5.66 ಲ.ಕೋ.ರೂ.ಬೃಹತ್ ಸ್ಪೆಕ್ಟ್ರಂ ಹರಾಜಿಗೆ ಸಂಪುಟದ ಸಮ್ಮತಿ
ಹೊಸದಿಲ್ಲಿ,ಜೂ.22: ದೇಶದಲ್ಲಿಯೇ ಬೃಹತ್ ಮೊಬೈಲ್ ಫೋನ್ ತರಂಗಾಂತರಗಳ ಹರಾಜಿಗೆ ಸಜ್ಜಾಗಿರುವ ಸರಕಾರವು ಏಳು ಫ್ರೀಕ್ವೆನ್ಸಿಗಳಲ್ಲಿ 5.66 ಲಕ್ಷ ಕೋಟಿ ರೂ.ವೌಲ್ಯದ ಸ್ಪೆಕ್ಟ್ರಂ ಮಾರಾಟಕ್ಕೆ ಬುಧವಾರ ಹಸಿರು ನಿಶಾನೆಯನ್ನು ತೋರಿಸಿದೆ.
ಈ ಹರಾಜು ವಿಶ್ವದಲ್ಲಿ ಮೊಬೈಲ್ ಫೋನ್‌ಗಳ ಬಳಕೆಯಲ್ಲಿ ಚೀನಾದ ನಂತರ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಹೈಸ್ಪೀಡ್ 4ಜಿ ಧ್ವನಿ ಮತ್ತು ಅಂತರ್ಜಾಲ ಸೇವೆಗಳನ್ನು ವಿಸ್ತರಿಸಲು ಮೊಬೈಲ್ ಫೋನ್ ಕಂಪನಿಗಳಿಗೆ ನೆರವಾಗಲಿದೆ.
ಇದು ದೇಶದ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಹರಾಜೆಂದು ದಾಖಲಾಗಬಹುದು. ಇದಕ್ಕೆ ಸಂಪುಟದ ಅನುಮತಿ ದೊರಕಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಡನೆ ಮಾತನಾಡಿದ ವಿತ್ತಸಚಿವ ಅರುಣ್ ಜೇಟ್ಲಿ ಅವರು ತಿಳಿಸಿದರು. ಆದರೆ ಈ ಹರಾಜು ಯಾವಾಗ ನಡೆಯಲಿದೆ ಎನ್ನುವುದನ್ನು ಅವರು ತಿಳಿಸಲಿಲ್ಲ.
700 ಮೆಗಾಹರ್ಟ್ಜ್‌ಗಳಿಂದ 2,500 ಮೆಗಾಹರ್ಟ್ಜ್‌ಗಳವರೆಗೆ ಏಳು ವಿಭಿನ್ನ ಬ್ಯಾಂಡಗಳಲ್ಲಿ ಈ ಸ್ಪೆಕ್ಟ್ರಂ ಮಾರಾಟ ನಡೆಯಲಿದೆ.
ನಿರ್ವಾಹಕರಿಂದ ಸ್ಪೆಕ್ಟ್ರಂ ಬಳಕೆಯ ಶುಲ್ಕ(ಎಸ್‌ಯುಸಿ)ದ ವಿಷಯವನ್ನು ಟ್ರಾಯ್‌ಗೆ ಮರಳಿಸಲು ಸರಕಾರವು ನಿರ್ಧರಿಸಿದೆ ಎಂದು ಜೇಟ್ಲಿ ತಿಳಿಸಿದರು.
ಮೊಬೈಲ್ ಫೋನ್ ಕಂಪನಿಗಳ ವಾರ್ಷಿಕ ಆದಾಯದ ಶೇ.3ರಷ್ಟನ್ನು ಸ್ಪೆಕ್ಟ್ರಂ ಬಳಕೆ ಶುಲ್ಕವನ್ನಾಗಿ ವಿಧಿಸಲು ಟ್ರಾಯ್ ಪ್ರಸ್ತಾಪಿಸಿತ್ತು. ಈ ಶಿಫಾರಸನ್ನು ದೂರಸಂಪರ್ಕ ಆಯೋಗದ ಅಂತರ ಸಚಿವಾಲಯ ಸಮಿತಿಯೂ ಬೆಂಬಲಿಸಿತ್ತು.
ಮುಂಬರುವ ಹರಾಜಿನಿಂದ ನಿರೀಕ್ಷಿತ 5.66 ಲ.ಕೋ.ರೂ.ಆದಾಯದಲ್ಲಿ ಕಂತುಗಳಲ್ಲಿ ಪಾವತಿ ವ್ಯವಸ್ಥೆಯ ಹಿನ್ನೆಲೆಯಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸರಕಾರವು 64,000 ಕೋ.ರೂ.ಗಳನ್ನು ಪಡೆಯಲಿದೆ. ದೂರಸಂಪರ್ಕ ಕ್ಷೇತ್ರದಲ್ಲಿನ ವಿವಿಧ ಶುಲ್ಕಗಳು ಮತ್ತು ಸೇವೆಗಳ ಮೂಲಕ ಇನ್ನೂ 98,995 ಕೋ.ರೂ.ಗಳ ಆದಾಯ ಬರಲಿದೆ.
2015 ಮಾರ್ಚ್‌ನಲ್ಲಿ ಸ್ಪೆಕ್ಟ್ರಂ ಮಾರಾಟದಿಂದ ಸರಕಾರಕ್ಕೆ 1.1 ಲ.ಕೋ.ರೂ.ಲಭಿಸಿತ್ತು.
ಹರಾಜಿನಲ್ಲಿ ಪಡೆದ ಸ್ಪ್ರೆಕ್ಟಂ ಮಾರಾಟಕ್ಕೆ ಕನಿಷ್ಠ ಮೂರು ವರ್ಷಗಳ ಗಡುವು ವಿಧಿಸಿದ್ದ ಷರತ್ತನ್ನು ಈಗ ಸಡಿಲಗೊಳಿಸಿ ಅವಧಿಯನ್ನು ಒಂದು ವರ್ಷಕ್ಕೆ ಇಳಿಸಲಾಗಿದ್ದು, ಇದು ದೂರಸಂಪರ್ಕ ಕ್ಷೇತ್ರದಲ್ಲಿ ಕ್ರೋಢೀಕರಣವನ್ನು ಉತ್ತೇಜಿಸಲಿದೆ.