ಕುರ್ ಆನ್ ಗೆ ಹಾನಿ ಆರೋಪ: ಮಲೇರ್‌ಕೋಟ್ಲಾದಲ್ಲಿ ಉದ್ವಿಗ್ನ ಸ್ಥಿತಿ

Update: 2016-06-26 11:33 GMT

ಚಂಡೀಗಢ,ಜೂ.26: ಸ್ಮಶಾನದ ಬಳಿ ಪವಿತ್ರ ಕುರ್ ಆನ್ ಪುಟಗಳನ್ನು ಹರಿದು ಹಾಕಿರುವುದು ಕಂಡು ಬಂದ ಘಟನೆ ಹಿನ್ನೆಲೆಯಲ್ಲಿ 300 ಮಂದಿ ಉದ್ರಿಕ್ತರ ಗುಂಪೊಂದು ವಾಹನಗಳಿಗೆ ಬೆಂಕಿ ಹಚ್ಚಿ, ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದ್ದು, ಪಂಜಾಬ್‌ನ ಮಲೇರ್‌ಕೋಟ್ಲಾದಲ್ಲಿ ಸತತ ಎರಡನೇ ದಿನವೂ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ.

ಉದ್ರಿಕ್ತರ ಗುಂಪು ಶನಿವಾರ ರಾತ್ರಿ ಪೊಲೀಸರ ಜತೆ ಘರ್ಷಣೆಗೆ ಇಳಿದಾಗ ಮಲೇರ್‌ಕೋಟ್ಲಾ ಎಸ್ಪಿ ಜಸ್ವೀಂದರ್ ಸಿಂಗ್, ಡಿಸಿಪಿ ರಣಧೀರ ಸಿಂಗ್ ಹಾಗೂ ಅಲ್ಮೇಡ್‌ಘರ್ ಎಸ್‌ಎಚ್‌ಓ ರೋಷನ್‌ಲಾಲ್ ಸೇರಿದಂತೆ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಶಿರೋಮಣಿ ಅಕಾಲಿದಳ ಮುಖಂಡ ಹಾಗೂ ಮುಖ್ಯ ಸಂಸದೀಯ ಕಾರ್ಯದರ್ಶಿ ಫ್ಹರಾನಾ ನಿಸ್ಸಾರಾ ಖತೂನ್ ಅವರ ನಿವಾಸದ ಮೇಲೂ ಗುಂಪು ದಾಳಿ ಮಾಡಿತು. 10ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಶಿರೋಮಣಿ ಅಕಾಲಿದಳ ನಾಯಕಿಗೆ ಸೇರಿದ ನಾಲ್ಕು ಐಷಾರಾಮಿ ವಾಹನಗಳು, ಆಕೆಯ ಪತಿ ಮಹ್ಮದ್ ಇಜಾರ್ ಅಲಾಮ್ ಅವರಿಗೆ ಸೇರಿದ ವಾಹನಗಳೂ ಸಿಟ್ಟಿಗೆ ಬಲಿಯಾಗಿವೆ.

ಕುರ್ ಆನ್ ಗೆ ಗ್ರಂಥಕ್ಕೆ ಹಾನಿ ಮಾಡಿದ್ದಾರೆ ಎಂದು ಹೇಳಲಾದ ಘಟನೆ ಹಿನ್ನೆಲೆಯಲ್ಲಿ, ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಅಲಾಮ್ ಅವರ ಭದ್ರತಾ ಸಿಬ್ಬಂದಿ ಗುಂಡುಹಾರಿಸಿದ್ದರಿಂದ ತಾಳ್ಮೆ ಕಳೆದುಕೊಂಡ ಪ್ರತಿಭಟನಾಕಾರರು ದಾಂಧಲೆ ನಡೆಸಿದರು ಎಂದು ಕಾಂಗ್ರೆಸ್ ಮುಖಂಡ ಕ್ಯಾಪ್ಟನ್ ಅಮರೀಂದರ್ ಸಿಂಗ್ ದೂರಿದ್ದಾರೆ. ಶಾಸಕಿಯ ಮನೆ ಮುಂದಿನ ಭದ್ರತಾ ಸಿಬ್ಬಂದಿಯ ಕೊಠಡಿಯನ್ನು ಧ್ವಂಸಗೊಳಿಸಿದ ಪ್ರತಿಭಟನಾಕಾರರು, ಕಲ್ಲುತೂರಾಟ, ವಾಹನಗಳಿಗೆ ಬೆಂಕಿ ಹಚ್ಚುವಲ್ಲಿ ನಿರತರಾಗಿದ್ದರು.

ಆಸ್ತಿಪಾಸಿಗೆ ಹಾನಿ, ಪೊಲೀಸರ ಮೇಲೆ ದಾಳಿ ಹಾಗೂ ಕೋಮು ಭಾವನೆ ಕೆರಳಿಸಿದ್ದಕ್ಕಾಗಿ 312 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News