×
Ad

ಆಂಧ್ರ ಸರಕಾರದಿಂದ ಸೈಬರ್ ಕಳ್ಳತನ: ತೆಲಂಗಾಣ ಸರಕಾರದಿಂದ ಕೇಂದ್ರಕ್ಕೆ ದೂರು

Update: 2016-07-06 08:41 IST

ಹೈದರಾಬಾದ್, ಜು.6: ತಾನು ಅಭಿವೃದ್ಧಿಪಡಿಸಿದ, ಪ್ರಕರಣಗಳ ಇ- ಫೈಲಿಂಗ್ ಅರ್ಜಿನಮೂನೆಯನ್ನು ಆಂಧ್ರಪ್ರದೇಶ ಸರಕಾರ ಸೈಬರ್‌ನಲ್ಲಿ ಕದಿಯುತ್ತಿದೆ ಎಂದು ತೆಲಂಗಾಣ ಸರಕಾರ ಗಂಭೀರ ದೂರು ನೀಡಿದೆ. ಆಂಧ್ರಪ್ರದೇಶ ಸರಕಾರ ವ್ಯಾಪಾರ ವಹಿವಾಟಿಗೆ ಅನುಕೂಲಕರ ವಾತಾವರಣ ಇರುವ ರಾಜ್ಯದ ಸೂಚ್ಯಂಕದಲ್ಲಿ ಮೇಲುಗೈ ಸಾಧಿಸುವ ಸಲುವಾಗಿ ಈ ವಾಮಮಾರ್ಗ ಅನುಸರಿಸುತ್ತಿದೆ ಎಂದು ಆಪಾದಿಸಿದೆ.

ಈ ಸಂಬಂಧ ತೆಲಂಗಾಣದ ಕೈಗಾರಿಕಾ ಇಲಾಖೆ, ಸೈಬರ್ ಅಪರಾಧ ಪೊಲೀಸರಿಗೆ ದೂರು ನೀಡಿದೆ. ಇದರ ಜತೆಗೆ ರಾಜ್ಯದ ಕೈಗಾರಿಕಾ ಸಚಿವ ಕೆ.ಟಿ.ರಾಮ ರಾವ್, ಆಂಧ್ರದ ಅನೈತಿಕ ಹಾಗೂ ಉಲ್ಲಂಘನೆ ಕೃತ್ಯದ ವಿರುದ್ಧ ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೂ ಮಂಗಳವಾರ ದೂರು ನೀಡಿದ್ದಾರೆ.

ಉಭಯ ರಾಜ್ಯಗಳು ದೇಶೀಯ ಹಾಗೂ ವಿದೇಶಿ ಹೂಡಿಕೆದಾರರನ್ನು ಸೆಳೆಯಲು ಹಲವು ತಂತ್ರಗಳನ್ನು ಅನುಸರಿಸುತ್ತಿದ್ದು, ದೊಡ್ಡ ಕೈಗಾರಿಕೆಗಳ ಸ್ಥಾಪನೆಗೆ ಹಾಗೂ ಉದ್ಯೋಗ ಮತ್ತು ಸಂಪತ್ತು ಸೃಷ್ಟಿ ಯೋಜನೆಗಳಿಗೆ ಒತ್ತು ನೀಡಿವೆ. ಹೂಡಿಕೆದಾರರು ಮುಖ್ಯವಾಗಿ ವಹಿವಾಟು ನಡೆಸಲು ಇರುವ ವಾತಾರವಣ ಸೂಚ್ಯಂಕ (ಇಓಬಿಡಿ)ವನ್ನು ಮಾನದಂಡವಾಗಿ ಪರಿಗಣಿಸುವುದರಿಂದ ಈ ಸೂಚ್ಯಂಕದಲ್ಲಿ ಮೇಲೇರಲು ಪ್ರಯತ್ನ ನಡೆಸಿವೆ. ಕೇಂದ್ರ ಸರಕಾರದ ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಮಂಡಳಿ ಈ ಸೂಚ್ಯಂಕ ನೀಡುತ್ತದೆ. ಇದು ಹೂಡಿಕೆದಾರರಿಗೆ ರಾಜ್ಯ ಸರಕಾರ ನೀಡುವ ನೆರವಿನ ಪ್ರಮಾಣವನ್ನು ಆಧರಿಸಿ ಇರುತ್ತದೆ.

ವಿವಿಧ ಇಒಬಿಡಿ ಮಾನದಂಡಗಳನ್ನು ಅನುಷ್ಠಾನಗೊಳಿಸುವಂತೆ ಎಲ್ಲ ರಾಜ್ಯಗಳಿಗೆ ಸೂಚಿಸಲಾಗಿದ್ದು, ಈ ಸಂಬಂಧ ಸಲ್ಲಿಸಿರುವ 340 ಪ್ರಶ್ನೆಗಳ ಪ್ರಶ್ನಾವಳಿಯನ್ನು ಜೂನ್ ತಿಂಗಳ ಅಂತ್ಯದ ಒಳಗಾಗಿ ಕೇಂದ್ರಕ್ಕೆ ಸಲ್ಲಿಸುವಂತೆ ತಿಳಿಸಲಾಗಿತ್ತು. ಇದನ್ನು ಬಳಿಕ ಜುಲೈ 7ರವರೆಗೆ ವಿಸ್ತರಿಸಲಾಗಿದೆ. ತೆಲಂಗಾಣ ಈಗಾಗಲೇ ಈ ಪ್ರಶ್ನಾವಳಿಗೆ ಉತ್ತರಿಸಿ, ಕೇಂದ್ರಕ್ಕೆ ಸಲ್ಲಿಸಿದೆ.

ತನ್ನ ಅಧಿಕಾರಿಗಳು ಸಿದ್ಧಪಡಿಸಿದ ಆನ್‌ಲೈನ್ ಅರ್ಜಿಗಳನ್ನು ಆಂಧ್ರ ಸರ್ಕಾರ ಕದಿಯುತ್ತಿದೆ. ಮುಖ್ಯ ಕಾರ್ಯದರ್ಶಿ ರಾಜೀವ್ ಶರ್ಮಾ ಅವರು ಈಗಾಗಲೇ ಕೈಗಾರಿಕಾ ವಿಬಾಗದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಮಾರ್ ಜತೆಗೆ ಚರ್ಚೆ ನಡೆಸಿದ್ದು, ಈ ಬಗ್ಗೆ ಕಾನೂನಾತ್ಮಕ ಹೋರಾಟಕ್ಕೆ ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News