×
Ad

ಉದ್ದೇಶಪೂರ್ವಕ ತೆರಿಗೆ ಬಾಕಿದಾರರನ್ನು ಬಂಧಿಸಲು ಅಧಿಕಾರಿಗಳಿಗೆ ಆದಾಯ ತೆರಿಗೆ ಇಲಾಖೆಯ ಸೂಚನೆ

Update: 2016-06-21 19:41 IST

ಹೊಸದಿಲ್ಲಿ,ಜೂ.21: ‘ನೇಮ್ ಆ್ಯಂಡ್ ಶೇಮ್’ ಅಭಿಯಾನದಡಿ ದೊಡ್ಡ ಪ್ರಮಾಣದಲ್ಲಿ ತೆರಿಗೆಯನ್ನು ಬಾಕಿಯುಳಿಸಿಕೊಂಡವರ ಮಾನವನ್ನು ಹರಾಜು ಹಾಕುವ ತನ್ನ ಕಾರ್ಯತಂತ್ರಕ್ಕನುಗುಣವಾಗಿ ಆದಾಯ ತೆರಿಗೆ ಇಲಾಖೆಯು ಸರಕಾರಕ್ಕೆ 1,500 ಕೋ.ರೂ.ಗೂ ಅಧಿಕ ತೆರಿಗೆಯನ್ನು ನಾಮ ಹಾಕಿರುವ 31 ತೆರಿಗೆ ಬಾಕಿದಾರರ ಪಟ್ಟಿಯೊಂದನ್ನು ಮಂಗಳವಾರ ಬಹಿರಂಗಗೊಳಿಸಿದೆ. ಇದೇ ವೇಳೆ ತೆರಿಗೆ ಬಾಕಿದಾರರನ್ನು ಬಂಧಿಸಲು,ಅವರನ್ನು ವಶಕ್ಕೆ ತೆಗೆದುಕೊಳ್ಳಲು ಮತ್ತು ಆರೋಪಿಗಳ ಜಪ್ತಿ ಮಾಡಿದ ಆಸ್ತಿಗಳನ್ನು ಹರಾಜು ಹಾಕಲು ಅವಕಾಶವಿದ್ದು, ಅದನ್ನು ಬಳಸಿಕೊಳ್ಳಲು ಹಿಂಜರಿಯದಂತೆ ಇಲಾಖೆಯು ತನ್ನ ಅಧಿಕಾರಿಗಳಿಗೆ ಸೂಚಿಸಿದೆ.

ಹೈದರಾಬಾದ್‌ನ ಟೋಟೆಮ್ ಇನ್‌ಫ್ರಾಸ್ಟ್ರಕ್ಚರ್(401.64 ಕೋ.ರೂ.), ಪುಣೆಯ ಪಥೇಜಾ ಬ್ರದರ್ಸ್ ಫೋರ್ಜಿಂಗ್ ಆ್ಯಂಡ್ ಆಟೋ ಪಾರ್ಟ್ಸ್ ಮ್ಯಾನ್ಯುಫ್ಯಾಕ್ಚರಿಂಗ್ ಕಂ.(224.05 ಕೋ.ರೂ.), ಹೈದರಾಬಾದ್‌ನ ರಾಯಲ್ ಫ್ಯಾಬ್ರಿಕ್ಸ್(158.94 ಕೋ.ರೂ.) ಮತ್ತು ಮುಂಬೈನ ಹೋಮ್ ಟ್ರೇಡ್(72.18 ಕೋ.ರೂ.) ಇವು ದೊಡ್ಡ ಪ್ರಮಾಣದಲ್ಲಿ ಆದಾಯ ತೆರಿಗೆ/ಕಾರ್ಪೊರೇಟ್ ತೆರಿಗೆಯನ್ನು ಬಾಕಿಯುಳಿಸಿಕೊಂಡಿರುವ ಪಟ್ಟಿಯಲ್ಲಿನ ಕೆಲವು ಹೆಸರುಗಳಾಗಿವೆ.

‘ತೆರಿಗೆ ಬಾಕಿಗಳನ್ನು ತಕ್ಷಣವೇ ಪಾವತಿಸುವಂತೆ ’ಪಟ್ಟಿಯಲ್ಲಿ ಉಲ್ಲೇಖಿಸಿರುವ ತೆರಿಗೆ ಬಾಕಿದಾರರಿಗೆ ಸೂಚಿಸಿರುವ ಆದಾಯ ತೆರಿಗೆ ಇಲಾಖೆಯು ಈ ತೆರಿಗೆದಾತರನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ ಅಥವಾ ತೆರಿಗೆ ವಸೂಲಾತಿ ಮಾಡುವಷ್ಟು ಆಸ್ತಿಗಳನ್ನು ಅವರು ಹೊಂದಿಲ್ಲ ಎಂದು ಹೇಳಿದೆ.

