ರಘುರಾಮ್ ರಾಜನ್ ನಿರ್ಗಮನಕ್ಕೆ ಚಾತಕ ಪಕ್ಷಿಗಳಂತೆ ಕಾಯುತ್ತಿರುವವರು ಯಾರು?
ಹೊಸದಿಲ್ಲಿ, ಜೂ.20: ಇಡೀ ವಿಶ್ವದ ಜಾಗತಿಕ ಕುಸಿತವನ್ನು ಮೆಟ್ಟಿನಿಂತು ಭಾರತದ ಆರ್ಥಿಕತೆ ದೃಢವಾಗಿ ಮುನ್ನಡೆಯಲು ಪ್ರೇರಣಾಶಕ್ತಿ ಎನಿಸಿದ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಅವರ ನಿರ್ಗಮನವನ್ನು ಎದುರು ನೋಡುತ್ತಾ ಸಂತೋಷಪಡುವ ದೊಡ್ಡ ವರ್ಗವೇ ಇದೆ ಎಂದರೆ ಅಚ್ಚರಿಯಾಗಬಹುದಲ್ಲವೇ? ಇವರನ್ನು ಆರ್ಥಿಕ ವ್ಯವಸ್ಥೆಯ ಖಳನಾಯಕ ಎಂದು ಪರಿಗಣಿಸಿದ ಕೆಲ ವ್ಯಕ್ತಿಗಳು, ಕಾರ್ಪೊರೇಟ್ ಸಂಸ್ಥೆಗಳು, ಬ್ಯಾಂಕರ್‌ಗಳು ಸೇರಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕ ಚಾಣಾಕ್ಷತನದಿಂದ ಮೆಚ್ಚುಗೆ ಪಡೆದ ರಾಜನ್, ತಮ್ಮ ದೇಶಕ್ಕೆ ಮರಳಿದ ಬಳಿಕ ಮಾತ್ರ ಆ ಗೌರವ ಪಡೆಯಲು ಸಾಧ್ಯವಾಗಲಿಲ್ಲ. ರಾಜನ್ ನಿರ್ಗಮನವನ್ನು ಸಂ್ರಮಿಸುವವರ ಪಟ್ಟಿ ಇಲ್ಲಿದೆ ನೋಡಿ.
1. ಬಂಡವಾಳಶಾಹಿಗಳು
ಮೊದಲ ದಿನವೇ ಆರ್‌ಬಿಐ ಗವರ್ನರ್, ಆರ್ಥಿಕ ವ್ಯವಸ್ಥೆಯಲ್ಲಿ ನೀತಿನಿಷ್ಠೆಗಳಿಲ್ಲದ, ನಿರ್ಲಜ್ಜ ಬಂಡವಾಳಶಾಹಿಗಳ ವಿರುದ್ಧ ಚಾಟಿ ಬೀಸಿದ್ದರು. ದೇಶದ ಆರ್ಥಿಕತೆಯನ್ನು ಹಾಳುಮಾಡುವ ಯಾರಿಗೂ ಇಲ್ಲಿ ವ್ಯವಹಾರ ಮುನ್ನಡೆಸುವ ಹಕ್ಕು ಇಲ್ಲ ಎಂದು ಎಚ್ಚರಿಕೆ ನೀಡಿದ್ದರು.
2. ಮೂಲಸೌಕರ್ಯ ಕಂಪೆನಿಗಳು
ಪಡೆದ ಸಾಲವನ್ನು ಮರಳಿಸದೇ, ಸಾಲ ಮರುಹೊಂದಾಣಿಕೆ ದಂಧೆಯಲ್ಲೇ ನಿರತವಾಗಿದ್ದ ಇಂಥ ಕಂಪೆನಿಗಳಿಗೆ ಇದ್ದ ಸಿಡಿಆರ್ ಪದ್ಧತಿಗೆ ರಾಜನ್ ಮಂಗಳ ಹಾಡಿದ್ದರು.
3. ಉಕ್ಕು ಘಟಕಗಳು
ಒಂದು ವರ್ಷ ಹಿಂದೆ ಆರ್‌ಬಿಐ ಉಕ್ಕು ವಲಯದ ಮೇಲೆ ಕೆಂಪು ಬಾವುಟ ಪ್ರದರ್ಶಿಸಿತು. ಈ ಘಟಕ ಹಣಕಾಸು ವ್ಯವಸ್ಥೆಗೆ ಅತ್ಯಂತ ಅಪಾಯಕಾರಿ ವಲಯ ಎಂದು ಬಣ್ಣಿಸಿದ್ದರು. ಆಮದು ಸುಂಕದ ಹೆಸರಿನಲ್ಲಿ ಅವರನ್ನು ರಕ್ಷಿಸುವ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಗ್ರಾಹಕರಿಗೆ ತೊಂದರೆಯಾಗುತ್ತದೆ ಎನ್ನುವುದು ಅವರ ವಾದವಾಗಿತ್ತು. ಕಡಿಮೆ ಬಡ್ಡಿದರದ ಬೇಡಿಕೆಗೆ ರಾಜನ್ ಬಗ್ಗಲಿಲ್ಲ.
4. ಸಾರ್ವಜನಿಕ ವಲಯದ ಬ್ಯಾಂಕ್‌ಗಳು
ಈ ಯಾವ ವಲಯಗಳೂ ಆರ್‌ಬಿಐ ಗವರ್ನರ್ ಅವರನ್ನು ಬಹಿರಂಗವಾಗಿ ಟೀಕಿಸದಿದ್ದರೂ, ತೆರೆಮರೆಯ ಮಸಲತ್ತು ನಡೆಸುತ್ತಲೇ ಇದ್ದರು. ಆದರೆ ಬ್ಯಾಂಕ್ ದಾಖಲೆಗಳನ್ನು ಸ್ವಚ್ಛಗೊಳಿಸುವ ರಾಜನ್ ಆಂದೋಲನ ಮಾತ್ರ ಅವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿತು. ಬಡ್ಡಿದರ ವರ್ಗಾವಣೆ ವಿಚಾರದಲ್ಲೂ ಬ್ಯಾಂಕಿಂಗ್ ವಲಯದ ಒತ್ತಡಕ್ಕೆ ಜಗ್ಗದೇ, ಸಾಲ ನೀಡಿಕೆ ದರ ಕಡಿತಗೊಳಿಸಲು ಸೂಚಿಸಿದರು.