ಅಕ್ಟೋಬರ್‌ನಲ್ಲಿ ‘ಟೈಗರ್ ಎಕ್ಸ್‌ಪ್ರೆಸ್’ಗೆ ಚಾಲನೆ
ಹೈದರಾಬಾದ್, ಜೂ.25: ಮಧ್ಯಪ್ರದೇಶದ ಜಗತ್ಪ್ರಸಿದ್ಧ ಬಾಂಧವಗಡ ಹಾಗೂ ಕನ್ಹ ರಾಷ್ಟ್ರೀಯ ಉದ್ಯಾನಗಳಿಗೆ ಪ್ರಯಾಣಿಕರನ್ನು ಒಯ್ಯಲಿರುವ ಪ್ರವಾಸಿ ರೈಲು ‘ಟೈಗರ್ ಎಕ್ಸ್‌ಪ್ರೆಸ್’ ತನ್ನ ನಿಯಮಿತ ಸಂಚಾರವನ್ನು ಅಕ್ಟೋಬರ್‌ನಿಂದ ನಡೆಸಲಿದೆಯೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸೆಮಿಲಕ್ಸುರಿ ರೈಲನ್ನು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮವು(ಐಆರ್‌ಸಿಟಿಸಿ) ನಿರ್ವಹಿಸಲಿದೆ.
ಈ ರೈಲು ದಿಲ್ಲಿಯಿಂದ ಆರಂಭಗೊಂಡು ಬಾಂಧವಗಡ ಹಾಗೂ ಕನ್ಹ ಹುಲಿ ಮಾರ್ಗ ಜಾಲದ ಮುಖಾಂತರ ಸಂಚರಿಸಲಿದೆ. ಈ ಎಲ್ಲ ಸ್ಥಳಗಳಲ್ಲಿ ಪ್ರಯಾಣಿಕರಿಗೆ ಹೇಗೆ ಅತ್ಯುತ್ತಮ ಪ್ರವಾಸಿ ಅನುಭವವನ್ನು ನೀಡಬಹುದೆಂಬ ಕುರಿತು ತಾವು ಐಟಿಸಿಟಿಸಿಯೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ‘ಟೈಗರ್ ಎಕ್ಸ್‌ಪ್ರೆಸ್’ ಅಕ್ಟೋಬರ್‌ನಲ್ಲಿ ಆರಂಭಗೊಳ್ಳಲಿದೆ. ಪ್ರವಾಸದ ಅವಧಿಯು 5 ರಾತ್ರಿ ಹಾಗೂ 6 ಹಗಲುಗಳಿರುತ್ತದೆಂದು ಮಧ್ಯಪ್ರದೇಶ ಪ್ರವಾಸೋದ್ಯಮ ಹೆಚ್ಚುವರಿ ಆಡಳಿತ ನಿರ್ದೇಶಕಿ ತನ್ವಿ ಸುಂದ್ರಿಯಾಲ್ ಇಂದು ಹೈದರಾಬಾದ್‌ನಲ್ಲಿ ಪತ್ರಕರ್ತರಿಗೆ ತಿಳಿಸಿದರು.
ರೈಲ್ವೆ ಸಚಿವ ಸುರೇಶ್ ಪ್ರಭು ಜೂ.5ರಂದು ದಿಲ್ಲಿಯ ಸಫ್ದರ್‌ಜಂಗ್ ರೈಲು ನಿಲ್ದಾಣದಲ್ಲಿ ಹುಲಿ ಮಾರ್ಗ ಜಾಲದ ರೈಲಿನ ಉದ್ಘಾಟನಾ ಪ್ರಯಾಣಕ್ಕೆ ಹಸಿರು ನಿಶಾನೆ ತೋರಿಸಿದ್ದರು.
ಪ್ರತಿ ಪ್ರಯಾಣದಲ್ಲಿ ರೈಲು 100 ಮಂದಿ ಪ್ರಯಾಣಿಕರಿಗೆ ಅವಕಾಶ ನೀಡುತ್ತದೆ. ಇಡೀ ವಲಯವು ಮಧ್ಯಪ್ರದೇಶದಲ್ಲಿ ರುವುದರಿಂದ ತಾವು ಪ್ರಯಾಣಿಕರಿಗೆ ತಂಗುವ ವ್ಯವಸ್ಥೆ ಇತ್ಯಾದಿಗಳನ್ನು ಒದಗಿಸಲಿದ್ದೇವೆ. ಮಧ್ಯ ಪ್ರದೇಶವು ವೈವಿಧ್ಯಕ್ಕೆ ಹೆಸರಾಗಿದೆ. ಆದುದರಿಂದ ವೈವಿಧ್ಯಮಯ ಪ್ರವಾಸೋದ್ಯಮ ಉತ್ಪನ್ನಗಳನ್ನು ವಿನ್ಯಾಸಿಸಿದೆಯೆಂದು ತನ್ವಿ ಹೇಳಿದರು.
ವಿವಿಧ ಪ್ರವಾಸೋದ್ಯಮ ಯೋಜನೆಗಳ ಉತ್ತೇಜನಕ್ಕಾಗಿ ಮಧ್ಯಪ್ರದೇಶ ಸರಕಾರವು ‘ಮಾರ್ಗದ ಬದಿಯ ಸೌಲಭ್ಯ’ ‘ಭೂ ಮಂಜೂರಾತಿ’ ಹಾಗೂ ‘ಪಾರಂಪರಿಕ ಯೋಜನೆಗಳಿಗೆ ಉತ್ತೇಜಕ’ ಗಳಂತಹ ನೀತಿಗಳನ್ನು ಹೊರ ತಂದಿದೆ. ತಾವು 303 ರಸ್ತೆ ಬದಿಯ ಸೌಲಭ್ಯಗಳನ್ನು ಗುರುತಿಸಿದ್ದು ಮುಂದಿನ 3 ವರ್ಷಗಳಲ್ಲಿ ಖಾಸಗಿ ಭಾಗಿದಾರಿಕೆಯಲ್ಲಿ ಅವುಗಳನ್ನು ನಿರ್ಮಿಸಲಾಗುವುದು. ಭೂಮಿ ಒದಗಿಸುವ ಮೂಲಕ ಮುಂದಿನ 5 ವರ್ಷಗಳಲ್ಲಿ ಪ್ರವಾಸಿಗರ ವಸತಿ ವ್ಯವಸ್ಥೆಯನ್ನು ದುಪ್ಪಟ್ಟು ಗೊಳಿಸುವ ಯೋಜನೆಯಿದೆಯೆಂದು ಅವರು ವಿವರಿಸಿದರು.
ಪರಂಪರಾ ರೀತಿಯಲ್ಲಿ ಭೋಪಾಲದ ತಾಜ್‌ಮಹಲ್ ಪ್ಯಾಲೇಸ್, ರೇವಾದ ಗೋವಿಂದಗಡ ಕೋಟೆ ಹಾಗೂ ಸಾತ್ನಾದ ಮಾಧವಗಡ ಕೋಟೆಗಳನ್ನು ಪಿಪಿಪಿ ಮಾದರಿಯಲ್ಲಿ ಪರಂಪರಾ ಹೊಟೇಲ್‌ಗಳನ್ನಾಗಿ ಪರಿವರ್ತಿಸಲಾಗುವುದೆಂದು ತನ್ವಿ ಹೇಳಿದರು.