ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತ ಐತಿಹಾಸಿಕ ಸಾಧನೆ

Update: 2016-06-22 05:36 GMT

  ಚೆನ್ನೈ, ಜೂ.22: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಬುಧವಾರ ಒಂದೇ ರಾಕೆಟ್‌ನಲ್ಲಿ 20 ವಿವಿಧ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಉಡಾವಣೆ ಮಾಡುವ ಮೂಲಕ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದೆ.

ಆಂಧ್ರಪ್ರದೇಶದ ಶ್ರೀ ಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋ ಸಂಸ್ಥೆ ಬೆಳಗ್ಗೆ 9.26ಕ್ಕೆ ಪಿಎಸ್‌ಎಲ್‌ವಿ-ಸಿ34 ರಾಕೆಟ್‌ನ ಮೂಲಕ ಒಂದೇ ದಿನ 20 ವಿವಿಧ ರಾಕೆಟ್‌ಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು. ಎಲ್ಲ ಉಪಗ್ರಹಗಳ ಒಟ್ಟು ತೂಕ 1,288 ಕೆಜಿ.

 ಭಾರತ ಒಂದೇ ದಿನ ಗರಿಷ್ಠ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಕಳುಹಿಸಿದ ವಿಶ್ವದ ಎರಡನೆ ರಾಷ್ಟ್ರವಾಗಿದೆ. ರಶ್ಯ 2014ರಲ್ಲಿ 33 ಉಪಗ್ರಹಗಳನ್ನು ಅಂತರಿಕ್ಷಕ್ಕೆ ತಲುಪಿಸಿ ಹೊಸ ದಾಖಲೆ ಬರೆದಿತ್ತು.

ಅಮೆರಿಕ, ಕೆನಡಾ, ಜರ್ಮನಿ ಹಾಗೂ ಇಂಡೋನೇಷ್ಯಾ ಸಹಿತ ವಿದೇಶದ 17 ಹಾಗೂ ಪುಣೆಯ ಸ್ವಾಯಮ್ ಇಂಜಿನಿಯರಿಂಗ್ ಕಾಲೇಜ್ ಹಾಗೂ ಚೆನ್ನೈನ ಸತ್ಯಬಾಮಾ ಯುನಿವರ್ಸಿಟಿಯ ಎರಡು ಮೈಕ್ರೊ ಉಪಗ್ರಹಗಳು ಸಹಿತ ಭಾರತದ 3 ಉಪಗ್ರಹಗಳನ್ನು ಅಂತರಿಕ್ಷಕ್ಕೆ ಯಶಸ್ವಿಯಾಗಿ ಕಳುಹಿಸಿಕೊಡಲಾಯಿತು.

ಈ ಮೊದಲು ಎ.28,2008ರಲ್ಲಿ ಪಿಎಸ್‌ಎಲ್‌ವಿ ಮೂಲಕ ಗರಿಷ್ಠ 10 ಉಪಗ್ರಹಗಳನ್ನು ಉಡಾಯಿಸಿದ್ದ ಇಸ್ರೋ ವಿಶ್ವ ದಾಖಲೆಯನ್ನು ನಿರ್ಮಿಸಿತ್ತು. 2013ರಲ್ಲಿ ನಾಸಾ ಒಂದೇ ದಿನ 29 ಉಪಗ್ರಹಗಳನ್ನು ಉಡಾಯಿಸಿತ್ತು. ರಶ್ಯ 2014ರಲ್ಲಿ ಒಂದೇ ದಿನ 29 ಉಪಗ್ರಹಗಳನ್ನು ಉಡಾಯಿಸಿರುವುದು ಈ ವರೆಗಿನ ದಾಖಲೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News