‘ದೇವಸ್ಥಾನದ ಭೂಮಿಯಲ್ಲಿ ದಲಿತ ಕ್ರೈಸ್ತರು, ಮುಸ್ಲಿಮರಿಗೆ ಕೃಷಿಗೆ ಅವಕಾಶ ಇಲ್ಲ’
ವಿಜಯವಾಡ, ಜೂ.24: ಹಿಂದೂ ದೇವಳ ಅಥವಾ ಮಠಗಳಿಗೆ ಸೇರಿದ ಭೂಮಿಯಲ್ಲಿ ಹಿಂದೂಯೇತರರಿಗೆ ಕೃಷಿ ಮಾಡುವ ಅವಕಾಶವಿಲ್ಲವೆಂದು ಹೇಳಿರುವ ಆಂಧ್ರ ಪ್ರದೇಶ ಸರಕಾರ ಇದೀಗ ತನ್ನ ಅಧಿಕಾರಿಗಳ ಮೂಲಕ ದಲಿತ ಕ್ರೈಸ್ತರು ಹಾಗೂ ಮುಸ್ಲಿಮ್ ರೈತರನ್ನು ಧಾರ್ಮಿಕ ದತ್ತಿ ಭೂಮಿಗಳಿಂದ ತೆರವುಗೊಳಿಸುತ್ತಿದೆ.
ನವೆಂಬರ್ 2015ರಲ್ಲೇ ಈ ನಿಟ್ಟಿನಲ್ಲಿ ಆದೇಶವೊಂದನ್ನು ಜಾರಿ ಮಾಡಲಾಗಿದ್ದರೆ, ಇದೀಗ ಕೃಷಿ ಚಟುವಟಿಕೆ ಆರಂಭವಾಗುವ ಸಮಯ ಭೂಮಿಗಳ ಲೀಸ್ ನವೀಕರಣ ಮಾಡುವ ಸಂದರ್ಭದಲ್ಲಿ ಈ ಆದೇಶ ಜಾರಿಯಾಗುತ್ತಿದೆ.
ಈ ತಿಂಗಳ ಆರಂಭದಲ್ಲಿಯೇ ಆಂಧ್ರ ಪ್ರದೇಶ ಸರಕಾರವು ಸಂಬಂಧಿತ ರೈತರಿಗೆ ನೋಟಿಸ್ ಜಾರಿ ಮಾಡುವ ಪ್ರಕ್ರಿಯೆ ಆರಂಭಿಸಿತ್ತು. ಇಂತಹ ದೇವಳದ ಭೂಮಿಗಳಲ್ಲಿ ಕೃಷಿ ಮಾಡುವ ದಲಿತ ಕ್ರೈಸ್ತರು ತಾವು ಕ್ರೈಸ್ತ ಧರ್ಮ ಅನುಸರಿಸುತ್ತಿಲ್ಲವೆಂದು ತಮ್ಮ ಚರ್ಚುಗಳಿಂದ ಪ್ರಮಾಣ ಪತ್ರ ತಂದಲ್ಲಿ ಮಾತ್ರ ಅವರಿಗೆ ಕೃಷಿ ನಡೆಸಲು ಅವಕಾಶ ನೀಡಲಾಗುವುದು ಎಂದು ಸರಕಾರ ಹೇಳಿದೆ. ಹೊಸ ನಿಯಮದ ಪ್ರಕಾರ ಮುಸ್ಲಿಮರು ದೇವಳ ಭೂಮಿಗಳಲ್ಲಿ ಕೃಷಿ ಚಟುವಟಿಕೆ ನಡೆಸುವಂತೆಯೇ ಇಲ್ಲವಾಗಿದೆ.
ಇತ್ತೀಚಿಗಿನ ವರ್ಷಗಳಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವ ಹಲವಾರು ದಲಿತರು ಆಂಧ್ರದಲ್ಲಿದ್ದರೆ, ಅವರಲ್ಲಿ ಹೆಚ್ಚಿನವರು ತಮ್ಮ ಹೆಸರುಗಳನ್ನು ಬದಲಿಸದೇ ಇರುವುದರಿಂದ ಅವರು ಮತಾಂತರಗೊಂಡಿದ್ದಾರೆಯೇ ಅಥವಾ ಇಲ್ಲವೇ ಎಂದು ಕಂಡು ಹಿಡಿಯುವುದು ಕಷ್ಟವಾಗಿದೆ.
ಈ ಆದೇಶದಂತೆ ‘‘ಹಿಂದೂ ಧರ್ಮದ ಹೊರತಾಗಿ ಬೇರೆ ಧರ್ಮ ಆಚರಿಸುವವರಿಗೆ ದೇವಸ್ಥಾನದ ಭೂಮಿಯನ್ನು ಲೀಸ್, ಟೆಂಡರ್ ಅಥವಾ ಸಾರ್ವಜನಿಕ ಏಲಂ ಮೂಲಕ ಪಡೆಯುವ ಹಕ್ಕಿಲ್ಲ.’’
ಈ ನಿರ್ಧಾರವನ್ನು ವಿಚಿತ್ರ ಎಂದು ಬಣ್ಣಿಸಿರುವ ಮುಸ್ಲಿಮ್ ಯುನೈಟೆಡ್ ಫ್ರಂಟ್ ಸದಸ್ಯ ಹಬೀಬುರ್ರಹ್ಮಾನ್, ಗುಂಟೂರು ಜುಮಾ ಮಸೀದಿಯ ಭೂಮಿಯ ಶೇ.80ರಷ್ಟು ಸಾಗುವಳಿದಾರರು ಮುಸ್ಲಿಮೇತರರು ಎಂದು ಹೇಳಿದ್ದಾರೆ.
ಸರಕಾರದ ನಿಯಂತ್ರಣದಲ್ಲಿರುವ ಆಂಧ್ರದ ಹೆಚ್ಚಿನ ದೇವಳಗಳ ಬಳಿ ಸಾಕಷ್ಟು ಭೂಮಿಯಿದ್ದು, ಸುಮಾರು 3 ಲಕ್ಷ ಎಕರೆ ಪ್ರದೇಶದಲ್ಲಿ ಸಾಗುವಳಿ ಮಾಡಲಾಗುತ್ತಿದೆ. ಇವರಲ್ಲಿ ಶೇ.30ರಷ್ಟು ಮಂದಿ ದಲಿತರಾಗಿದ್ದಾರೆ.