×
Ad

ಬಲವಂತದ ಯೋಗ ಬೇಡ :ಮಿಝೋರಾಂ ರಾಜ್ಯಪಾಲ

Update: 2016-06-15 22:30 IST

ಐಜ್ವಾಲ್,ಜೂ.15: ಯೋಗ ಕುರಿತ ವಿವಾದವನ್ನು ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳಬೇಕು ಮತ್ತು ಯೋಗಾಭ್ಯಾಸ ಮಾಡುವಂತೆ ಯಾರನ್ನೂ ಬಲವಂತಗೊಳಿಸಕೂಡದು, ಅದು ಸ್ವಇಚ್ಛೆಯಿಂದಲೇ ಆಗಬೇಕು ಎಂದು ಮಿರೆರಾಂ ರಾಜ್ಯಪಾಲ ಲೆ.ಜ.ನಿರ್ಭಯ ಶರ್ಮಾ ಅವರು ಇಂದಿಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಜೂ.21ರಂದು ಆಚರಿಸಲಾಗುವ ವಿಶ್ವ ಯೋಗ ದಿನವು ಆರೋಗ್ಯಪೂರ್ಣ ಮಿರೆರಾಂ ಅಭಿಯಾನದ ಆರಂಭವೆಂದು ಪರಿಗಣಿಸಲಾಗುತ್ತದೆ ಎಂಬ ಆಶಯವನ್ನು ವ್ಯಕ್ತಪಡಿಸಿದ ಅವರು, ಯೋಗವು ಕ್ಯಾನ್ಸರ್ ಮತ್ತು ಎಚ್‌ಐವಿ/ಏಡ್ಸ್,ಮಾದಕ ದ್ರವ್ಯ ವ್ಯಸನ ಮತ್ತು ಮದ್ಯಪಾನ ಚಟ ಹಾಗೂ ರಾಜ್ಯದಲ್ಲಿಯ ಇತರ ಸಾಮಾಜಿಕ ಕೆಡುಕುಗಳ ವಿರುದ್ಧ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಬಹುದಾಗಿದೆ ಎಂದರು. ಯೋಗವೆಂದರೆ ಹಿಂದುತ್ವಕ್ಕೆ ಮತಾಂತರವೆಂದು ಅರ್ಥವಲ್ಲ ಎಂದೂ ಅವರು ಹೇಳಿದರು.

ಜೀವನಶೈಲಿಯಲ್ಲಿ ಬದಲಾವಣೆ ಮತ್ತು ವ್ಯಾಯಾಮದಿಂದ ಮಿರೆ ಯುವಜನರು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗಲು ಸಾಧ್ಯ ಎಂದರು.

 14 ಪ್ರಮುಖ ಚರ್ಚ್‌ಗಳ ಒಕ್ಕೂಟವಾಗಿರುವ ಎಂಕೆಎಚ್‌ಸಿಯು ಯೋಗಾಭ್ಯಾಸದಿಂದ ದೂರವಿರುವಂತೆ ರಾಜ್ಯದ ಕ್ರೈಸ್ತರಿಗೆ ಇತ್ತೀಚಿಗೆ ಸೂಚನೆ ನೀಡಿದೆ.

ಸರಕಾರವು ಜಾತ್ಯತೀತ ಸಂಸ್ಥೆಯಾಗಿರುವುದರಿಂದ ಅದು ಅಧಿಕೃತವಾಗಿ ಯೋಗ ದಿನವನ್ನು ಆಚರಿಸಲು ಚರ್ಚ್‌ಗಳ ಅಭ್ಯಂತರವಿಲ್ಲ. ಆದರೆ ಯೋಗವು ಕ್ರೈಸ್ತ ಧರ್ಮದ ಸಿದ್ಧಾಂತವನ್ನು ದುರ್ಬಲಗೊಳಿಸುತ್ತದೆ ಎಂದು ಚರ್ಚ್ ಭಾವಿಸಿದೆ. ಯೋಗವು ಕ್ರೈಸ್ತ ಧರ್ಮದ ಬೋಧನೆಗಳು ಮತ್ತು ನಂಬಿಕೆಗಳಿಗೆ ವಿರುದ್ಧವಾಗಿದೆ ಎಂದು ಎಂಕೆಎಚ್‌ಸಿಯ ನಾಯಕರಲ್ಲೋರ್ವರಾದ ರೆ.ಲಾಲ್ರಾಮಲಿಯಾನಾ ಪಚಾವು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News