'ಮೇಕ್ ಇನ್ ಇಂಡಿಯಾ' ಖ್ಯಾತಿಯ ಭಾರತಕ್ಕೆ ಇನ್ನು ಮೇಡ್ ಇನ್ ಮೊಝಾಂಬಿಕ್ ಬೇಳೆ !
ಹೊಸದಿಲ್ಲಿ, ಜು.6: ಭಾರತದಲ್ಲಿ ಬೇಳೆಕಾಳುಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಆಫ್ರಿಕನ್ ದೇಶವಾದ ಮೊಝಾಂಬಿಕ್, ಭಾರತೀಯ ತಳಿಗಳನ್ನು ಬೆಳೆಯಲು ಮುಂದಾಗಿದೆ. ಅದರಲ್ಲೂ ಮುಖ್ಯವಾಗಿ ತೊಗರಿ ಹಾಗೂ ಉದ್ದನ್ನು ಬೆಳೆದು ಭಾರತಕ್ಕೆ ಮಾರಾಟ ಮಾಡಲು ನಿರ್ಧರಿಸಿದೆ.
ಮೊಜಾಂಬಿಕ್‌ನಿಂದ ಆಮದು ಮಾಡಿಕೊಳ್ಳುತ್ತಿರುವ ಬೇಳೆಕಾಳು ಪ್ರಮಾಣವನ್ನು ದುಪ್ಪಟ್ಟುಗೊಳಿಸುವ ಕುರಿತ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಮೊಝಾಂಬಿಕ್ನಿಂದ ಇದೀಗ ಒಂದು ಲಕ್ಷ ಟನ್ ಬೇಳೆಕಾಳು ಆಮದು ಮಾಡಿಕೊಳ್ಳಲಾಗುತ್ತಿದ್ದು, ಇದನ್ನು 2020-21ರೊಳಗೆ ಎರಡು ಲಕ್ಷ ಟನ್‌ಗೆ ಹೆಚ್ಚಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ.
ಈ ನಿರ್ಧಾರವನ್ನು ಪ್ರಕಟಿಸಿದ ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರವಿಶಂಕರ್ ಪ್ರಸಾದ್ ಅವರು, ಮೊಝಾಂಬಿಕ್ನಲ್ಲಿ ಬೆಳೆದ ಬೇಳೆಕಾಳುಗಳು ಭಾರತದಲ್ಲಿ ಬೆಳೆದ ಬೇಳೆಕಾಳುಗಳ ರುಚಿಯನ್ನೇ ಹೊಂದಿರುತ್ತದೆ. ಇತರ ದೇಶಗಳಲ್ಲಿ ಬೆಳೆದ ಬೇಳೆಗಳಿಗಿಂತ ರುಚಿ ಭಿನ್ನವಾಗಿರುತ್ತದೆ. ಆದ್ದರಿಂದ ಇತರ ದೇಶಗಳಲ್ಲಿ ಬೆಳೆದ ಬೇಳೆಕಾಳುಗಳಿಗೆ ಭಾರತದಲ್ಲಿ ಬೇಡಿಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ನಿಟ್ಟಿನಲ್ಲಿ ಮೊಝಾಂಬಿಕ್ಗೆ ಉತ್ತಮ ಗುಣಮಟ್ಟದ ಬಿತ್ತನೆಬೀಜ ಹಾಗೂ ತಾಂತ್ರಿಕ ನೆರವನ್ನು ಭಾರತ ನೀಡಲಿದೆ. ಇದರ ಜತೆಗೆ ಭಾರತ ಮೊಝಾಂಬಿಕ್ಗೆ ಹಣಕಾಸು ನೆರವನ್ನೂ ನೀಡಿ, ಅಲ್ಲಿ ಬೆಳೆದ ಬೇಳೆಗಳನ್ನು ಸಂಪೂರ್ಣವಾಗಿ ಆಮದು ಮಾಡಿಕೊಳ್ಳುವ ಭರವಸೆಯನ್ನೂ ನೀಡಲಾಗಿದೆ ಎಂದು ತಿಳಿದುಬಂದಿದೆ.