ಅಂತಾರಾಷ್ಟ್ರೀಯ ಯೋಗ ದಿನವನ್ನು ಸಂಭ್ರಮದಿಂದ ಆಚರಿಸಿದ ಭಾರತ
ಹೊಸದಿಲ್ಲಿ,ಜೂ.21: ಅಂತಾರಾಷ್ಟ್ರೀಯ ಯೋಗ ದಿನವನ್ನು ಈ ಪ್ರಾಚೀನ ಆರೋಗ್ಯ ಸಂರಕ್ಷಣೆ ಪದ್ಧತಿಯ ಜನ್ಮಭೂಮಿಯಾದ ಭಾರತವು ಮಂಗಳವಾರ ಅತ್ಯಂತ ಸಡಗರದಿಂದ ಆಚರಿಸಿತು. ರಾಜಸ್ಥಾನದ ಮರುಭೂಮಿಯಿಂದ ಪಶ್ಚಿಮದ ಬಯಲಿನವರೆಗೆ....ಹಿಮಾಲಯದ ಎತ್ತರದ ಪ್ರದೇಶಗಳಿಂದ ಆಳ ಸಮುದ್ರಗಳಲ್ಲಿ ನೌಕಾಪಡೆಯ ಹಡಗುಗಳವರೆಗೆ ದೇಶಾದ್ಯಂತ ಸಾವಿರಾರು ಗ್ರಾಮಗಳು, ಪಟ್ಟಣಗಳು ಮತ್ತು ನಗರಗಳ ಸಹಸ್ರಾರು ಶಾಲೆಗಳು,ಸಾರ್ವಜನಿಕ ಸ್ಥಳಗಳು,ವಸತಿ ಸಂಕೀರ್ಣಗಳ ಹುಲ್ಲುಹಾಸುಗಳು ಮತ್ತು ಕಚೇರಿಗಳಲ್ಲಿ ಯೋಗದ ವಿಶ್ವರೂಪ ದರ್ಶನವಾಗಿತ್ತು. ಅಷ್ಟೇ ಏಕೆ...ಕೆಲವು ಬೆಳಗಿನ ವಿಮಾನಗಳಲ್ಲಿ ಭೂಮಿಯಿಂದ 35,000 ಅಡಿಗಳೆತ್ತರದಲ್ಲಿಯೂ ಯೋಗ ಪ್ರದರ್ಶನ ನಡೆಯಿತು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಯಶಸ್ಸಿಗಾಗಿ ಬಹು ದಿನಗಳಿಂದಲೂ ಸಿದ್ಧತೆಗಳನ್ನು ಮಾಡಿಕೊಂಡಿದ್ದ ಸರಕಾರವು ಸಾಮೂಹಿಕ ಯೋಗಾಭ್ಯಾಸ ಕಾರ್ಯಕ್ರಮವನ್ನು ಆಯೋಜಿಸುವಂತೆ ಜನತೆಯನ್ನು ಕೋರಿಕೊಂಡಿತ್ತು.
ದಿಲ್ಲಿಯಲ್ಲಿ ಬೆಳಗಿನ ಸೂರ್ಯನ ಕಿರಣಗಳು ನಗರವನ್ನು ಸೋಕುತ್ತಿರುವಂತೆ ಸಹಸ್ರಾರು ನಿವಾಸಿಗಳು ವಿವಿಧ ಯೋಗಾಸನಗಳಲ್ಲಿ ತೊಡಗಿಕೊಂಡಿದ್ದರು. ಕನಾಟ್ ಪ್ಲೇಸ್‌ನ ಹೃದಯಭಾಗದಲ್ಲಿರುವ ಸೆಂಟ್ರಲ್ ಪಾರ್ಕ್‌ನಲ್ಲಿ ಮತ್ತು ಅದರ ಸುತ್ತಲಿನ ವರ್ತುಲ ರಸ್ತೆಯಲ್ಲಿ 10,000ಕ್ಕೂ ಅಧಿಕ ಜನರು ಯೋಗಾಭ್ಯಾಸಕ್ಕಾಗಿ ನೆರೆದಿದ್ದರು ಮತ್ತು ತನ್ಮೂಲಕ ಇಲ್ಲಿಯ ಕಾರ್ಯಕ್ರಮ ನಗರದಲ್ಲಿಯ ಬೃಹತ್ ಪ್ರದರ್ಶನಗಳಲ್ಲೊಂದಾಗಿ ದಾಖಲಾಯಿತು.