ನಿವೃತ್ತ ನ್ಯಾಯಮೂರ್ತಿಯಿಂದ ಸ್ಫೋಟ ಪ್ರಕರಣಗಳ ತನಿಖೆ ಕೋರಿದ್ದ ಅರ್ಜಿ ವಜಾ
ಮುಂಬೈ, ಜೂ.17: ಮೂರು ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಕೃತಕ ಸಾಕ್ಷಗಳನ್ನು ನಿರ್ಮಿಸಲಾಗಿದೆಯೆಂದು ಆರೋಪಿಸಿ, ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ನೇತೃತ್ವದ ಸ್ವತಂತ್ರ ಆಯೋಗವೊಂದರಿಂದ ತನಿಖೆ ನಡೆಸುವಂತೆ ಕೋರಿದ್ದ ಅರ್ಜಿಯೊಂದನ್ನು ಬಾಂಬೆ ಹೈಕೋರ್ಟ್ ಇಂದು ತಳ್ಳಿ ಹಾಕಿದೆ.
2006, ಜು.11ರ ಮುಂಬೈ ಸರಣಿ ರೈಲು ಸ್ಫೋಟ, 2006ರ ಮಾಲೆಗಾಂವ್ ಸ್ಫೋಟ ಹಾಗೂ 2010ರ ಪುಣೆ ಜರ್ಮನ್ ಬೇಕರಿ ಸ್ಫೋಟ ಪ್ರಕರಣಗಳ ತನಿಖೆಗೆ ಕೋರಿ ಪತ್ರಕರ್ತ ಆಶಿಫ್ ಖೈತಾನ್ ಎಂಬವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ಮುಕ್ತಾಯಗೊಂಡ ಬಳಿಕ ಪ್ರಕರಣಗಳು ಮೇಲ್ಮನವಿ ನ್ಯಾಯಾಲಯಗಳಲ್ಲಿ (ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್) ಬಾಕಿಯಿವೆ. ಹಾಗಾಗಿ ಅವು ನ್ಯಾಯಾಂಗ ವ್ಯಾಪ್ತಿಗೆ ಸೇರಿವೆ. ಈ ಕಾರಣದಿಂದ ಅರ್ಜಿಯನ್ನು ವಜಾ ಮಾಡಲಾಗಿದೆಯೆಂದು ನ್ಯಾಯಮೂರ್ತಿ ಅಭಯ್ ಓಕಾ ನೇತೃತ್ವದ ಪೀಠವೊಂದು ಆದೇಶ ನೀಡಿದೆ.
ಈ ಅರ್ಜಿಯು ತಿಳಿಗೇಡಿತನದ್ದಾಗಿದೆ ಹಾಗೂ ತನಿಖೆ ಸಂಸ್ಥೆಗಳ ವಿರುದ್ಧದ ಆರೋಪಗಳು ಆಧಾರ ರಹಿತವಾಗಿವೆಯೆಂಬ ನೆಲೆಯಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜಾ ಠಾಕ್ರೆ ಅದನ್ನು ವಿರೋಧಿಸಿದ್ದರು.
..................................
ಕೈರಾನಾಗೆ ಹೊರಟಿದ್ದ ಸಂಗೀತ್‌ಸೋಮ್ ನೇತೃತ್ವದ ಬಿಜೆಪಿ ರ್ಯಾಲಿಗೆ ತಡೆ
ಕೈರಾನಾ, ಜೂ.17: ಉತ್ತರಪ್ರದೇಶದಲ್ಲಿ ಪರಸ್ಪರ 22 ಕಿ.ಮೀ.ಗಳಷ್ಟು ಅಂತರವಿರುವ ಮೀರತ್ ಹಾಗೂ ಸರ್ಡಾನಾ ಪಟ್ಟಣಗಳಿಂದ ಶುಕ್ರವಾರ ಸುಮಾರು 11:30ರ ವೇಳೆ ಎರಡು ರಾಜಕೀಯ ರ್ಯಾಲಿಗಳು ಆರಂಭವಾಗಿದ್ದವು. ಒಂದು ಸಂಗೀತ್ ಸೋಮ್ ನೇತೃತ್ವದ ಬಿಜೆಪಿ ರ್ಯಾಲಿಯಾಗಿದ್ದರೆ, ಇನ್ನೊಂದು ಅತುಲ್ ಪ್ರಧಾನ್ ನೇತೃತ್ವದ ಎಸ್ಪಿ ರ್ಯಾಲಿಯಾಗಿತ್ತು. ತಾವು ನಿಷೇಧಾಜ್ಞೆ ಹೇರಲಾಗಿರುವ ಕೈರಾನಾಗೆ ಪಕ್ಷದ ಕಾರ್ಯಕರ್ತರ ರ್ಯಾಲಿಯನ್ನು ಮುನ್ನಡೆಸ ಲಿದ್ದೇವೆಂದು ಇಬ್ಬರು ನಾಯಕರೂ ಹೇಳಿದ್ದರು.
