನುವುದರಲ್ಲಿ ಎರಡು ಮಾತಿಲ್ಲ. ದೇವೇಗೌಡರು ಪತ್ರಿಕಾಗೋಷ್ಠಿಯಲ್ಲಿ ಪ್ರಾಮಾಣಿಕತೆಯ ಸೋಗುಹಾಕಿ ಹೇಳಿಕೆಯನ್ನು ನೀಡಿದ್ದಾರೆ. ತನ್ನ ಶಾಸಕರನ್ನು ಹಣದ ಮೂಲಕ ಸೆಳೆದಿದ್ದಾರೆ ಎನ್ನುವುದು ಅವರ ಪ್ರಲಾಪ. ತನ್ನ ಅಭ್ಯರ್ಥಿ ಪಕ್ಷಕ್ಕೆ ನಯಾ ಪೈಸೆಯನ್ನೂ ನೀಡಿಲ್ಲ ಎನ್ನುವುದು ಮತ್ತೊಂದು ಸೋಗಲಾಡಿ ಹೇಳಿಕೆ. ಹಾಗೆಯೇ ರಾಜ್ಯಸಭಾ ಆಯ್ಕೆಯನ್ನು ಕತ್ತೆ ವ್ಯಾಪಾರ ಎಂದೂ ಜೆಡಿಎಸ್ ವ್ಯಂಗ್ಯ ಮಾಡಿದೆ. ಆದರೆ ಈ ಟೀಕೆಯನ್ನು ಮಾಡುವುದಕ್ಕೆ ಜೆಡಿಎಸ್‌ಗೆ ಯಾವ ನೈತಿಕ ಹಕ್ಕಿದೆ? ಅಧಿಕಾರಕ್ಕಾಗಿ ರಾಜಕೀಯವನ್ನು ಅತ್ಯಂತ ಹೀನ ಸ್ಥಿತಿಗೆ ಇಳಿಸಿದವರು ಯಾರು ಎನ್ನುವುದು ನಾಡಿಗಲ್ಲ, ದೇಶಕ್ಕೇ ಗೊತ್ತಿದೆ.

ತನ್ನ ಮಗ ಮುಖ್ಯಮಂತ್ರಿಯಾಗಬೇಕು ಎನ್ನುವ ಒಂದೇ ಕಾರಣಕ್ಕಾಗಿ, ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡಬೇಕು ಎನ್ನುವ ಉದ್ದೇಶಕ್ಕಾಗಿ ಜೆಡಿಎಸ್‌ನ್ನು ಸ್ವತಃ ಒಡೆದದ್ದು ಯಾರು? ಬಿಜೆಪಿಯ ಜೊತೆಗೆ ಕೈ ಜೋಡಿಸಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದಕ್ಕಾಗಿ ರೆಸಾರ್ಟ್ ರಾಜಕಾರಣದ ಹೊಸ ಅಧ್ಯಾಯವನ್ನು ಆರಂಭಿಸಿರುವುದು ಜೆಡಿಎಸ್ ಪಕ್ಷವಾಗಿತ್ತು. ಆಗ ಇದೇ ಝಮೀರ್ ಅವರು ಕುಮಾರಸ್ವಾಮಿಯವರ ಬಸ್‌ನ ಚಾಲಕ ಸ್ಥಾನದಲ್ಲಿ ನಿಂತಿದ್ದರು. ಕುದುರೆ ವ್ಯಾಪಾರದ ಬಹುದೊಡ್ಡ ಜಾತ್ರೆಗೆ ನಾಂದಿ ಹಾಡಿರುವುದೇ ಕುಮಾರಸ್ವಾಮಿ ಮತ್ತು ಬಳಗ. ಇಂದು ರಾಜ್ಯದಲ್ಲಿ ಬಿಜೆಪಿ ತಲೆಯೆತ್ತಿ ನಿಂತಿದ್ದರೆ, ಅದರ ಹಿಂದೆ ಕುಮಾರಸ್ವಾಮಿ ಬಳಗ ರೆಸಾರ್ಟ್ ರಾಜಕಾರಣದ ಪಾತ್ರ ಬಹುದೊಡ್ಡದು.

 ಕುದುರೆ ಜೂಜಿಗೆ ಹೆಸರಾಗಿದ್ದ ವಿಜಯ ಮಲ್ಯ ಅವರನ್ನು ರಾಜ್ಯಸಭೆಗೆ ಕಳುಹಿಸಿರುವುದೇ ಜೆಡಿಎಸ್ ಪಕ್ಷ. ಮಲ್ಯ ಅವರನ್ನು ಮಣ್ಣಿನ ಮಗ ಎಂದು ಬಣ್ಣಿಸಿದವರು ದೇವೇಗೌಡರು. ಯಾವ ಅರ್ಹತೆಯ ಮೇಲೆ ವಿಜಯ ಮಲ್ಯ ಅವರನ್ನು ಜೆಡಿಎಸ್ ರಾಜ್ಯಸಭೆಗೆ ಕಳುಹಿಸಿತು? ಇಂದು ಅದರ ಪರಿಣಾಮ ಏನಾಯಿತು? ರಾಜ್ಯಸಭೆಗೆ ಆಯ್ಕೆಯಾದ ವಿಜಯ ಮಲ್ಯ ಅದರ ಘನತೆಯನ್ನೂ ಮೂರಾಬಟ್ಟೆ ಮಾಡಿದರು. ತನ್ನ ವಂಚನೆಗೆ ಪರೋಕ್ಷವಾಗಿ ರಾಜ್ಯಸಭೆಯನ್ನು ಬಳಸಿಕೊಂಡರು. ರಾಜ್ಯಕ್ಕೆ ಯಾವ ರೀತಿಯಲ್ಲೂ ಮಲ್ಯ ಸಹಾಯವಾಗಲಿಲ್ಲ. ಬದಲಿಗೆ ಅವರಿಂದಾಗಿ ರಾಜ್ಯಕ್ಕೆ ಕಳಂಕವುಂಟಾಯಿತು. ವಿಜಯ ಮಲ್ಯ ಹಣದಿಂದ ರಾಜ್ಯಸಭೆಯ ಸ್ಥಾನವನ್ನು ಕೊಂಡು ಕೊಂಡಿಲ್ಲ ಎನ್ನುವುದನ್ನು ದೇವೇಗೌಡರು ಪ್ರಮಾಣ ಮಾಡಿ ಹೇಳಬಲ್ಲರೇ? ತಾನು ಮಾಡಿದ್ದನ್ನು ಉಳಿದವರು ಮಾಡಿದಾಗ, ಅದಕ್ಕಾಗಿ ಸಾರ್ವಜನಿಕವಾಗಿ ದೇವೇಗೌಡರು ಗೋಳಾಡಿದರೆ ಅದನ್ನು ಜನರು ಹೇಗೆ ಗಂಭೀರವಾಗಿ ಸ್ವೀಕರಿಸಲು ಸಾಧ್ಯ? ಒಂದು ರೀತಿಯಲ್ಲಿ ಜೆಡಿಎಸ್ ಈ ಹಿಂದೆ ಏನು ಮಾಡಿತ್ತೋ, ಅದುವೇ ತಿರುಗು ಬಾಣವಾಗಿದೆ. ಇದರ ಅರ್ಥ ಕಾಂಗ್ರೆಸ್ ಪಕ್ಷ ಸಾಚಾ ಎಂದಲ್ಲ. ಆಸ್ಕರ್ ಮತ್ತು ಜೈರಾಂ ರಮೇಶ್ ಅವರ ಆಯ್ಕೆ ವರಿಷ್ಠರ ಅಪ್ಪಣೆಯ ಪ್ರಕಾರಣವೇ ಆಗಿದೆ. ಆದರೆ ಮೂರನೆ ಅಭ್ಯರ್ಥಿಯ ಆಯ್ಕೆಯ ಸಂದರ್ಭದಲ್ಲಿ ಹಣ ಸಾಕಷ್ಟು ಕೆಲಸ ಮಾಡಿದೆ.

