ಬಾಂಬ್ ತಯಾರಿಕೆಯಲ್ಲಿ ಹಣ ಹೂಡಿದ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ!
ಹೊಸದಿಲ್ಲಿ, ಜೂ.20: ಬಾಂಬ್ ತಯಾರಿಕಾ ಕಂಪೆನಿಗಳಲ್ಲಿ ಕೋಟ್ಯಂತರ ಡಾಲರ್ ಹೂಡಿಕೆ ಮಾಡಿರುವ ಕಂಪೆನಿಗಳ ಪಟ್ಟಿಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಸೇರಿರುವುದು ದೇಶಕ್ಕೆ ಮುಜುಗರ ತಂದಿದೆ. ಜಾಗತಿಕ ಮಟ್ಟದಲ್ಲಿ ಬಾಂಬ್ ತಯಾರಿಕಾ ಕಂಪೆನಿಗಳಲ್ಲಿ ಹೂಡಿಕೆ ಮಾಡಿರುವ 158 ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳ ಹಾಲ್ ಆಫ್ ಶೇಮ್ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಎಸ್‌ಬಿಐ ಹೆಸರಿದೆ.
ಇಡೀ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಬ್ಯಾಂಕ್ ಎಂಬ ಕುಖ್ಯಾತಿ ಈ ಸರಕಾರಿ ಸ್ವಾಮ್ಯದ ಬ್ಯಾಂಕಿನದ್ದು. ಜೆಪಿ ಮಾರ್ಗನ್, ಬರ್ಕ್ ಲೇಸ್, ಬ್ಯಾಂಕ್ ಆಫ್ ಅಮೆರಿಕ ಹಾಗೂ ಕ್ರೆಡಿಟ್ ಸೂಸೈಯಂಥ ಬ್ಯಾಂಕಿಂಗ್ ದಿಗ್ಗಜ ಸಂಸ್ಥೆಗಳು, 28 ಶತಕೋಟಿ ಡಾಲರ್ ಹಣ ಹೂಡಿಕೆ ಮಾಡಿರುವುದು ಪಟ್ಟಿಯಿಂದ ಬಹಿರಂಗವಾಗಿದೆ. 2012ರ ಜೂನ್‌ನಿಂದ 2016ರ ಎಪ್ರಿಲ್‌ವರೆಗೆ ಈ ಹಣ ಹೂಡಿಕೆ ಮಾಡಲಾಗಿದೆ ಎಂದು ಹಾಲೆಂಡ್‌ನ ಪಿಎಎಕ್ಸ್ ಎಂಬ ಸಂಸ್ಥೆ ಬಿಡುಗಡೆ ಮಾಡಿದ ವರದಿಯಲ್ಲಿ ವಿವರಿಸಲಾಗಿದೆ.
ಭಾರತ ಹಾಗೂ ಅಮೆರಿಕದ ಸರಕಾರಿ ಸ್ವಾಮ್ಯದ ಕಂಪೆನಿಗಳೇ ಅಂತಾರಾಷ್ಟ್ರೀಯ ನಿಷೇಧವನ್ನು ಉಲ್ಲಂಘಿಸಿ, ಈ ಹೂಡಿಕೆ ಮಾಡಿವೆ ಎಂದು 275 ಪುಟಗಳ ಈ ವರದಿ ಹೇಳಿದೆ. ಬಾಂಬ್ ತಯಾರಿಕಾ ಕಂಪೆನಿಗಳಲ್ಲಿ ಹೂಡಿಕೆ ಮಾಡುವುದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಷೇಧಿಸುವ ಒಪ್ಪಂದಕ್ಕೆ 94 ದೇಶಗಳು 2008ರಲ್ಲಿ ಸಹಿ ಮಾಡಿದ್ದು, ಅದು 2010ರ ಆಗಸ್ಟ್ 1ರಿಂದ ಜಾರಿಗೆ ಬಂದಿದೆ. ಇದನ್ನು ಉಲ್ಲಂಘಿಸಿ, ಹೂಡಿಕೆ ಮಾಡಿರುವ ಕಂಪೆನಿಗಳಲ್ಲಿ ಬಹುತೇಕ ಅಮೆರಿಕನ್ ಕಂಪೆನಿಗಳಾಗಿದ್ದು, ಅಮೆರಿಕದ 74 ಬ್ಯಾಂಕ್‌ಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರೆ, ಚೀನಾ (29) ಹಾಗೂ ದಕ್ಷಿಣ ಕೊರಿಯಾ (26) ನಂತರದ ಸ್ಥಾನಗಳಲ್ಲಿವೆ.