ಪಟೇಲ್ ಮೀಸಲಾತಿ ಚಳವಳಿಯ ಕುರಿತ ಗುಜರಾತಿ ಚಿತ್ರಕ್ಕೆ ಸಿಬಿಎಫ್‌ಸಿ ಅಡ್ಡಗಾಲು
ಅಹ್ಮದಾಬಾದ್, ಜೂ.15: ಬಾಲಿವುಡ್ ಚಿತ್ರ ‘ಉಡ್ತಾ ಪಂಜಾಬ್’ ಬಾಂಬೆ ಹೈಕೋರ್ಟ್ ನಿಂದ ಜೀವದಾನ ಪಡೆದಿರುವಂತೆಯೇ ನಡೆಯುತ್ತಿರುವ ಪಟೇಲ್ ಮೀಸಲಾತಿ ಹೋರಾ ಟದ ವಸ್ತುವಿರುವ ಗುಜರಾತಿ ಚಿತ್ರವೊಂದಕ್ಕೆ ಕೇಂದ್ರೀಯ ಚಲನಚಿತ್ರ ಪ್ರಮಾಣಪತ್ರ ಮಂಡಳಿಯು(ಸಿಬಿಎಫ್‌ಸಿ) ಹಸಿರು ನಿಶಾನೆ ತೋರಿಸಲು ನಿರಾಕರಿಸಿದೆ.
ಚಿತ್ರವು ಈಗಿರುವಂತೆಯೇ ಬಿಡುಗಡೆಯಾದಲ್ಲಿ ಅದು ಕಾನೂನು-ಸುವ್ಯವಸ್ಥೆ ಸಮಸ್ಯೆಗೆ ಪ್ರಚೋದನೆ ನೀಡಬಹುದೆಂಬ ನೆಲೆಯಲ್ಲಿ ‘ಸಲಗ್ರೋ ಸವಾಲ್ ಅನಾಮತ್’ (ಮೀಸಲಾತಿಯ ಜ್ವಲಂತ ಪ್ರಶ್ನೆ’ ಎಂಬ ಈ ಚಿತ್ರಕ್ಕೆ ಸಿಬಿಎಫ್‌ಸಿ ಪ್ರಮಾಣಪತ್ರ ನೀಡಲು ನಕಾರ ಸೂಚಿಸಿದೆ.
ಚಿತ್ರದ ಸಂಭಾಷಣೆಯಲ್ಲೂ ವಿವಾದಗಳಿವೆ. ಅವು ಸಂವಿಧಾನಶಿಲ್ಪಿ ಬಿ. ಆರ್. ಅಂಬೇಡ್ಕರರ ಸಿದ್ಧಾಂತಗಳಿಗೆ ವಿರುದ್ಧವಾಗಿವೆಯೆಂದೂ ಅದು ಹೇಳಿದೆ.
ಚಿತ್ರಕ್ಕೆ ಪ್ರಮಾಣಪತ್ರವನ್ನು ನಿರಾಕರಿಸಲಾಗಿದೆಯೆಂದು ಪ್ರಾದೇಶಿಕ ಚಿತ್ರಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ, ಸಿಬಿಎಫ್‌ಸಿಯ ಕಚೇರಿ ಅಧೀಕ್ಷಕ ಕೆ.ಡಿ. ಕಾಂಬ್ಳೆ ಮುಂಬೈಯಿಂದ ಪಿಟಿಐಗೆ ತಿಳಿಸಿದ್ದಾರೆ.
ನಿರ್ಮಾಪಕರೀಗ ಸಿಬಿಎಫ್‌ಸಿಯ ಪರಾಮರ್ಶೆ ಸಮಿತಿಗೆ ಅರ್ಜಿ ಸಲ್ಲಿಸಿದ್ದು ಅದರ ಪ್ರತಿಕ್ರಿಯೆಯನ್ನು ಕಾಯುತ್ತಿದ್ದಾರೆ.