ರ್ಯಾಲಿ ಅಥವಾ ‘ಯಾತ್ರೆ’ಗಳನ್ನು ನಡೆಸಲು ಅವರಿಬ್ಬರೂ ಅನುಮತಿ ಪಡೆದಿರಲಿಲ್ಲ. ಉತ್ತರ ಪ್ರದೇಶದ ಆಡಳಿತ ತಕ್ಷಣವೇ ಎರಡೂ ರ್ಯಾಲಿಗಳನ್ನು ತಡೆಯಿತು.
ನೂರಾರು ಬಿಜೆಪಿ ಕಾರ್ಯಕರ್ತರೊಂದಿಗೆ ‘ನಿರ್ಭಯಾ ಯಾತ್ರೆ’ ನಡೆಸುತ್ತಿದ್ದ ಸಂಗೀತ್ ಸೋಮ್‌ರನ್ನು ಅವರ ಸಂಸದೀಯ ಕ್ಷೇತ್ರ ಸರ್ಡಾನಾದಿಂದ ಕೇವಲ 2 ಕಿ.ಮೀ. ದೂರದಲ್ಲಿ ತಡೆಯಲಾಯಿತು.
ತಾನು ಕಾನೂನು ಪಾಲಿಸುವ ನಾಗರಿಕ ನಾಗಿರುವುದರಿಂದ ರ್ಯಾಲಿಯನ್ನು ಹಿಂದೆಗೆ ದಿದ್ದೇನೆಂದು ಸೋಮ್ ಘೋಷಿಸಿದರು. ಆದರೆ, ಕೈರಾನಾದಿಂದ ಬಲವಂತವಾಗಿ ವಲಸೆ ಹೋಗು ವಂತೆ ಮಾಡಲಾಗಿರುವ ಜನರನ್ನು ಹಿಂದಕ್ಕೆ ಕರೆಸಿರುವುದನ್ನು 20 ದಿನಗಳೊಳಗಾಗಿ ಖಚಿತ ಪಡಿಸುವಂತೆ ಉತ್ತರಪ್ರದೇಶ ಸರಕಾರಕ್ಕೆ ಅವರು ಗಡುವನ್ನು ವಿಧಿಸಿದರು. ಇಲ್ಲದಿದ್ದಲ್ಲಿ ತಾನು ಹಾಗೂ ಬೆಂಬಲಿಗರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತೇವೆಂದು ಸೋಮ್ ಎಚ್ಚರಿಕೆ ನೀಡಿದರು.
60 ಜನರ ಸಾವಿಗೆ ಕಾರಣವಾದ ಮುಝಫ್ಫರ್‌ನಗರ ಹಿಂಸಾಚಾರದ ವೇಳೆ ಉದ್ವಿಗ್ನಕಾರಿ ವೀಡಿಯೊಗಳನ್ನು ಹರಡಿದ್ದುದಕ್ಕಾಗಿ 2013ರಲ್ಲಿ ಬಂಧಿಸಲ್ಪಟ್ಟಿದ್ದ ಅವರು, ಈಗ ಜಾಮೀನಿನ ಮೇಲೆ ಹೊರಗಿದ್ದಾರೆ.
ಕೈರಾನಾದಿಂದ ಸುಮಾರು 400 ಮಂದಿ, ದಾಳಿಗಳು ಹಾಗೂ ಸುಲಿಗೆ ಬೆದರಿಕೆಗಳಿಂದಾಗಿ ವಲಸೆ ಹೋಗಿದ್ದಾರೆಂದು ಇನ್ನೊಬ್ಬ ಬಿಜೆಪಿ ಸಂಸದ ಹುಕುಂ ಸಿಂಗ್ ಆರೋಪಿಸಿದ ಬಳಿಕ ಅಲ್ಲಿ ಉದ್ವಿಗ್ನತೆ ನೆಲೆಸಿದೆ. ಅದನ್ನು, ಮುಸ್ಲಿಮ್ ಪ್ರಾಬಲ್ಯದ ಕೈರಾನಾದಿಂದ ‘ಹಿಂದೂಗಳ ಗಡೀಪಾರು’ ಎಂದು ಅವು ವ್ಯಾಖ್ಯಾನಿಸಿದ್ದರು. ಆದರೆ ಬಳಿಕ, ಇದು ಕೋಮುವಾದಿ ಕೃತ್ಯವಲ್ಲ, ಕಾನೂನು-ಸುವ್ಯವಸ್ಥೆಯ ಸಮಸ್ಯೆಯೆಂದು ಸಿಂಗ್ ಹೇಳಿದ್ದರು.