ಉತ್ತರಾಖಂಡ : ಅವಶೇಷಗಳ ಅಡಿಯಿಂದ ಎರಡು ದಿನಗಳ ಬಳಿಕ ಜೀವಂತ ಬಂದ ಮಹಿಳೆ!
ಡೆಹ್ರಾಡೂನ್, ಜು.4: ಉತ್ತರಾಖಂಡದ ಪಿಥೋರ್ಗಢ ಜಿಲ್ಲೆಯಲ್ಲಿ ಭೀಕರ ಪ್ರವಾಹ ಪರಿಸ್ಥಿತಿಯಿಂದ ಆಗಿರುವ ಅನಾಹುತಗಳ ಪರಿಹಾರ ಕಾರ್ಯ ಸಮರೋಪಾದಿಯಲ್ಲಿ ನಡೆದಿದೆ. ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಎರಡು ದಿನಗಳ ಕಾಲ ಅವಶೇಷಗಳ ಅಡಿ ಸಿಕ್ಕಿಹಾಕಿಕೊಂಡಿದ್ದ ಮಹಿಳೆಯೊಬ್ಬರನ್ನು ಜೀವಂತವಾಗಿ ಹೊರ ತೆಗೆಯುವಲ್ಲಿ ಅಸ್ಸಾಂ ರೈಫಲ್ ರೆಜಿಮೆಂಟ್ ನ ಯೋಧರು ಯಶಸ್ವಿಯಾಗಿದ್ದಾರೆ.
"ಈ ಮಹಿಳೆ ಪಿಥೋರ್ಗಢ ಜಿಲ್ಲೆಯ ಬಸ್ತದಿ ಗ್ರಾಮದಲ್ಲಿ ಕುಸಿದು ಬಿದ್ದ ಮನೆಯೊಂದರ ಅವಶೇಷಗಳಡಿ ಸಿಕ್ಕಿಹಾಕಿಕೊಂಡಿದ್ದರು. ಪರಿಹಾರ ಕಾರ್ಯಾಚರಣೆ ಬಳಿಕ ಸೇನೆಯ ಯೋಧರು ಆಕೆಯನ್ನು ಸುರಕ್ಷಿತವಾಗಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ" ಎಂದು ಜಿಲ್ಲಾ ನಿರ್ವಹಣಾಧಿಕಾರಿ ಆರ್.ಎಸ್.ರಾಣಾ ಪ್ರಕಟಿಸಿದರು. ಈ ವೃದ್ಧ ಮಹಿಳೆಯನ್ನು ಪತ್ತೆ ಮಾಡುವ, ಹೊರತೆಗೆಯುವ ಕಾರ್ಯಾಚರಣೆ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸರ್ವತ್ರ ಮೆಚ್ಚುಗೆ ವ್ಯಕ್ತವಾಗಿದೆ. ಸುಮಾರು 2.13 ಲಕ್ಷ ಮಂದಿ ಫೇಸ್ಬುಕ್ ನಲ್ಲಿ ಈ ವಿಡಿಯೊ ವೀಕ್ಷಿಸಿದ್ದಾರೆ.
ಈ ಮಧ್ಯೆ ರಾಷ್ಟ್ರೀಯ ವಿಕೋಪ ಸ್ಪಂದನೆ ಪಡೆ, ರಾಜ್ಯ ವಿಕೋಪ ಸ್ಪಂದನೆ ಪಡೆ, ಇಂಡೋ- ಟಿಬೇಟಿಯನ್ ಪೊಲೀಸ್ ಪಡೆ, ಸೀಮಾ ಸುರಕ್ಷಾ ಬಲ್ ಹಾಗೂ ಭಾರತೀಯ ಸೇನೆ ಸಮರೋಪಾದಿ ಕಾರ್ಯಾಚರಣೆ ಮುಂದುವರಿಸಿವೆ. ಪಿಥೋರ್ಗಢ ಹಾಗೂ ಚಮೋಲಿ ಜಿಲ್ಲೆಯಲ್ಲಿ ಭಾನುವಾರವಿಡೀ ಪರಿಹಾರ ಕಾರ್ಯಾಚರಣೆ ನಡೆಯಿತು. ರಾಜ್ಯ ವಿಕೋಪ ಸ್ಪಂದನೆ ಪಡೆಯ ಪ್ರಕಾರ, ಈ ದುರಂತದಲ್ಲಿ ಇದುವರೆಗೆ ಪಿಥೋರ್ಗಢ ಜಿಲ್ಲೆಯಲ್ಲಿ 15 ಮಂದಿ ಸಾವಿಗೀಡಗಿದ್ದಾರೆ. ಚಮೋಲಿ ಜಿಲ್ಲೆಯ ಘಾಟಿಯ ಬಳಿ ಮೂವರ ಶವ ಪತ್ತೆಯಾಗಿದೆ. ಇನ್ನೂ ಸುಮಾರು 17 ಮಂದಿ ನಾಪತ್ತೆಯಾಗಿದ್ದಾರೆ.
ಡೆಹ್ರಾಡೂನಲ್ಲಿ, ವಿಕೋಪ ನಿರ್ವಹಣೆ ವಿಭಾಗದ ಕಾರ್ಯದರ್ಶಿಯಾಗಿರುವ ಶೈಲೇಶ್ ಬಗೋಲಿ ಮಾಧ್ಯಮಗಳಿಗೆ ವಿವರ ನೀಡಿ, ತೀವ್ರವಾಗಿ ಗಾಯಗೊಂಡಿರುವ ಮೂವರನ್ನು ವಿಮಾನದ ಮೂಲಕ ರಕ್ಷಿಸಿ ಹೆಚ್ಚಿನ ಚಿಕಿತ್ಸೆಗೆ ಒಯ್ಯಲಾಗಿದೆ ಎಂದು ಹೇಳಿದ್ದಾರೆ. ಭೀಕರ ಪ್ರವಾಹದಿಂದ ಸಂತ್ರಸ್ತರಾಗಿರುವ 160ಕ್ಕೂ ಹೆಚ್ಚು ಕುಟುಂಬಗಳಿಗೆ ಪರಿಹಾರ ಶಿಬಿರಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು 164 ಜಾನುವಾರುಗಳು ಕೂಡಾ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ. ಅವಶೇಷಗಳಡಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಮಂದಿಯನ್ನು ಪತ್ತೆ ಮಾಡುವ ಸಲುವಾಗಿ ಕರೆತಂದಿದ್ದ ಒಂದು ಶ್ವಾನದಳ ಕೂಡಾ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.
ಜುಲೈ ಒಂದರಂದು ಬಿದ್ದ ಕುಂಭದ್ರೋಣ ಮಳೆಯಿಂದ ಸುಮಾರು 969 ಗ್ರಾಮಗಳು ಹಾನಿಗೀಡಾಗಿದ್ದು, 333 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಮರು ಕಲ್ಪಿಸಲಾಗಿದ್ದು, 646 ಗ್ರಾಮಗಳು ಇನ್ನೂ ಕತ್ತಲಲ್ಲೇ ಇವೆ. 79 ಕಡೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹಾನಿಗೀಡಾಗಿದೆ.