ಮದುವೆ ನಿಲ್ಲಿಸಿದ ಪ್ರಧಾನಿ ಮೋದಿ !
ಕಾನ್ಪುರ,ಜುಲೈ 8: ಪ್ರಧಾನಿ ನರೇಂದ್ರಮೋದಿ ಆಡಳಿತದ ಕುರಿತು ವಧು ವರರೊಳಗೆ ವಾದವಿವಾದ ನಡೆದು ಅಂತಿಮವಾಗಿ ಇಬ್ಬರೂ ದೂರವಾದ ಘಟನೆಯೊಂದು ಕಾನ್ಪುರದಲ್ಲಿ ನಡೆದಿದೆ. ವರ ಮೋದಿ ಬೆಂಬಲಿಗನಾಗಿದ್ದು ವಧು ಮೋದಿ ನೀತಿಗಳ ವಿರೋಧಿಯಾಗಿದ್ದಳು ಎನ್ನಲಾಗಿದೆ. ವಧುವರರ ನಡುವೆ ಮುಖ್ಯವಾಗಿ ಮೋದಿಯ ಆರ್ಥಿಕ ನೀತಿ ಚರ್ಚಾವಿಷಯವಾಗಿ ನಂತರ ವಾದವಿವಾದಕ್ಕೆ ತಿರುಗಿ ಇಬ್ಬರೂ ತಮ್ಮ ಹಟವನ್ನು ಬಿಟ್ಟುಕೊಡಲು ಸಿದ್ಧವಿಲ್ಲದ್ದರಿಂದ ನಿಶ್ಚಯವಾಗಿದ್ದ ಮದುವೆ ರದ್ದುಗೊಂಡಿದೆ. ದೇಶದ ಆರ್ಥಿಕಕ್ಷೇತ್ರ ಕುಸಿತಕ್ಕೆ ಮೋದಿಯ ಅಸಾಮರ್ಥ್ಯವೆ ಕಾರಣವಾಗಿದೆ ಎಂದು ಮಹಿಳಾ ಸರಕಾರಿ ಉದ್ಯೋಗಿಯಾಗಿರುವ ವಧು ಬಲವಾಗಿ ವಾದಿಸಿದ್ದಳು. ಇದು ಮೋದಿ ಬೆಂಬಲಿಗ ವರನಿಗೆ ಸಹಿಸಲು ಸಾಧ್ಯವಾಗಲಿಲ್ಲ.
ವರ ವ್ಯಾಪಾರಿ ಆಗಿದ್ದು, ಎರಡುಕುಟುಂಬಗಳು ಮದುವೆಯ ಖರ್ಚನ್ನು ಹೇಗೆ ಹಂಚಿಕೊಳ್ಳಬಹುದು ಎಂದು ನಿರ್ಧರಿಸಲು ಒಂದು ದೇವಳದಲ್ಲಿ ಸೇರಿದ್ದವು. ಅದು ಹೇಗೋ ಮೋದಿ ವಿಷಯ ಚರ್ಚೆಯಲ್ಲಿ ನುಸುಳಿಕೊಂಡಿತ್ತು. ಈ ಕುರಿತು ಅವರಿಬ್ಬರು ಬಹಳ ಹೊತ್ತು ವಾಗ್ವಾದ ನಡೆಸಿದರು. ಕೊನೆಗೆ ಅವರಿಬ್ಬರೂ ತಮ್ಮಿಂದ ಒಂದುಗೂಡಿ ಮುಂದೆ ಸಾಗಲು ಸಾಧ್ಯವಿಲ್ಲ ಎಂದು ನಿರ್ಧರಿಸಿದ್ದರು. ಇಬ್ಬರೂ ತಮ್ಮ ಕುಟುಂಬಗಳಿಗೆ ನಾವಿಬ್ಬರೂ ಮದುವೆಯಾಗುವುದಿಲ್ಲ ಎಂದು ಹೇಳಿ ಜೊತೆಗೂಡುವ ಮುಂಚೆಯೇ ಸಂಬಂಧವನ್ನು ಕಡಿದುಕೊಂಡು ಮದುವೆ ಕಾರ್ಯಕ್ರಮವನ್ನೇ ರದ್ದುಗೊಳಿಸಿದರು.