‘ಶಾಸಕ ನಾಪತ್ತೆ ’ದೂರು ಸ್ವೀಕರಿಸಿ ಫಜೀತಿಗೆ ಸಿಲುಕಿದ ಪೊಲೀಸರು!
ಕೊಲ್ಲಂ, ಜೂ.25: ನಟ ಹಾಗೂ ಸಿಪಿಎಂ ಶಾಸಕ ಮುಕೇಶ್ ಅವರು ತನ್ನ ಮತಕ್ಷೇತ್ರದಿಂದ ‘ನಾಪತ್ತೆ ’ಯಾಗಿದ್ದಾರೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಸಲ್ಲಿಸಿದ್ದ ನಾಪತ್ತೆ ದೂರನ್ನು ದಾಖಲಿಸಿಕೊಳ್ಳುವ ಮೂಲಕ ಇಲ್ಲಿಯ ಕೊಲ್ಲಂ ಪಶ್ಚಿಮ ಠಾಣೆಯ ಪೊಲೀಸರು ವಿವಾದಕ್ಕೆ ಸಿಲುಕಿದ್ದಾರೆ.
ತಪ್ಪಿನಿಂದಾಗಿ ದೂರು ದಾಖಲಾಗಿದೆ ಎಂದು ಸಮಜಾಯಿಷಿ ನೀಡಿರುವ ಪೊಲೀಸರು, ಗೊಂದಲವನ್ನು ಸೃಷ್ಟಿಸಿದ್ದಕ್ಕಾಗಿ ಮತ್ತು ದೂರು ದಾಖಲಾಗಿರುವುದಕ್ಕೆ ಹಿಂಬರಹವನ್ನು ಪಡೆದುಕೊಂಡಿರುವುದಕ್ಕಾಗಿ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೂರಿದ್ದಾರೆ.
ದೂರನ್ನು ಒಂದು ‘ತಮಾಷೆ ’ಎಂದು ತಳ್ಳಿಹಾಕಿರುವ ಮುಕೇಶ್,ತಾನು ತನ್ನ ಮತಕ್ಷೇತ್ರದಲ್ಲಿಯೇ ಇದ್ದೇನೆ ಎಂದು ತಿಳಿಸಿದರು.
ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಛೇಡಿಸಿದ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಆಗಾಗ್ಗೆ ವಿಶ್ರಾಂತಿಗೆ ತೆರಳುವುದನ್ನು ಪ್ರಸ್ತಾಪಿಸಿ,ತಾನು ‘ರಾಹುಲ್ ಕ್ಲಬ್ ’ನ ಸದಸ್ಯತ್ವ ಪಡೆದುಕೊಳ್ಳಲು ಹೋಗಿದ್ದಾಗಿ ಹೇಳಿದರು.
ಚುನಾವಣೆಯಲ್ಲಿ ಗೆದ್ದಾಗಿನಿಂದ ಸಿಪಿಎಂ ಶಾಸಕರು ತನ್ನ ಮತಕ್ಷೇತ್ರದಲ್ಲಿ ಕಾಣುತ್ತಿಲ್ಲ ಎಂದು ತಮ್ಮ ದೂರಿನಲ್ಲಿ ಆರೋಪಿಸಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರು, ಅವರನ್ನು ಪತ್ತೆ ಹಚ್ಚಲು ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.
ಇಲ್ಲಿಯ ಪಶ್ಚಿಮ ಠಾಣೆಯ ಪೊಲೀಸರು ದೂರನ್ನು ಪರಿಶೀಲಿಸದೆ ದಾಖಲಿಸಿಕೊಂಡು,ಅದಕ್ಕೆ ಹಿಂಬರಹವನ್ನೂ ನೀಡಿ ಫಜೀತಿಗೆ ಸಿಲುಕಿದ್ದಾರೆ.
ಠಾಣೆಯ ಸಿಬ್ಬಂದಿಗಳ ವಿರುದ್ಧ ಕ್ರಮ ಜರುಗಿಸುವಂತೆ ಆಡಳಿತ ಸಿಪಿಎಂ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಕೇಳಿಕೊಂಡಿದೆ.
ಕರ್ತವ್ಯದಲ್ಲಿದ್ದ ಅಧಿಕಾರಿ ಕಣ್ತಪ್ಪಿನಿಂದ ದೂರನ್ನು ಸ್ವೀಕರಿಸಿದ್ದಾರೆ ಎಂದು ಕೊಲ್ಲಂ ಪಶ್ಚಿಮ ವೃತ್ತದ ಇನ್‌ಸ್ಪೆಕ್ಟರ್ ಜಿ.ಬಿನು ಹೇಳಿದ್ದಾರೆ.