ಅಂದ ಹಾಗೆ ಇದು ಇಲಾಖೆಯು ಒಂದು ತಿಂಗಳ ಅವಧಿಯಲ್ಲಿ ಬಿಡುಗಡೆಗೊಳಿಸಿರುವ ಇಂತಹ ಎರಡನೇ ಪಟ್ಟಿಯಾಗಿದೆ. ಹಿಂದಿನ ಪಟ್ಟಿಯು ಸರಕಾರಕ್ಕೆ 500 ಕೋ.ರೂ.ಗೂ ಅಧಿಕ ತೆರಿಗೆಯನ್ನು ಬಾಕಿಯುಳಿಸಿಕೊಂಡಿರುವ 18 ಕಂಪನಿಗಳ ಹೆಸರುಗಳನ್ನು ಒಳಗೊಂಡಿತ್ತು.

ಸರಕಾರವು ಸಂಸತ್ತಿನಲ್ಲಿ ನೀಡಿರುವ ಹೇಳಿಕೆಯೊಂದರಂತೆ 2014,ಡಿಸೆಂಬರ್‌ವರೆಗೆ ಸರಕಾರಕ್ಕೆ ಬಾಕಿಯಿದ್ದ ಕಾರ್ಪೊರೇಟ್ ತೆರಿಗೆ ಮೊತ್ತ 3,11,080 ಕೋ.ರೂ.ಗಳಾಗಿದ್ದವು.

ಪ್ರಸಕ್ತ ಹಣಕಾಸು ವರ್ಷಕ್ಕಾಗಿ ಕಾರ್ಯತಂತ್ರವೊಂದನ್ನು ರೂಪಿಸಿರುವ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ)ಯು, ತೆರಿಗೆ ಬಾಕಿದಾರರ ವಿರುದ್ಧ ಕಠಿಣ ಕ್ರಮಕ್ಕಾಗಿ ಈವರೆಗೆ ಅಪರೂಪಕ್ಕೆ ಬಳಕೆಯಾಗಿರುವ ಆದಾಯ ತೆರಿಗೆ ಕಾಯ್ದೆಯ ಕಲಂ 276ಸಿ(2) ಅಡಿ ದತ್ತ ಅಧಿಕಾರವನ್ನು ಪ್ರಯೋಗಿಸುವಂತೆ ಆದಾಯ ತೆರಿಗೆ ಇಲಾಖೆಗೆ ನಿರ್ದೇಶ ನೀಡಿದೆ. ಇದರನ್ವಯ ತೆರಿಗೆ ಬಾಕಿದಾರರಿಗೆ ಮೂರು ತಿಂಗಳಿನಿಂದ ಮೂರು ವರ್ಷಗಳವರೆಗೆ ಕಠಿಣ ಜೈಲುಶಿಕ್ಷೆಯನ್ನು ವಿಧಿಸಬಹುದಾಗಿದೆ, ಜೊತೆಗೆ ದಂಡವನ್ನೂ ಹೇರಬಹುದಾಗಿದೆ.

ಈ ಅಪರೂಪದ ಅಧಿಕಾರವನ್ನು ಬಳಸಲು ಆದಾಯ ತೆರಿಗೆ ಇಲಾಖೆಯು ತೆರಿಗೆ ವಸೂಲು ಅಧಿಕಾರಿ(ಟಿಆರ್‌ಒ)ಗಳನ್ನು ನಿಯೋಜಿಸಿದೆ.

ಪಾನ್‌ಗೆ ತಡೆ, ಎಲ್‌ಪಿಜಿ ಸಬ್ಸಿಡಿಗೆ ಸಂಚಕಾರ

ಉದ್ದೇಶಪೂರ್ವಕ ತೆರಿಗೆ ಬಾಕಿದಾರರನ್ನು ಹದ್ದುಬಸ್ತಿನಲ್ಲಿಡಲು ಮತ್ತು ಅವರ ಚಟುವಟಿಕೆಗಳಿಗೆ ಅಂಕುಶ ಹಾಕುವ ಉದ್ದೇಶದಿಂದ ಅವರ ಪಾನ್‌ಕಾರ್ಡ್‌ಗಳನ್ನು ನಿರ್ಬಂಧಿಸಲು, ಎಲ್‌ಪಿಜಿ ಸಬ್ಸಿಡಿಗಳನ್ನು ರದ್ದುಗೊಳ್ಳುವಂತೆ ಮಾಡಲು ಮತ್ತು ಅವರಿಗೆ ಯಾವುದೇ ಬ್ಯಾಂಕಿನಿಂದ ಸಾಲ ಅಥವಾ ಓವರ್‌ಡ್ರಾಫ್ಟ್ ಸೌಲಭ್ಯ ದೊರೆಯದಂತೆ ಕ್ರಮಗಳನ್ನು ಕೈಗೊಳ್ಳಲು ಆದಾಯ ತೆರಿಗೆ ಇಲಾಖೆಯು ನಿರ್ಧರಿಸಿದೆ.

ದೊಡ್ಡ ಪ್ರಮಾಣದಲ್ಲಿ ತೆರಿಗೆ ವಂಚನೆಯ ಪಿಡುಗಿಗೆ ಕಡಿವಾಣ ಹಾಕಲು ಪ್ರಸಕ್ತ ಹಣಕಾಸು ವರ್ಷದಲ್ಲಿ ಇಂತಹ ಹಲವು ಕ್ರಮಗಳು ಇಲಾಖೆಯು ಬತ್ತಳಿಕೆಯಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News