ನಿರ್ಣಾಯಕ ದಾಖಲೆ ಪತ್ತೆಹಚ್ಚಲು ಕೇಂದ್ರ ವಿಫಲ

Update: 2016-06-27 18:34 GMT

ಹೊಸದಿಲ್ಲಿ,ಜೂ.27: ಗುಜರಾತ್‌ನಲ್ಲಿ ಪೊಲೀಸರ ಗುಂಡುಗಳಿಗೆ ಬಲಿಯಾದ 19ರ ಹರೆಯದ ಕಾಲೇಜು ವಿದ್ಯಾರ್ಥಿನಿ ಇಶ್ರತ್ ಜಹಾನ್ ಭಯೋತ್ಪಾದಕಿಯಾಗಿದ್ದಳೇ ಎನ್ನುವ ಕುರಿತು ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ತನ್ನ ನಿಲುವನ್ನು ಬದಲಿಸಿದ್ದು ಹೇಗೆ ಎನ್ನುವುದರ ಮೇಲೆ ಬೆಳಕು ಚೆಲ್ಲಬಹುದಾಗಿದ್ದ ನಿರ್ಣಾಯಕ ದಾಖಲೆಗಳನ್ನು ಪತ್ತೆ ಹಚ್ಚಲು ಮೂರು ತಿಂಗಳುಗಳ ಕಾಲ ನಿರಂತರವಾಗಿ ನಡೆಸಿದ ಹುಡುಕಾಟ ವಿಫಲಗೊಂಡಿದೆ.

2004ರಲ್ಲಿ ಅಹ್ಮದಾಬಾದ್‌ನ ಹೊರವಲಯದಲ್ಲಿ ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಹತ್ಯೆಯ ಉದ್ದೇಶ ಹೊಂದಿದ್ದರೆಂಬ ಆರೋಪದಲ್ಲಿ ಇಶ್ರತ್ ಮತ್ತು ಇತರ ಮೂವರನ್ನು ಪೊಲೀಸರು ಎನ್‌ಕೌಂಟರ್‌ನಡೆಸಿ ಕೊಂದು ಹಾಕಿದ್ದರು. ಈ ನಾಲ್ವರೂ ಪಾಕಿಸ್ತಾನದ ಲಷ್ಕರೆ ತಯಿಬಾದ ಸದಸ್ಯರಾಗಿದ್ದರೇ ಎಂಬ ಬಗ್ಗೆ 2009ರಲ್ಲಿ ಆಗಿನ ಗೃಹಸಚಿವ ಪಿ.ಚಿದಂಬರಂ ಅವರು ಮೊದಲು ಸಲ್ಲಿಸಿದ್ದ ಅಫಿದಾವಿತ್‌ಗೆ ವ್ಯತಿರಿಕ್ತವಾದ ಎರಡನೆ ಅಫಿದಾವಿತನ್ನು ಗುಜರಾತ್‌ನ ನ್ಯಾಯಾಲಯಕ್ಕೆ ಸಲ್ಲಿಸಿ ಅದರ ದಾರಿ ತಪ್ಪಿಸಿದ್ದರು ಎನ್ನುವುದನ್ನು ಸಾಬೀತುಗೊಳಿಸುವಲ್ಲಿ ಐದು ದಾಖಲೆಗಳನ್ನು ನಿರ್ಣಾಯಕವೆಂದು ಸರಕಾರವು ಗುರುತಿಸಿತ್ತು.
ಜುಲೈ 2009ರಲ್ಲಿ ಸಲ್ಲಿಸಿದ್ದ ಮೊದಲ ಅಫಿದಾವಿತ್‌ನಲ್ಲಿ ಗೃಹ ಸಚಿವಾಲಯವು ಇಶ್ರತ್ ಮತ್ತು ಸಹಚರರು ಲಷ್ಕರ್ ಉಗ್ರರಾಗಿದ್ದರು ಎಂದು ತಿಳಿಸಿತ್ತು. ಎರಡು ತಿಂಗಳ ಬಳಿಕ ಲಷ್ಕರ್ ಹೆಸರನ್ನು ತೆಗೆದು ಹಾಕಲು ಅಫಿದಾವಿತ್‌ನ್ನು ಬದಲಿಸಲಾಗಿತ್ತು.

ಅಫಿದಾವಿತ್‌ನಿಂದ ಲಷ್ಕರ್ ಹೆಸರನ್ನು ತೆಗೆದು ಹಾಕಿದ್ದು ಮೋದಿಗೆ ಬೆದರಿಕೆಯನ್ನು ಕಡೆಗಣಿಸುವ ಮತ್ತು ಇಶ್ರತ್ ಹಾಗೂ ಸಹಚರರನ್ನು ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿತ್ತು ಎಂದು ಹೇಳುವ ಮೂಲಕ ಅವರ ಸರಕಾರವನ್ನು ಮುಜುಗರಕ್ಕೆ ಸಿಲುಕಿಸುವ ಉದ್ದೇಶದಿಂದ ಕಾಂಗ್ರೆಸ್ ನಡೆಸಿದ್ದ ಪಿತೂರಿಯಾಗಿತ್ತು ಎಂದು ಆಡಳಿತ ಬಿಜೆಪಿ ಸುದೀರ್ಘ ಕಾಲದಿಂದ ಪ್ರತಿಪಾದಿಸುತ್ತಿದೆ.
ಗೃಹ ಕಾರ್ಯದರ್ಶಿಗಳು ಅಟಾರ್ನಿ ಜನರಲ್‌ಗೆ ಬರೆದಿದ್ದ ಪತ್ರ,ಅಟಾರ್ನಿ ಜನರಲ್ ಸಿದ್ಧಪಡಿಸಿದ್ದ ಕರಡು,ಇದಕ್ಕೆ ಚಿದಂಬರಂ ಅವರು ಮಾಡಿದ್ದ ತಿದ್ದುಪಡಿಗಳು ಮತ್ತು ಎರಡನೆ ಅಫಿದಾವಿತ್‌ನ ಅಂತಿಮ ಪ್ರತಿ ಇವು ನಾಪತ್ತೆಯಾಗಿರುವ ದಾಖಲೆಗಳಲ್ಲಿ ಸೇರಿವೆ.
 ಗೃಹ ಸಚಿವಾಲಯವು ಈಗ ಸಿದ್ಧಗೊಳಿಸಿರುವ 50 ಪುಟಗಳ ವರದಿಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅಫಿದಾವಿತ್‌ನ ಬದಲಾವಣೆಯನ್ನು ಚಿದಂಬರಂ ಒಬ್ಬರೇ ಮಾಡಿದ್ದಲ್ಲ. ಆಗಿನ ಗೃಹ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ಅವರೂ ಸಾಥ್ ನೀಡಿದ್ದರು ಎಂದು ಪ್ರತಿಪಾದಿಸಿದೆ.
ದಾಖಲೆಗಳನ್ನು ತಿದ್ದಿದ್ದಕ್ಕೆ ನೂತನ ವರದಿಯು ಯಾರನ್ನೂ ದೂರಿಲ್ಲ. ಆದರೆ ಆಗ ಗೃಹ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದ ದೀಪ್ತಿ ವಿಲಾಸ ಅವರ ಹೆಸರನ್ನು ಮಾತ್ರ ಪ್ರಸ್ತಾಪಿಸಿದೆ. 2009ರಲ್ಲಿಯೇ ಕೆಲವು ದಾಖಲೆಗಳು ನಾಪತ್ತೆಯಾಗಿದ್ದನ್ನು ವಿಲಾಸ ಗಮನಿಸಿದ್ದರು ಮತ್ತು ಈ ಬಗ್ಗೆ ಅವರು ಪ್ರಶ್ನಿಸಬೇಕಾಗಿತ್ತು. ಯಾವುದೇ ಸಂದರ್ಭದಲ್ಲಿಯೂ ಜಂಟಿ ಕಾರ್ಯದರ್ಶಿಯಾದವರು ಅಪೂರ್ಣ ಕಡತಗಳನು ಸ್ವೀಕರಿಸುವಂತಿಲ್ಲ ಎಂದು ವರದಿಯು ಬೆಟ್ಟು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News