ಕಬಾಲಿಯ ನೆರುಪ್ಪು ಡಾ ಹಾಡಿನ ಟೀಸರ್ : ಇಂಟರ್ನೆಟ್ ನಲ್ಲಿ ಬಿರುಗಾಳಿ
Update: 2016-06-17 18:03 IST
ಚೆನ್ನೈ, ಜೂ. 17 : ಸೂಪರ್ ಸ್ಟಾರ್ ರಜನೀಕಾಂತ್ ಅವರ ಅನಾರೋಗ್ಯದ ಕುರಿತ ವದಂತಿಗಳ ನಡುವೆಯೇ ಅವರ ಹೊಸ ಚಿತ್ರ ಕಬಾಲಿಯ ಹಾಡು ನೆರುಪ್ಪು ಡಾ ಟೀಸರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.
ಬಿಡುಗಡೆಯಾದ ಮೂರೇ ಗಂಟೆಗಳಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದ ಈ ಟೀಸರ್ ನಲ್ಲಿ ರಜನೀಕಾಂತ್ ಈವರೆಗಿನ ಅತ್ಯಂತ ಸ್ಟೈಲಿಶ್ ಅವತಾರದಲ್ಲಿ ಬಂದಿದ್ದು ಅದನ್ನು ಅವರ ಅಭಿಮಾನಿಗಳು ಪ್ರಚಂಡವಾಗಿಯೇ ಸ್ವಾಗತಿಸಿದ್ದಾರೆ. ಈಗಾಗಲೇ ಯೂಟೂಬ್ ನಲ್ಲಿ ಈ ಟೀಸರ್ ಅನ್ನು 36 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಚಿತ್ರದ ಮುಖ್ಯ ವಿಲನ್ ತೈವಾನ್ ನಟ ವಿನ್ಸ್ಟನ್ ಚಾವೋ ಅವರನ್ನೂ ಈ ಟೀಸರ್ ನಲ್ಲಿ ತೋರಿಸಲಾಗಿದೆ. ಈ 35 ಸೆಕೆಂಡುಗಳ ಟೀಸರ್ ನ ಕೊನೆಯಲ್ಲಿ ರಜನೀ " ಅವನಿಗೆ ಹೇಳು ನಾನು ಬಂದಿದ್ದೇನೆ , ನಾನು ವಾಪಸ್ ಬಂದಿದ್ದೇನೆ " ಎಂದು ಹೇಳುತ್ತಾರೆ. ಪಾ ರಂಜಿತ್ ನಿರ್ದೇಶನದ ಈ ಚಿತ್ರ ವಿಶ್ವಾದ್ಯಂತ ಜುಲೈ 15 ರಂದು ಬಿಡುಗಡೆಯಾಗಲಿದೆ.