ಎಂಐಟಿಯಲ್ಲಿ ಕಲಿಸಲು ಸೂಪರ್ 30 ಆನಂದ್‌ಗೆ ಆಹ್ವಾನ

Update: 2016-07-03 04:47 GMT

ಎಂಐಟಿ ಮತ್ತು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಯೋಜನೆಯಾಗಿರುವ ವಿಸ್ತತವಾದ ಮುಕ್ತ ಅಂತರ್ಜಾಲ ಕೋರ್ಸ್ ಎಡ್‌ಎಕ್ಸ್‌ನಲ್ಲಿ ಗಣಿತ ಪಾಠ ಮಾಡಲು ಸೂಪರ್ 30 ಸಂಸ್ಥಾಪಕ ಆನಂದ್ ಕುಮಾರ್ ಅವರಿಗೆ ಮಸಾಚ್ಯುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಕರೆ ಬಂದಿದೆ. ಎಡ್‌ಎಕ್ಸ್ ಕೆಲವು ಉಚಿತ ಪಾಠಗಳೂ ಸೇರಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್, ಮಾಂಡರಿನ್, ಫ್ರೆಂಚ್ ಮತ್ತು ಸ್ಪಾನಿಷ್ ಭಾಷೆಗಳ ವಿಶ್ವವಿದ್ಯಾನಿಲಯ ಮಟ್ಟದ ಕೋರ್ಸುಗಳನ್ನು ನಡೆಸುತ್ತದೆ. ತನ್ನ ವೇದಿಕೆಯನ್ನು ಜನರು ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವ ಬಗ್ಗೆ ಅದು ಸಂಶೋಧನೆಯನ್ನೂ ಮಾಡುತ್ತದೆ. ಎಂಐಟಿ ಪ್ರೊಫೆಸರ್ ಅನಂತ್ ಅಗರ್‌ವಾಲ್ ಅವರು ಕುಮಾರ್ ಅವರಿಗೆ ಪತ್ರ ಬರೆದು ಸೂಪರ್ 30 ಎನ್ನುವ ಅವರ ಸಂಸ್ಥೆಯು ಎಡ್‌ಎಕ್ಸ್‌ಗೆ ಸಮನಾದ ಯೋಜನೆಯಾಗಿರುವ ಕಾರಣ ಜೊತೆಯಾಗಿ ಕೆಲಸ ಮಾಡುವ ಮೂಲಕ ಹೆಚ್ಚು ಮಂದಿಯನ್ನು ತಲುಪಬಹುದು ಎಂದು ಆಹ್ವಾನಿಸಿದ್ದಾರೆ.

ಪಾಟ್ನಾದಲ್ಲಿ ಹುಟ್ಟಿ ಬೆಳೆದ ಆನಂದ್ ಕುಮಾರ್ ಬಹಳ ಪ್ರತಿಭಾನ್ವಿತರಾಗಿದ್ದರೂ ಬಡತನದಲ್ಲಿಯೇ ವಿದ್ಯಾಭ್ಯಾಸ ಮುಗಿಸಿದವರು. ಅಂಚೆ ಇಲಾಖೆಯಲ್ಲಿ ಗುಮಾಸ್ತರಾಗಿದ್ದ ಅವರ ತಂದೆ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುವಷ್ಟು ಶ್ರೀಮಂತರಾಗಿರಲಿಲ್ಲ. ಆದರೆ ಗಣಿತದಲ್ಲಿ ಪ್ರತಿಭಾನ್ವಿತರಾಗಿದ್ದ ಕುಮಾರ್ ಪದವಿಯಲ್ಲಿ ನಂಬರ್ ಥಿಯರಿಯಲ್ಲಿ ಸಲ್ಲಿಸಿದ ಅಧ್ಯಯನ ವರದಿಗೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಹೆಚ್ಚಿನ ಓದಿಗೆ ಅವಕಾಶ ಬಂದಿತ್ತು. ಆದರೆ ಅದೇ ಸಮಯದಲ್ಲಿ ತಂದೆಯ ಮರಣದ ಕಾರಣ ಹಣಕಾಸು ಸಮಸ್ಯೆಯಾಗಿ ಅವರು ಅದನ್ನು ಬಳಸಿಕೊಳ್ಳಲಾಗಿರಲಿಲ್ಲ. ಹಗಲು ಗಣಿತ ಓದುತ್ತಿದ್ದ ಆನಂದ್ ಕುಮಾರ್ ಸಂಜೆಯ ಸಮಯದಲ್ಲಿ ತಾಯಿಯ ಜೊತೆಗೆ ಹಪ್ಪಳ ಮಾರುವ ಸಣ್ಣ ಉದ್ಯಮದಲ್ಲಿ ಬಾಗಿಯಾಗಿ ಕುಟುಂಬಕ್ಕೆ ನೆರವಾಗುತ್ತಿದ್ದರು. ಹಣಕ್ಕಾಗಿ ಮಕ್ಕಳಿಗೆ ಗಣಿತ ಟ್ಯೂಷನ್ ಕೂಡ ಕೊಡುತ್ತಿದ್ದರು. ವಿದೇಶಿ ಜರ್ನಲ್‌ಗಳನ್ನು ಓದಲು ಪಾಟ್ನಾದಲ್ಲಿ ಸಾಧ್ಯವಾಗದೆ ಇದ್ದಾಗ ವಾರಾಂತ್ಯದಲ್ಲಿ ವಾರಣಾಸಿಗೆ ಹೋಗಿ ತನ್ನ ಸೋದರ ಸಂಬಂಧಿಯ ಜೊತೆಗೆ ಹಾಸ್ಟೆಲಲ್ಲಿ ಒಂದು ದಿನ ಇದ್ದು ಹೆಚ್ಚಿನ ಓದು ಪಡೆಯುತ್ತಿದ್ದರು.

ಆನಂದ್ ಕುಮಾರ್ ಇತ್ತೀಚೆಗೆ ಆರಂಭಿಸಿದ ಸೂಪರ್ 30 ಯೋಜನೆಯ ಮೂಲಕ ಶೋಷಿತ ವರ್ಗದ ವಿದ್ಯಾರ್ಥಿಗಳು ಐಐಟಿ ಜೆಇಇಗೆ ಸಿದ್ಧತೆ ಮಾಡಿಕೊಳ್ಳಲು ಉಚಿತವಾಗಿ ತರಬೇತಿಕೊಡಲಾಗುತ್ತಿದೆ. 2002ರಲ್ಲಿ ಆರಂಭವಾದ ಈ ಯೋಜನೆಯಲ್ಲಿ ಕಳೆದ 14 ವರ್ಷಗಳಿಂದ 325ಕ್ಕೂ ಅಧಿಕ ವಿದ್ಯಾರ್ಥಿಗಳು ಐಐಟಿ ಪೂರ್ವ ಪರೀಕ್ಷೆ ಪಾಸಾಗಿದ್ದಾರೆ. ಈ ವರ್ಷ ಸೂಪರ್ 30ಯ 30 ವಿದ್ಯಾರ್ಥಿಗಳ ಪೈಕಿ 28 ಮಂದಿ ಐಐಟಿ ಸೇರಿದ್ದಾರೆ. “ನಿಮ್ಮ ಸೂಪರ್ 30 ವಿಷಯಗಳನ್ನು ನಮ್ಮ ವೇದಿಕೆಯಲ್ಲಿ ತೆಗೆದುಕೊಂಡು ಬಂದಾಗ ಹೇಗೆ ಜೊತೆಯಾಗಿ ಕೆಲಸ ಮಾಡಬಹುದು ಎಂದು ತಿಳಿಯಲು ಉತ್ಸುಕರಾಗಿದ್ದೇವೆ. ಎಡ್‌ಎಕ್ಸ್ ನಿಮ್ಮ ರೀತಿಯ ಗುರಿಗಳನ್ನೇ ಪಡೆಯಲು ಯೋಜಿಸಿದೆ. ಭಾರತ ಮತ್ತು ಜಾಗತಿಕವಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಸಮಾನ ಅವಕಾಶಗಳನ್ನು ನೀಡುವುದು ನಮ್ಮ ಗುರಿ ಎಂದು ಎಂಐಟಿ ಪ್ರೊಫೆಸರ್ ಆನಂದ್ ಕುಮಾರ್ ಅವರಿಗೆ ಹೇಳಿದ್ದಾರೆ. ಎಂಐಟಿಯಂತಹ ಸಂಸ್ಥೆ ತಮ್ಮ ಪ್ರತಿಭೆಗೆ ಮೌಲ್ಯ ಕೊಟ್ಟಿರುವುದು ಆನಂದ್ ಕುಮಾರ್‌ಗೆ ಖುಷಿಯಾಗಿದೆ. ಅವರೂ ಗುಣಮಟ್ಟದ ವಸ್ತುವಿಷಯಗಳನ್ನು ನೀಡಿ ಶೋಷಿತ ವರ್ಗದ ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವುದು ನೋಡಿ ಖುಷಿಯಾಗಿದೆ” ಎನ್ನುತ್ತಾರೆ ಆನಂದ್ ಕುಮಾರ್.

ಕೃಪೆ: www.ndtv.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News