ಬಾಕ್ಸ್ ಆಫೀಸಿನಲ್ಲಿ ಸುಲ್ತಾನ್ ದರ್ಬಾರ್
ಹೊಸದಿಲ್ಲಿ : ಸಲ್ಮಾನ್ ಖಾನ್ ಅವರ ಸುಲ್ತಾನ್ ಚಿತ್ರ ಬಾಕ್ಸ್ ಆಫೀಸಿನಲ್ಲಿ ಹೊಸ ಇತಿಹಾಸ ರಚಿಸುವತ್ತ ದಾಪುಗಾಲಿಕ್ಕುತ್ತಿದೆ. ಬಿಡುಗಡೆಯಾದ ಮೂರೇ ದಿನಗಳಲ್ಲಿ ರೂ. 100 ಕೋಟಿಗೂ ಹೆಚ್ಚು ಸಂಪಾದಿಸಿರುವ ಈ ಚಿತ್ರ ಮೂರನೇ ದಿನದ ಅಂತ್ಯಕ್ಕೆ ರೂ. 105.34 ಕೋಟಿ ಬಾಚಿದೆ.
ಮೊದಲ ಮೂರು ದಿನಗಳಲ್ಲಿ ಗರಿಷ್ಠ ಮೊತ್ತ ಪೇರಿಸಿದ ಚಿತ್ರಗಳಲ್ಲಿಯೇ ಸುಲ್ತಾನ್ ಈಗ ಮೂರನೇಸ್ಥಾನದಲ್ಲಿದೆ ಎಂದು ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಒಂದರಲ್ಲಿ ತಿಳಿಸಿದ್ದಾರೆ. ಭಜರಂಗಿ ಭಾಯಿಜಾನ್ ಮೊದಲ ಮೂರು ದಿನಗಳಲ್ಲಿ ರೂ. 102.60 ಕೋಟಿ ಬಾಚಿದ್ದರೆ, ಪ್ರೇಮ್ ರತನ್ ಧನ್ ಪಾಯೋ ಗಳಿಗೆ ರೂ. 101.47 ಕೋಟಿಯಾಗಿತ್ತು. ಈ ವರ್ಷ ರೂ. 100 ಕೋಟಿ ಕ್ಲಬ್ ಗೆ ಎಂಟ್ರಿ ಕೊಟ್ಟ ಮೂರನೇ ಸಿನೆಮಾ ‘ಸುಲ್ತಾನ್’ ಆಗಿದೆ.
ಈಹಿಂದೆ 2013 ರಲ್ಲಿ ಆಮಿರ್ ಅಭಿನಯದ "ಧೂಮ್ 3", 2014 ರಲ್ಲಿ ಶಾರುಖ್ ಖಾನ್ ಅವರ "ಹ್ಯಾಪಿ ನ್ಯೂ ಇಯರ್" ಗೂ ಸಲ್ಮಾನ್ ಅವರ "ಪ್ರೇಮ್ ರತನ್ ಧನ್ ಪಾಯೋ" ಹಾಗೂ "ಭಜರಂಗಿ ಭಾಯಿಜಾನ್" ಮೂರೇ ದಿನಗಳಲ್ಲಿ ರೂ. 100 ಕೋಟಿ ಗಡಿ ದಾಟಿದ ಚಿತ್ರಗಳಾಗಿವೆ.
ಸುಲ್ತಾನ್ ಚಿತ್ರ ಬಿಡುಗಡೆಯಾದಂದು ರೂ. 36.54 ಕೋಟಿ ಬಾಚಿದ್ದರೆ, ಎರಡನೇ ದಿನದಲ್ಲಿ ರೂ. 37.20 ಕೋಟಿ ಹಾಗೂ ಮೂರನೇ ದಿನದಲ್ಲಿ ರೂ. 31.50 ಕೋಟಿ ಗಳಿಸಿತ್ತು.
ಸಲ್ಮಾನ್, ಅನುಷ್ಕಾ ಶರ್ಮಾ ಹಾಗೂ ರಣದೀಪ್ ಹೂಡಾ ಅಭಿನಯದ ಈ ಚಿತ್ರ ಹರ್ಯಾಣದ ಕುಸ್ತಿಪಟುವೊಬ್ಬನ ಜೀವನ ವೃತ್ತಾಂತವಾಗಿದೆ. ಅಬ್ಬಾಸ್ ಅಲಿ ಝಫರ್ ಈ ಚಿತ್ರದ ನಿರ್ದೇಶಕರಾಗಿದ್ದು ಚಿತ್ರವನ್ನು ರೂ. 90 ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾಗಿದೆ.