ಅಕಾಡಮಿ, ಪ್ರಾಧಿಕಾರಗಳಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆ

Update: 2024-03-22 09:56 GMT

ಬೆಂಗಳೂರು: ಹಲವು ತಿಂಗಳಿನಿಂದ ಖಾಲಿ ಉಳಿದಿದ್ದ ವಿವಿಧ ಸಾಹಿತ್ಯ ಮತ್ತು ಸಾಂಸ್ಕೃತಿಕ, ಭಾಷಾ ಅಕಾಡಮಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರು ಮತ್ತು ಸದಸ್ಯರ ನೇಮಕವಾಗಿದ್ದು, ಅದರಲ್ಲಿ ಮಹಿಳಾ ಪ್ರಾತಿನಿಧ್ಯ ಕಡಿಮೆ ಇರುವುದರಿಂದ ಸಾಹಿತ್ಯಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಕುವೆಂಪು ಭಾಷಾ ಪ್ರಾಧಿಕಾರ ಸೇರಿದಂತೆ ವಿವಿಧ 19 ಅಕಾಡಮಿಗಳ ಅಧ್ಯಕ್ಷ ಮತ್ತು ಸದಸ್ಯರ ಪೂರ್ಣ ಪ್ರಮಾಣದ ನೇಮಕವಾಗಿದೆ. ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡಮಿಗೆ ಮಾತ್ರ ಮಹಿಳಾ ಅಧ್ಯಕ್ಷರನ್ನು ನೇಮಿಸಲಾಗಿದೆ. 161 ಸದಸ್ಯರಲ್ಲಿ ಕೇವಲ 25 ಮಹಿಳಾ ಸದಸ್ಯರು ಇರುವುದು ಕೇವಲ ನಾಮಕಾವಸ್ಥೆಗೆ ನೇಮಕ ಮಾಡಿದಂತಿದೆ.

ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಾಗಿ ಅಪಾರ ಸಾಧನೆ ಮಾಡಿದ ಮಹಿಳೆಯರು ಅನೇಕರು ಇದ್ದಾರೆ. ಹಾಗೂ ಒಂದು ಸಂಸ್ಥೆಯನ್ನು ಮುನ್ನಡೆಸುವ ಸಮರ್ಥರು, ಆಡಳಿತ ನೈಪುಣ್ಯತೆ ಇರುವ ಮಹಿಳೆಯರು ಇದ್ದರೂ ಎಲ್ಲ ಅಕಾಡಮಿಗಳಿಗೆ ಪುರುಷ ಅಧ್ಯಕ್ಷರನ್ನು ನೇಮಕ ಮಾಡಿರುವುದು ಸರಕಾರ ಮಹಿಳೆಯರನ್ನು ಕಡೆಗಣಿಸಿದಂತೆ ಆಗಿದೆ.

ಸಮಾನತೆ ಮತ್ತು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ರಾಜ್ಯ ಸರಕಾರ ಮಹಿಳೆಯರಿಗೆ ಸಿಗಬೇಕಾದ ನ್ಯಾಯಯುತ ಸ್ಥಾನಮಾನಗಳನ್ನು ನೀಡುವಲ್ಲಿ ಸೋತಿದೆ. ರಾಜಕೀಯ ಒತ್ತಡಕ್ಕೆ ಮಣಿದು ಅಕಾಡಮಿ ಪ್ರಾಧಿಕಾರಗಳ ಅಧ್ಯಕ್ಷ ಮತ್ತು ಸದಸ್ಯರ ನೇಮಕವಾಗಿದೆ ಎನ್ನುವ ಸಾರ್ವಜನಿಕರ ಆರೋಪವನ್ನು ಮುಂದಿನ ದಿನಗಳಲ್ಲಾದರೂ ಸರಕಾರ ಎದುರಿಸಬೇಕಾಗಿದೆ.

ಸರಕಾರ ಯಾವುದೇ ಪ್ರಾಧಿಕಾರ ಮತ್ತು ಅಕಾಡಮಿಗೆ ಆಯ್ಕೆ ಮಾಡಬೇಕಾದರೆ ಶೇ.೩೦ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕು. ಕನಿಷ್ಠ ೩ಜನ ಮಹಿಳಾ ಅಧ್ಯಕ್ಷರನ್ನು ನೇಮಕ ಮಾಡಬಹುದು ಎಂಬ ನಿರೀಕ್ಷೆ ಮಾಡಿದ್ದೆವು. ಆದರೆ ಸರಕಾರ ಕೇವಲ ಒಬ್ಬ ಮಹಿಳೆಗೆ ಅಧ್ಯಕ್ಷ ಸ್ಥಾನ ನೀಡಿರುವುದು ಬೇಸರದ ಸಂಗತಿ. ಮಹಿಳೆಯರು ತಮ್ಮದೇ ಆದ ಕಾರ್ಯವೈಖರಿಯನ್ನು ಹೊಂದಿರುತ್ತಾರೆ. ಯಾವುದೇ ಸರಕಾರವಿದ್ದರೂ ಮಹಿಳೆಯರನ್ನು ಗುರುತಿಸಬೇಕು. ಮುಂದಿನ ದಿನಗಳಲ್ಲಾದರೂ ಸರಕಾರ ಮಹಿಳಾ ಪ್ರಾತಿನಿಧ್ಯವನ್ನು ನೀಡಬೇಕು.

-ಎಚ್.ಎಲ್.ಪುಷ್ಪಾ, ಕರ್ನಾಟಕ ರಾಜ್ಯ ಲೇಖಕಿಯರ ಸಂಘದ ಅಧ್ಯಕ್ಷೆ

ನೂತನ ಸರಕಾರ ಅಧಿಕಾರಕ್ಕೆ ಬಂದು 9 ತಿಂಗಳಾದ ನಂತರ ಖಾಲಿ ಉಳಿದಿದ್ದ ಅಕಾಡಮಿಗಳ ಅಧ್ಯಕ್ಷರು ಮತ್ತು ಸದಸ್ಯರ ನೇಮಕ ಮಾಡಿರುವುದು ಸ್ವಾಗತಾರ್ಹ. ಆದರೆ, ಒಟ್ಟು 19 ಅಕಾಡಮಿಗಳಲ್ಲಿ ಕೇವಲ ಒಬ್ಬರು ಮಾತ್ರ ಮಹಿಳಾ ಅಧ್ಯಕ್ಷರಾಗಿದ್ದಾರೆ. ಜನಸಂಖ್ಯೆಯಲ್ಲಿ ಅರ್ಧದಷ್ಟು ಮಹಿಳೆಯರು ಇರುವಾಗ ಜನಸಂಖ್ಯೆಗೆ ಅನುಗುಣವಾದ ನೇಮಕ ಮಾಡಿ ಮಹಿಳೆಯರನ್ನು ಸಬಲೀಕರಣಗೊಳಿಸುವಲ್ಲಿ ಕರ್ನಾಟಕ ಮಾದರಿಯಾಗಬೇಕಾಗಿತ್ತು. ಆದರೆ, ರಾಜ್ಯ ಸರಕಾರ ಮಹಿಳೆಯರನ್ನು ನಿರ್ಲಕ್ಷಿಸಿರುವ ಇಂತಹ ನಡೆಯನ್ನು ನಾನು ನಿರೀಕ್ಷಿಸಿರಲಿಲ್ಲ.

-ಡಾ. ಕೆ.ಷರೀಫಾ, ಲೇಖಕಿ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಮಾಳಿಂಗರಾಯ ಕೆಂಭಾವಿ

contributor

Similar News