ಗೆಳೆತನದ ಹುಚ್ಚಾಟದಲ್ಲಿ ಗೆಳೆಯನಿಂದಲೇ ಪ್ರಾಣ ಕಳಕೊಂಡ ಅಪ್ರಾಪ್ತ ವಯಸ್ಸಿನ ಬಾಲಕಿ!
ಔರೈಯಾ, ಜೂನ್ 25: ಅಪ್ರಾಪ್ತ ಬಾಯ್ ಫ್ರೆಂಡ್ ತನ್ನ ಗರ್ಲ್‌ಫ್ರೆಂಡನ್ನೇ ಕಗ್ಗೊಲೆಗೈದ ಹೃದಯ ವಿದ್ರಾವಕ ಘಟನೆ ದಿಲ್ಲಿಯಿಂದ ವರದಿಯಾಗಿದೆ. ಗರ್ಲ್‌ಫ್ರೆಂಡ್ ಮದುವೆಮಾಡಿಕೊಳ್ಳುವಂತೆ ಒತ್ತಾಯಿಸಿದ್ದರಿಂದ ಕಂಗೆಟ್ಟ ಅಪ್ರಾಪ್ತ ವಯಸ್ಸಿನ ಬಾಲಕ ತನ್ನ ಸಹೋದರನೊಂದಿಗೆ ಸೇರಿ ರೆಡ್‌ಲೈಟ್ ಏರಿಯಾಕ್ಕೆ ಮಾರಲು ಯತ್ನಿಸಿ ವಿಫಲನಾದಾಗ ಇಬ್ಬರೂ ಸೇರಿ ಬಾಲಕಿಯನ್ನು ಹತ್ಯೆಗೈದರೆಂದು ಪೊಲಿಸರು ತಿಳಿಸಿದ್ದಾರೆ. ಪೊಲೀಸರ ವಶದಲ್ಲಿರುವ ಆರೋಪಿಗಳನ್ನು ಪ್ರಶ್ನಿಸಲಾಗುತ್ತಿದೆ.
ದಿಲ್ಲಿಯ ಕೃಷ್ಣನಗರದಿಂದ ಹದಿನಾರು ವರ್ಷದ ಹುಡುಗಿಯೊಬ್ಬಳು ನಾಪತ್ತೆಯಾಗಿದ್ದಾಳೆ ಎಂದು ಪೊಲೀಸರಿಗೆ ಮಾರ್ಚ್ 18ರಂದು ದೂರು ನೀಡಲಾಗಿತ್ತು. ತನಿಖೆ ನಡೆಸಿದ ಪೊಲೀಸರಿಂದ ಯಾವುದೇ ಸುಳಿವು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಬಾಲಕಿಯ ಮೊಬೈಲ್ ಮನೆಯಲ್ಲೇ ಇತ್ತು. ಆದ್ದರಿಂದ ಪತ್ತೆಹಚ್ಚುವುದು ಪೊಲೀಸರಿಗೆ ತೀರಾ ಕಷ್ಟವಾಗಿ ಪರಿಣಮಿಸಿತ್ತು. ಹೀಗಿರುವಾಗ ಬಾಲಕಿ ಎರಡು ತಿಂಗಳ ಹಿಂದೆ ಉತ್ತರ ಪ್ರದೇಶದ ಔರೈಯ್ಯೆ ಜಿಲ್ಲೆಯ ಯಾವುದೋ ಸಂಬಂಧಿಕರ ಮನೆಗೆ ಹೋಗಿದ್ದಳು ಎಂದು ಮಾಹಿತಿ ಪೊಲೀಸರಿಗೆ ಸಿಕ್ಕಿತು. ಈ ಜಾಡು ಹಿಡಿದು ಅಲ್ಲಿಗೆ ಹೋಗಿ ಪೊಲೀಸರು ತನಿಖೆ ಆರಂಭಿಸಿದ್ದರು.
ಔರೈಯ್ಯದಲ್ಲಿ ಬಾಲಕಿಗೊಬ್ಬ ಗೆಳೆಯನಿದ್ದಾನೆ ಎಂದು ಪೊಲೀಸರು ತನಿಖೆಯಲ್ಲಿ ಕಂಡುಹುಡುಕುವಲ್ಲಿ ಯಶಸ್ವಿಯಾದರು. ಮಾತ್ರವಲ್ಲ ಆತ ಕಳೆದ ತಿಂಗಳು ಊರಿನಿಂದ ಕಾಣೆಯಾಗಿದ್ದಾನೆ ಎಂಬ ವಿವರವೂ ಪೊಲೀಸರಿಗೆ ದೊರಕಿತು. ಆತ ದಿಲ್ಲಿಯಲ್ಲಿದ್ದಾನೆ ತಿಳಿದಾಗ ಪೊಲೀಸರು ದಿಲ್ಲಿಗೆ ಮರಳಿ ಆತನನ್ನು ಬಂದಿಸಲು ಯಶಸ್ವಿಯಾದರು. ಆರೋಪಿಯೂ ಅಪ್ರಾಪ್ತ ವಯಸ್ಸಿನ ಹುಡುಗನಾಗಿದ್ದ. ಗರ್ಲ್‌ಫ್ರೆಂಡ್‌ನ್ನು ಕೊಲೆಗೈದುದಾಗಿ ಆತ ಪೊಲೀಸರಲ್ಲಿ ಒಪ್ಪಿಕೊಂಡಿದ್ದಾನೆ. ಮೊದಲಿನಿಂದಲೂ ಪರಿಚಿತಳಾಗಿದ್ದ ಬಾಲಕಿಯನ್ನು ಭೇಟಿಯಾಗಲು ಆತ ದಿಲ್ಲಿಗೆ ಬಂದಿದ್ದ. ನಂತರ ಇಬ್ಬರು ಫೋನ್‌ನಲ್ಲಿ ಮಾತಾಡಿಕೊಂಡು ತುಘಲಕಾಬಾದ್‌ನಲ್ಲಿದ್ದ ತನ್ನ ಸಹೋದರನ ಮನೆಗೆ ಅವಳನ್ನು ಕರೆಯಿಸಿಕೊಂಡಿದ್ದ. ಅಲ್ಲಿಯೇ ಮೂವರೂ ಉಳಿದುಕೊಂಡಿದ್ದರು. . ತನ್ಮಧ್ಯೆ ಬಾಲಕಿ ಆ ಅಪ್ರಾಪ್ತ ಬಾಲಕನಲ್ಲಿ ಮದುವೆ ಆಗುವಂತೆ ಒತ್ತಾಯಿಸಿದ್ದಳು. ಮದುವೆಯಾಗಲು ನಿರಾಕರಿಸಿದಾಗ ಆತನ ಅಣ್ಣನನ್ನು ಮದುವೆಯಾಗುವಂತೆ ಬಾಲಕಿ ಒತ್ತಾಯಿಸತೊಡಗಿದ್ದಾಳೆ. ಆತನಿಗೆ ಮೊದಲಿಂದಲೂ ಒಬ್ಬಳು ಗರ್ಲ್‌ಫ್ರೆಂಡ್ ಇದ್ದಳಾದ್ದರಿಂದ ಆತ ಇಕ್ಕಟ್ಟಿಗೆ ಸಿಲುಕಿದ್ದ ಅಂತಿಮವಾಗಿ ಹುಡುಗಿಗೆ ಒಂದು ಗತಿ ತೋರಿಸುವ ನಿರ್ಧಾರಕ್ಕೆ ಅವರಿಬ್ಬರೂ ಬಂದಿದ್ದರು. ಮೊದಲು ದಿಲ್ಲಿಯ ರೆಡ್‌ಲೈಟ್ ಏರಿಯದಲ್ಲಿ ಮಾರಲು ಯತ್ನಿಸಿ ಅದಾಗದಾಗ ಬಾಲಕಿಯನ್ನು ಹತ್ಯೆಗೈದಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.