ಜಮ್ಮು-ಕಾಶ್ಮೀರ: 100ಕ್ಕೂ ಅಧಿಕ ಭಯೋತ್ಪಾದಕರು, 47 ಯೋಧರು ಬಲಿ
ಶ್ರೀನಗರ, ಜೂ.20: ಕಳೆದ ವರ್ಷದ ಜ.15ರ ನಂತರದ 12 ತಿಂಗಳುಗಳಲ್ಲಿ 47 ಮಂದಿ ಭದ್ರತಾ ಸಿಬ್ಬಂದಿ ಸಹಿತ 190ಕ್ಕೂ ಹೆಚ್ಚು ಮಂದಿ ಹಾಗೂ 108 ಮಂದಿ ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ.
ಸುಮಾರು 800 ಮಂದಿಯನ್ನು ಬಂಧಿಸಲಾಗಿದೆ. ನಾಲ್ಕು ಮ್ಯಾಜಿಸ್ಟೀರಿಯಲ್ ತನಿಖೆಗಳಿಗೆ ಈ ಅವಧಿಯಲ್ಲಿ ಆದೇಶಿಸಲಾಗಿದೆಯೆಂದು ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ವಿಪಕ್ಷ ನ್ಯಾಶನಲ್ ಕಾನ್ಪರೆನ್ಸ್(ಎನ್‌ಸಿ) ನಾಯಕ ಎ.ಎಂ. ಸಾಗರ್‌ರ ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಲಿಖಿತ ಉತ್ತರದಲ್ಲಿ ತಿಳಿಸಿದರು.
2015ರ ಜ.15ರಿಂದ 2016ರ ಜ.15ರ ನಡುವೆ ಒಟ್ಟು 146 ಭಯೋತ್ಪಾದನಾ ಸಂಬಂಧಿ ಘಟನೆಗಳು ನಡೆದಿವೆ. 108 ಮಂದಿ ಭಯೋತ್ಪಾದಕರು, 39 ಭದ್ರತಾ ಸಿಬ್ಬಂದಿ ಹಾಗೂ 22 ಮಂದಿ ನಾಗರಿಕರ ಸಹಿತ 169 ಮಂದಿ ಬಲಿಯಾಗಿದ್ದಾರೆಂದು ಗೃಹ ಸಚಿವೆಯೂ ಆಗಿರುವ ಮುಫ್ತಿ ವಿವರಿಸಿದರು.
ರಾಜ್ಯದಲ್ಲಿ ಈ ಅವಧಿಯಲ್ಲಿ ಗಡಿಯಲ್ಲಿ ಗುಂಡು ದಾಳಿಯ 181 ಘಟನೆಗಳು ವರದಿಯಾಗಿವೆ. ಅವುಗಳಲ್ಲಿ 8 ಮಂದಿ ಭದ್ರತಾ ಯೋಧರು ಸಹಿತ 22 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 13 ಮಂದಿ ಯೋಧರು ಸಹಿತ 75 ಮಂದಿ ಗಾಯಗೊಂಡಿದ್ದಾರೆಂದು ಅವರು ಹೇಳಿದರು.
ದಕ್ಷಿಣ ಕಾಶ್ಮೀರದ 4 ಜಿಲ್ಲೆಗಳಾದ ಅನಂತನಾಗ್, ಪುಲಾಮ, ಕುಲ್ಗಾಂವ್ ಹಾಗೂ ಶೋಪಿಯಾನ್‌ಗಳಲ್ಲಿ ಅತೀ ಹೆಚ್ಚು ಸಂಖ್ಯೆಯ ಭಯೋತ್ಪಾದಕ ದಾಳಿಗಳು(61) ನಡೆದಿದ್ದು, 12 ಮಂದಿ ಯೋಧರು ಹಾಗೂ 34 ಮಂದಿ ಭಯೋತ್ಪಾದಕರ ಸಹಿತ 54 ಮಂದಿ ಸಾವಿಗೀಡಾಗಿದ್ದಾರೆ. ಆದಾಗ್ಯೂ, ಪಾಕ್ ಆಕ್ರಮಿತ ಕಾಶ್ಮೀರದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಉತ್ತರ ಕಾಶ್ಮೀರದ ಕುಪ್ವಾರ, ಬಾರಾಮುಲ್ಲಾ ಹಾಗೂ ಬಂಡಿಪೊರ ಜಿಲ್ಲೆಗಳಲ್ಲಿ ದಕ್ಷಿಣ ಕಾಶ್ಮೀರಕ್ಕೆ ಹೋಲಿಸಿದರೆ ಇಂತಹ ಭಯೋತ್ಪಾದಕ ದಾಳಿಗಳಲ್ಲಿ ಸುಮಾರು ಎರಡು ಪಟ್ಟು ಸಾವುಗಳು ಸಂಭವಿಸಿವೆಯೆಂದು ಮೆಹಬೂಬ ಮಾಹಿತಿ ನೀಡಿದರು. ಉತ್ತರಕಾಶ್ಮೀರದ ಜಿಲ್ಲೆಗಳಲ್ಲಿ ಒಟ್ಟು 57 ಭಯೋತ್ಪಾದಕ ದಾಳಿಗಳು ನಡೆದಿದ್ದು, 60 ಮಂದಿ ಭಯೋತ್ಪಾದಕರು ಹಾಗೂ 21 ಮಂದಿ ಜವಾನರ ಸಹಿತ 92 ಮಂದಿ ಬಲಿಯಾಗಿದ್ದಾರೆಂದ ಅವರು, ನಿಯಂತ್ರಣ ರೇಖೆಯಲ್ಲಿ ಗಡಿ ನುಸುಳುವ ಪ್ರಯತ್ನದಲ್ಲಿ ಹತರಾದ ಭಯೋತ್ಪಾದಕರ ಸಂಖ್ಯೆಯನ್ನು ತಿಳಿಸಿಲ್ಲ.
ಬೇಸಗೆಯ ರಾಜಧಾನಿ ಶ್ರೀನಗರದಲ್ಲಿ 15 ಭಯೋತ್ಪಾದಕ ದಾಳಿಗಳು ದಾಖಲಾಗಿದ್ದು ಒಬ್ಬ ನಾಗರಿಕ ಮೃತಪಟ್ಟಿದ್ದಾನೆ. ಆದರೆ, ಚಳಿಗಾಲದ ರಾಜಧಾನಿ ಜಮ್ಮು ಸೇರಿದಂತೆ ರಾಜ್ಯದ ಒಟ್ಟು 22ರಲ್ಲಿ 7 ಜಿಲ್ಲೆಗಳಲ್ಲಿ ಇಂತಹ ಹಿಂಸಾಚಾರ ನಡೆದಿಲ್ಲವೆಂದು ಮುಫ್ತಿ ಹೇಳಿದರು.