×
Ad

ಕಾಶ್ಮೀರ:ಸಿಆರ್‌ಪಿಎಫ್ ಬಸ್‌ನ ಮೇಲೆ ಭಯೋತ್ಪಾದಕರ ದಾಳಿ;ಎಂಟು ಯೋಧರ ಸಾವು,ಇಬ್ಬರು ಉಗ್ರರ ಹತ್ಯೆ

Update: 2016-06-25 22:07 IST

ಹೊಸದಿಲ್ಲಿ,ಜೂ.25: ಜಮ್ಮು-ಕಾಶ್ಮೀರದ ಪಾಂಪೋರ್‌ನಲ್ಲಿ ಶನಿವಾರ ಸಿಆರ್‌ಪಿಎಫ್ ಬಸ್ಸಿನ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಎಂಟು ಯೋಧರು ಕೊಲ್ಲಲ್ಪಟ್ಟಿದ್ದಾರೆ.
ಪ್ರತಿದಾಳಿ ನಡೆಸಿದ ಸಿಆರ್‌ಪಿಎಫ್ ಯೋಧರು ಇಬ್ಬರು ಉಗ್ರರನ್ನು ಕೊಂದಿದ್ದಾರೆ. ಯೋಧರು ಫೈರಿಂಗ್ ರೇಂಜ್ ಅಭ್ಯಾಸದಿಂದ ವಾಹನಗಳಲ್ಲಿ ತಮ್ಮ ಶಿಬಿರಕ್ಕೆ ಮರಳುತ್ತಿದ್ದಾಗ ಈ ದಾಳಿ ನಡೆದಿದೆ.
ಸಾವುಗಳನ್ನು ದೃಢಪಡಿಸಿರುವ ಸಿಆರ್‌ಪಿಎಫ್ ಕಮಾಂಡಂಟ್ ರಾಜೇಶ ಯಾದವ ಅವರು, ದಾಳಿಯಲ್ಲಿ 20 ಯೋಧರು ಗಾಯಗೊಂಡಿದ್ದಾರೆಂದು ತಿಳಿಸಿದರು.
ದಾಳಿಯ ಕುರಿತು ಗೃಹಸಚಿವ ರಾಜನಾಥ ಸಿಂಗ್ ಅವರಿಗೆ ಮಾಹಿತಿಯನ್ನು ನೀಡಿರುವ ಸಿಆರ್‌ಪಿಎಫ್‌ನ ಮಹಾ ನಿರ್ದೇಶಕರು ನಾಳೆ ಪಾಂಪೋರ್‌ಗೆ ಭೇಟಿ ನೀಡಲಿದ್ದಾರೆ.
ಸಿಆರ್‌ಪಿಎಫ್ ಯೋಧರ ಸಾವುಗಳಿಗೆ ನೋವು ವ್ಯಕ್ತಪಡಿಸಿರುವ ಸಿಂಗ್, ಅವರ ಕುಟುಂಬಗಳಿಗೆ ಸಂತಾಪಗಳನ್ನು ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಗಾಯಾಳು ಯೋಧರ ಶೀಘ್ರ ಚೇತರಿಕೆಯನ್ನು ಹಾರೈಸಿದ್ದಾರೆ.
ಹತ ಭಯೋತ್ಪಾದಕರು ಪಾಕಿಸ್ತಾನದವರಾಗಿರುವ ಎಲ್ಲ ಸಾಧ್ಯತೆಗಳೂ ಇವೆ ಎಂದು ಡಿಜಿಪಿ ಕೆ.ರಾಜೇಂದ್ರ ಹೇಳಿದ್ದಾರೆ.
ಮೂರು ವಾರಗಳಲ್ಲಿ ಇದು ಭದ್ರತಾ ಪಡೆಗಳ ಬಸ್ ಮೇಲೆ ನಡೆದಿರುವ ಎರಡನೇ ದಾಳಿಯಾಗಿದೆ. ಜೂ.3ರಂದು ಬಿಜ್‌ಬೆಹರಾದಲ್ಲಿ ಬಿಎಸ್‌ಎಫ್‌ನ ಬಸ್ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಸಿಬ್ಬಂದಿಗಳು ಕೊಲ್ಲಲ್ಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News