ಕೇಜ್ರಿವಾಲ್ ಮನೆಮುಂದೆ ಧರಣಿ ಕುಳಿತ ಸುಬ್ರಮಣಿಯನ್ ಸ್ವಾಮಿ
ಹೊಸದಿಲ್ಲಿ.ಜೂನ್ 20: ಬಿಜೆಪಿಯ ರಾಜ್ಯ ಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರ ಮನೆಯ ಹೊರಗೆ ಬಿಜೆಪಿ ಸಂಸದ ಮಹೇಶ್‌ಗಿರಿಯವರೊಂದಿಗೆ ಸತ್ಯಾಗ್ರಹ ಕೂತಿದ್ದಾರೆ. ಸತ್ಯಾಗ್ರಹಕ್ಕಾಗಿ ಸ್ವಾಮಿಯ ಜೊತೆ ಬಿಜೆಪಿ ಸಂಸದ ವಿಜಯ್ ಗೋಯಲ್, ಮನೋಜ್ ತಿವಾರಿ, ಕೂಡಾ ಮಹೇಶ್‌ಗಿರಿಯೊಂದಿಗೆ ಬಂದಿದ್ದರು. ಮುಖ್ಯಮಂತ್ರಿಯ ಮನೆಯ ಹೊರಗೆ ಮಾತಾಡಿದ ಸ್ವಾಮಿ ರಘುರಾಮ್ ರಾಜನ್‌ರ ನಂತರ ಕೇಜ್ರಿವಾಲ್‌ರನ್ನು ಕೆಳಗಿಳಿಸುವ ಕುರಿತು ತಾನು ಆದ್ಯತೆ ನೀಡಲಿದ್ದೇನೆ ಎಂದು ಘೋಷಿಸಿದ್ದಾರೆ.
" ತನ್ನ ಇಡೀ ಜೀವನದಲ್ಲಿ ಅವರು(ಕೇಜ್ರಿವಾಲ್)ಫ್ರಾಡ್ ಆಗಿದ್ದಾರೆ. ಅವರು ದಿಲ್ಲಿ ಐಐಟಿಯ ಬುದ್ಧಿವಂತ ವಿದ್ಯಾರ್ಥಿಯಾಗಿದ್ದೆ ಎಂದು ಹೇಳುತ್ತಾರೆ.ಆದರೆ ನನ್ನ ಬಳಿ ಅವರು ಐಐಟಿಗೆ ಹೇಗೆ ಪ್ರವೇಶ ಪಡೆದುಕೊಂಡಿದ್ದಾರೆ ಎಂದು ದಾಖಲೆ ಇದೆ. ಅದನ್ನುಪತ್ರಿಕಾಗೋಷ್ಠಿಯಲ್ಲಿ ಬಹಿರಂಗಗೊಳಿಸಲಿದ್ದೇನೆ. ಈವರೆಗೂ ತಾನು ರಾಜನ್‌ರ ಹಿಂದೆ ಇದ್ದೆ, ಅವರು ಹೋಗಿಯಾಗಿದೆ" ಎಂದು ಸ್ವಾಮಿ ಹೇಳಿದ್ದಾರೆ.
ದಿಲ್ಲಿ ಬಿಜೆಪಿ ಸಂಸದ ಮಹೇಶ್ ಗಿರಿ ರವಿವಾರದಿಂದ ಮುಖ್ಯಮಂತ್ರಿ ಕೇಜ್ರಿವಾಲ್ ಮನೆಯ ಹೊರಗೆ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ಎಂಎಂಖಾನ್ ಹತ್ಯೆಯಲ್ಲಿ ತನ್ನ ಹೆಸರನ್ನು ಹೇಳಿದ್ದಕ್ಕಾಗಿ ಕೇಜ್ರಿವಾಲ್ ಕ್ಷಮೆ ಯಾಚಿಸಬೇಕೆಂದು ಗಿರಿ ಬೇಡಿಕೆ ಇಟ್ಟು ಪ್ರತಿಭಟನೆಗಿಳಿದಿದ್ದಾರೆ. ಎಂಎಂ ಖಾನ್ ದಿಲ್ಲಿ ಮುನ್ಸಿಪಲ್ ಕೌನ್ಸಿಲ್ ಅಧಿಕಾರಿಯಾಗಿದ್ದು ಅವರನ್ನು ಹತ್ಯೆಗೈಯ್ಯಲಾಗಿತ್ತು. ಕೇಜ್ರಿವಾಲ್ ಈ ಹತ್ಯೆಯಲ್ಲಿ ಗಿರಿ ಶಾಮೀಲಾಗಿದ್ದಾರೆಂದು ಹೇಳಿಕೆ ನೀಡಿದ್ದರು.
ಕೇಜ್ರಿವಾಲ್ ಮೊದಲು ಪತ್ರ ಬರೆದು ಮಹೇಶ್ ಗಿರಿಯನ್ನು ದಿಲ್ಲಿ ಗವರ್ನರ್ ನಜೀಬ್ ಜಂಗ್ ರಕ್ಷಿಸುವ ಯತ್ನ ನಡೆಸುದ್ದು, ಬಿಜೆಪಿ ಒತ್ತಡದಿಂದಾಗಿ ಪೊಲೀಸರು ತನಿಖೆ ನಡೆಸುತ್ತಿಲ್ಲ ಎಂದು ಹೇಳಿದ್ದರು. ತಾನು ಮತ್ತು ಗಿರಿಯವರಿಗೆ ಕೇಜ್ರಿವಾಲ್ ಕ್ಷಮೆ ಕೋರುವವರೆಗೆ ಸತ್ಯಾಗ್ರಹವನ್ನು ಕೊನೆಗೊಳಿಸುವುದಿಲ್ಲ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.ಸೋಮವಾರದಂದು ಕೇಜ್ರಿವಾಲ್, ಮಹೇಶ್‌ಗಿರಿಯನ್ನು ಬಂಧಿಸಿ ಪ್ರಕರಣದ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ಬಿಜೆಪಿ ಒತ್ತಡ ಹಾಕಿದ್ದರಿಂದ ಪೊಲೀಸರು ತನಿಖೆ ನಡೆಸುತ್ತಿಲ್ಲ ಎಂದೂ ಕೇಜ್ರಿವಾಲ್ ಆರೋಪಿಸಿದ್ದಾರೆ.