×
Ad

ಗುಜರಾತ್: ಬೌದ್ಧ ವಿಹಾರವನ್ನೇ ಹೋಲುವ ಕಟ್ಟಡದ ಉತ್ಖನನ

Update: 2016-06-20 23:38 IST

 ಅಹ್ಮದಾಬಾದ್,ಜೂ.20: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು(ಎಎಸ್‌ಐ) ಗುಜರಾತಿನ ಮೆಹ್ಸಾನಾ ಜಿಲ್ಲೆಯ ವಡನಗರದಲ್ಲಿ ಬೌದ್ಧ ವಿಹಾರವನ್ನೇ ಹೋಲುವ ಪುರಾತನ ಕಟ್ಟಡವೊಂದನ್ನು ಉತ್ಖನನಗೊಳಿಸಿದೆ. ಈ ಶೋಧನೆಯು ಈ ಪ್ರದೇಶವು ಪ್ರಮುಖ ಬೌದ್ಧ ಕೇಂದ್ರವಾಗಿತ್ತು ಎಂಬ ವಾದಕ್ಕೆ ಇನ್ನಷ್ಟು ಒತ್ತು ನೀಡಬಹುದು.

ಇತ್ತೀಚಿನ ಉತ್ಖನನದಲ್ಲಿ ಬೌದ್ಧ ವಿಹಾರವನ್ನು ಹೋಲುವಂತಹ ರಚನೆಗಳು ಕಂಡು ಬಂದಿವೆ. ಇನ್ನಷ್ಟು ಉತ್ಖನಗಳು ಮಾತ್ರವೇ ಈ ರಚನೆಗಳು ಬೌದ್ಧ ವಿಹಾರದ ಭಾಗವಾಗಿದ್ದವೇ ಅಥವಾ ಸ್ವರೂಪದಲ್ಲಿ ಜಾತ್ಯತೀತವಾಗಿದ್ದವೇ ಎನ್ನುವುದನ್ನು ಖಚಿತಪಡಿಸಲು ನೆರವಾಗಬಹುದು ಎಂದು ಎಎಸ್‌ಐನ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞೆ(ಪಶ್ಚಿಮ ವಲಯ) ಮಧುಲಿಕಾ ಸಾಮಂತ ಅವರು ಹೇಳಿದರು.
ಆದರೆ ಈ ತಾಣದಲ್ಲಿ ಸ್ಥಳೀಯರು ಕಾಂಕ್ರೀಟ್ ಮನೆಗಳನ್ನು ನಿರ್ಮಿಸಿರುವುದರಿಂದ ಇನ್ನಷ್ಟು ಉತ್ಖನನ ಸದ್ಯಕ್ಕೆ ಸಾಧ್ಯವಿಲ್ಲ. ಈಗ ಪತ್ತೆಯಾಗಿರುವ ರಚನೆಗಳು ಯಾವ ಧರ್ಮದೊಂದಿಗೆ ಗುರುತಿಸಿಕೊಂಡಿದ್ದವು ಎನ್ನುವುದನ್ನು ಖಚಿತಪಡಿಸಲು ನಮಗೆ ಸಾಧ್ಯವಾಗಿಲ್ಲ, ಆದರೆ ಅದು ಬೌದ್ಧ ವಿಹಾರವಾಗಿರಬೇಕೆಂದು ನಾವು ಭಾವಿಸಿದ್ದೇವೆ ಎಂದರು.
ವಡನಗರದವರಾಗಿರುವ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ಸ್ವೀಕರಿಸಿದ ನಂತರ ಜನವರಿ 2015 ಮತ್ತು ಮೇ 2016 ಹೀಗೆ ಎರಡು ಹಂತಗಳಲ್ಲಿ ಇಲ್ಲಿ ಉತ್ಖನನ ನಡೆಸಲಾಗಿತ್ತು.
ಏಳನೇ ಶತಮಾನದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಚೀನಿ ಪ್ರವಾಸಿ ಹ್ಯುಯೆನ್ ತ್ಸಾಂಗ್ ಒನಂತೊಪುಲೊ ಅಥವಾ ಆನಂದಪುರದಲ್ಲಿ ಹತ್ತು ಬೌದ್ಧ ವಿಹಾರಗಳಿದ್ದವು ಎಂದು ತನ್ನ ಬರಹಗಳಲ್ಲಿ ಉಲ್ಲೇಖಿಸಿದ್ದ. ಇವೆರಡೂ ವಡನಗರದ ಹಿಂದಿನ ಹೆಸರುಗಳಾಗಿವೆ.
3ನೇ ಮತ್ತು 9ನೇ ಶತಮಾನಗಳ ನಡುವೆ ವಡನಗರದಲ್ಲಿ ಬೌದ್ಧ ಧರ್ಮ ಹುಲುಸಾಗಿ ನೆಲೆಯೂರಿದ್ದ ಸಾಧ್ಯತೆಗಳಿವೆ ಎಂದು ಸಾಮಂತ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News