ಕೇರಳದಲ್ಲಿ ಇನ್ನು ಹೊಸ ಕೊಬ್ಬು ತೆರಿಗೆ !

Update: 2016-07-08 12:02 GMT

ತಿರುವನಂತಪುರಂ, ಜು.8: ಕೇರಳದ ಪಿಝಾ, ಬರ್ಗರ್ ಮುಂತಾದ ಜಂಕ್ ಫುಡ್ ಪ್ರಿಯರಿಗೆ ಒಂದು ಕೆಟ್ಟ ಸುದ್ದಿಯಿದೆ. ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ರಾಜ್ಯದ ಪಿಣರಾಯಿ ವಿಜಯನ್ ನೇತೃತ್ವದ ಸರಕಾರ ‘ಫ್ಯಾಟ್ ಟ್ಯಾಕ್ಸ್’ (ಕೊಬ್ಬು ತೆರಿಗೆ)ನ್ನು ಜಂಕ್ ಫುಡ್ ತಿನ್ನುವವರಿಗೆ ವಿಧಿಸಿದೆ. ಈ ವಿಚಾರವನ್ನು ಇಂದು ಕೇರಳ ವಿತ್ತ ಸಚಿವ ಥಾಮಸ್ ಐಸಾಕ್ ತಾವು ಮಂಡಿಸಿದ ಎಲ್‌ಡಿಎಫ್ ಸರಕಾರದ ಪ್ರಥಮ ಬಜೆಟ್‌ನಲ್ಲಿ ಘೋಷಿಸಿದರು.

ಪಿಝಾ, ಬರ್ಗರ್, ಟಾಕೋ, ಡಫ್ ನಟ್ಸ್, ಸ್ಯಾಂಡ್ ವಿಚ್, ಪಾಸ್ತಾ, ಬರ್ಗರ್ ಪ್ಯಾಟಿ ಹಾಗೂ ಬ್ರೆಡ್ ಫಿಲ್ಲಿಂಗ್ ಮಾರುವ ಬ್ರ್ಯಾಂಡೆಡ್ ರೆಸ್ಟೊರೆಂಟುಗಳ ಮೇಲೆ ಸರಕಾರ 14.5 ಶೇ. ಕೊಬ್ಬು ತೆರಿಗೆ ವಿಧಿಸುವುದಾಗಿ ಥಾಮಸ್ ತಿಳಿಸಿದರು. ಫಾಸ್ಟ್ ಫುಡ್ ಚೈನ್‌ಗಳಾದ ಮೆಕ್ ಡೊನಾಲ್ಡ್ಸ್, ಡಾಮಿನೋಸ್, ಪಿಝಾ ಹಟ್, ಸಬ್ ವೇ ಮುಂತಾದವುಗಳು ಈ ಹೊಸ ತೆರಿಗೆಯನ್ನು ಪಾವತಿಸಬೇಕಾಗಿದೆ.

ಸರಕಾರದ ಈ ಕ್ರಮದ ಹಿಂದಿನ ಕಾರಣವನ್ನು ಥಾಮಸ್ ಅವರ ಬಜೆಟ್ ಭಾಷಣದಲ್ಲಿ ಹೇಳಲಾಗಿಲ್ಲದಿದ್ದರೂ, ಈ ಹೊಸ ತೆರಿಗೆಯಿಂದ 10 ಕೋಟಿ ರೂ.ಸಂಗ್ರಹಿಸುವ ಉದ್ದೇಶ ಸರಕಾರಕ್ಕಿದೆ ಎಂದು ಅವರು ತಿಳಿಸಿದ್ದಾರೆ.

ವಿಎಂಎಸ್ ಬೆಳ್ಳಾರಿ ಎಂಬ ಸಂಸ್ಥೆ 2010ರಲ್ಲಿ ನಡೆಸಲಾದ ಸಮೀಕ್ಷೆಯೊಂದರಲ್ಲಿ ತಿರುವನಂತಪುರಂ ನಗರದ ಹೈಸ್ಕೂಲ್ ವಿದ್ಯಾರ್ಥಿಗಳಲ್ಲಿ 12 ಶೇ. ಮಂದಿ ಹೆಚ್ಚು ತೂಕ ಹೊಂದಿದ್ದರೆ, 6.3 ಶೇ. ಮಕ್ಕಳು ಬೊಜ್ಜು ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿತ್ತು. ಜಿನೇವಾ ಗ್ಲೋಬಲ್ ಹೆಲ್ತ್ 2012 ರಲ್ಲಿ ನಡೆಸಿದ ಇನ್ನೊಂದು ಸಮೀಕ್ಷೆಯಲ್ಲೂ ಆಲಪ್ಪುಝಾ ಜಿಲ್ಲೆಯ ಹಳ್ಳಿಗಳ ಮಕ್ಕಳಲ್ಲೂ ಹೆಚ್ಚಿನವರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆಂದು ತಿಳಿದು ಬಂದಿತ್ತು.

ಪ್ರಜೆಗಳಲ್ಲಿ ಬೊಜ್ಜಿನ ಸಮಸ್ಯೆ ಕಡಿಮೆಗೊಳಿಸುವ ಸಲುವಾಗಿ ಇಂತಹ ತೆರಿಗೆಗಳನ್ನು ಡೆನ್ಮಾರ್ಕ್, ಹಂಗೇರಿ ಮುಂತಾದ ದೇಶಗಳಲ್ಲಿ ವಿಧಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News