ಒಂದು ರೀತಿಯಲ್ಲಿ, ದೇವೇಗೌಡರ ಹಣವನ್ನು ಕಾಂಗ್ರೆಸ್ ಹಣದ ಮೂಲಕವೇ ಎದುರಿಸಿದೆ. ಈ ಗೆಲುವಿನಿಂದ ಕಾಂಗ್ರೆಸ್‌ನ ಪ್ರತಿಷ್ಠೆ ಹೆಚ್ಚಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅಂತಿಮವಾಗಿ ಇದು ಕಾಂಗ್ರೆಸ್‌ನೊಳಗೆ ಡಿಕೆಶಿಯಂತಹ ರಾಜಕಾರಣಿಗಳ ಅನಿವಾರ್ಯತೆಯನ್ನು ಎತ್ತಿ ಹಿಡಿದಿದೆ. ಈ ಗೆಲುವನ್ನು ಮೇಲ್ಮುಖವಾಗಿ ನಾವು ಸಿದ್ದರಾಮಯ್ಯ ಗೆಲುವು ಎನ್ನಬಹುದಾದರೂ, ಆಳದಲ್ಲಿ ಕೆಲಸ ಮಾಡಿರುವುದು ಡಿಕೆಶಿ ಮತ್ತು ಅವರ ಬಳಗ. ಅಥವಾ ಅವರೊಳಗಿನ ಕಪ್ಪು ಕುಳಗಳು ಚೆಲ್ಲಿರುವ ಹಣವೇ ಕಾಂಗ್ರೆಸ್‌ನ ಮೂರನೆ ಅಭ್ಯರ್ಥಿಯನ್ನು ಗೆಲ್ಲುವಂತೆ ಮಾಡಿದೆ. ಜೆಡಿಎಸ್‌ನ ವಿಪ್‌ನ್ನು ಮೀರಿ ಕಾಂಗ್ರೆಸ್‌ಗೆ ಮತ ಹಾಕಿದವರು, ವೌಲ್ಯದ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಂಡಿರುವುದಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಯಾವ ಕಡೆ ಹೆಚ್ಚು ಹಣದ ಭಾರವಿದೆ ಎನ್ನುವುದನ್ನು ನೋಡಿ ಅವರು ನಿರ್ಧಾರ ತೆಗೆದುಕೊಂಡಿದ್ದಾರೆ. ಆದುದರಿಂದ ಕಾಂಗ್ರೆಸ್-ಜೆಡಿಎಸ್ ಯಾರು ಗೆದ್ದರೂ ಈ ನಾಡಿಗೆ ಆಗುವ ಪ್ರಯೋಜನ ಅಷ್ಟರಲ್ಲೇ ಇತ್ತು. ಆದುದರಿಂದಲೇ ಈ ಗೆಲುವು ಸೋಲನ್ನು ನಾಡಿನ ಜನರು ವಿಶೇಷವಾಗಿ ತೆಗೆದುಕೊಂಡಿಲ್ಲ. ಮುಖ್ಯವಾಗಿ ದೇವೇಗೌಡರ ಅಳಲಿಗೆ ಯಾರೂ ಕಿವಿಯಾಗಿಲ್ಲ.

 ಇತ್ತ ದೇಶದ ಉಳಿದೆಡೆಯಲ್ಲೂ ಇದೇ ಅಳಲು. ಉತ್ತರ ಪ್ರದೇಶದಲ್ಲಿ ರಾಷ್ಟ್ರೀಯಪಕ್ಷವಾಗಿರುವ ಬಿಜೆಪಿಯಿಂದಲೇ ಶಾಸಕನೊಬ್ಬ ಅಡ್ಡಮತ ಹಾಕಿದ್ದಾನೆ. ಇತ್ತ ಹರ್ಯಾಣದಲ್ಲಿ ಕಾಂಗ್ರೆಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಭೂಪೇಂದ್ರ ಹೂಡ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಬೊಬ್ಬಿಡುತ್ತಿದ್ದಾರೆ. ಎಲ್ಲರೂ ತಮಗೆ ಸಾಧ್ಯವಿರುವಷ್ಟು ಮಟ್ಟಿಗೆ ಅಕ್ರಮ ನಡೆಸಿದ್ದಾರೆ. ಹಣಬಲವನ್ನು ಪ್ರದರ್ಶಿಸಿದ್ದಾರೆ. ಗೆದ್ದ ಕಡೆ ಮೀಸೆ ತಿರುಗಿಸುತ್ತಿದ್ದಾರೆ. ಸೋತ ಕಡೆ, ಸತ್ಯ, ನ್ಯಾಯದ ಬಗ್ಗೆ ಮಾತನಾಡಿ ಜನರ ಅನುಕಂಪ ಗಿಟ್ಟಿಸಲು ಯತ್ನಿಸುತ್ತಿದ್ದಾರೆ. ಅದೆಷ್ಟು ಪ್ರಯತ್ನ ನಡೆಸಿದರೂ ಈ ಬಾರಿ ಬಿಜೆಪಿಗೆ ರಾಜ್ಯಸಭೆಯಲ್ಲಿ ಬಹುಮತವನ್ನು ತನ್ನದಾಗಿಸಲು ಸಾಧ್ಯವಾಗಿಲ್ಲ ಎನ್ನುವುದು ಈ ಬಾರಿಯ ಚುನಾವಣೆಯ ಮಹತ್ವದ ಅಂಶ. ಹಣದ ಥೈಲಿಯ ಜೊತೆಗೆ ಆಡುತ್ತಿರುವ ಬಿಜೆಪಿಗೆ ಇದು ಸಣ್ಣ ಮಟ್ಟಿನ ಹಿನ್ನಡೆಯೇ ಹೌದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News