ಗೂಗಲ್, ಯಾಹೂ, ಮೈಕ್ರೊಸಾಫ್ಟ್‌ಗೆ ಸುಪ್ರೀಂಕೋರ್ಟ್ ಮಂಗಳಾರತಿ
ಹೊಸದಿಲ್ಲಿ, ಜು.6:ಭ್ರೂಣಲಿಂಗ ಪತ್ತೆ ಹಾಗೂ ಗರ್ಭಪಾತದ ಜಾಹೀರಾತುಗಳನ್ನು ತಮ್ಮ ಜಾಲತಾಣಗಳಲ್ಲಿ ಪ್ರಚುರಪಡಿಸುವ ಮೂಲಕ ತನ್ನ ಆದೇಶವನ್ನು ಉಲ್ಲಂಘಿಸುತ್ತಿರುವ ಬಗ್ಗೆ ಸರ್ಚ್ ಇಂಜಿನ್ ದೈತ್ಯ ಕಂಪನಿಗಳಾದ ಗೂಗಲ್, ಯಾಹೂ ಹಾಗೂ ಮೈಕ್ರೊಸಾಫ್ಟ್‌ಗಳಿಗೆ ಸುಪ್ರೀಂಕೋರ್ಟ್ ಚಾಟಿಯೇಟು ನೀಡಿದೆ.
ಅಂಥ ಜಾಹೀರಾತುಗಳಿಗೆ ಅವಕಾಶ ಮಾಡಿಕೊಡುವ ಮೂಲಕ ಸರ್ಚ್ ಇಂಜಿನ್‌ಗಳು ನಿಯಮ ಉಲ್ಲಂಘಿಸುತ್ತಿವೆ ಎಂದು ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಆರ್.ಭಾನುಮತಿ ಅವರನ್ನು ಒಳಗೊಂಡ ನ್ಯಾಯಪೀಠ ಕಿಡಿ ಕಾರಿದೆ. ಇಂಥ ಸರ್ಚ್ ಇಂಜಿನ್‌ಗಳ ಪ್ರತಿನಿಧಿಗಳು ಹಾಗೂ ತಾಂತ್ರಿಕ ತಜ್ಞರ ಜತೆ ಸಬೆ ನಡೆಸಿ, ಈ ಸಮಸ್ಯೆ ಬಗೆಹರಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲು ಕೇಂದ್ರ ಸರಕಾರಕ್ಕೆ 10 ದಿನಗಳ ಗಡುವು ನೀಡಲಾಗಿದೆ.
ಇಂಥ ಜಾಹೀರಾತುಗಳನ್ನು ತಡೆಯಲು ನಾವು ಏನೂ ಮಾಡುವಂತಿಲ್ಲ ಎಂಬ ಹಾರಿಕೆಯ ಉತ್ತರವನ್ನು ಈ ಕಂಪೆನಿಗಳು ನೀಡುತ್ತಿವೆ. ಇದು ಖಂಡಿತಾ ಒಪ್ಪುವಂಥ ವಿಚಾರವಲ್ಲ. ಇದನ್ನು ತಡೆಯಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಜುಲೈ 25ರೊಳಗೆ ವರದಿಯನ್ನು ಸಲ್ಲಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಸೂಚಿಸಿದೆ. ಈ ವರದಿ ಆಧಾರದಲ್ಲಿ ಪ್ರಕರಣದ ಬಗ್ಗೆ ತೀರ್ಪು ನೀಡಲಾಗುವುದು ಎಂದು ಸ್ಪಷ್ಟಪಡಿಸಿದೆ.