×
Ad

ಸೆಪ್ಟೆಂಬರ್‌ನಲ್ಲಿ ದಿಲ್ಲಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಮಲ್ಯಗೆ ನಿರ್ದೇಶ

Update: 2016-07-09 19:00 IST

ಹೊಸದಿಲ್ಲಿ,ಜು.9: ಹಲವಾರು ಬ್ಯಾಂಕುಗಳಿಂದ ಸಾವಿರಾರು ಕೋಟಿ ರೂ.ಸಾಲ ಪಡೆದುಕೊಂಡು ಪಂಗನಾಮ ಹಾಕಿ ಬ್ರಿಟನ್‌ಗೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ ಮಲ್ಯಗೆ ಈ ಹಿಂದೆ ಪ್ರಕರಣವೊಂದರಲ್ಲಿ ಖುದ್ದು ಹಾಜರಾತಿಯಿಂದ ನೀಡಿದ್ದ ವಿನಾಯಿತಿಯನ್ನು ಶನಿವಾರ ಹಿಂದೆಗೆದುಕೊಂಡ ಇಲ್ಲಿಯ ನ್ಯಾಯಾಲಯವು ಸೆಪ್ಟೆಂಬರ್ 9ರಂದು ತನ್ನೆದುರು ಹಾಜರಾಗುವಂತೆ ನಿರ್ದೇಶ ನೀಡಿದೆ.

  ವಿಚಾರಣೆಯಲ್ಲಿ ಮಲ್ಯ ಹಾಜರಿ ಅಗತ್ಯವಾಗಿದೆ ಎಂದು ಕೋರಿ ಜಾರಿ ನಿರ್ದೇಶನಾಲಯ(ಇಡಿ) ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಿದ ಮುಖ್ಯ ಮಹಾನಗರ ನ್ಯಾಯಾಧೀಶ ಸುಮಿತ್ ದಾಸ್ ಅವರು ವಿದೇಶಿ ವಿನಿಮಯ ನಿಯಮಗಳ ಉಲ್ಲಂಘನೆ ಪ್ರಕರಣದ ವಿಚಾರಣೆಯಲ್ಲಿ ಖುದ್ದು ಹಾಜರಾತಿಯಿಂದ ಮಲ್ಯಗೆ ನೀಡಿದ್ದ ವಿನಾಯಿತಿಯನ್ನು ರದ್ದುಗೊಳಿಸಿದರು. ಇಡಿ ಹೊರಡಿಸಿದ್ದ ಸಮನ್ಸ್‌ಗಳನ್ನು ತಪ್ಪಿಸಿಕೊಂಡಿದ್ದ ಪ್ರಕರಣದಲ್ಲಿ 2000,ಡಿಸೆಂಬರ್‌ನಲ್ಲಿ ಮಲ್ಯಗೆ ಈ ವಿನಾಯಿತಿಯನ್ನು ನೀಡಲಾಗಿತ್ತು.

1996,1997 ಮತ್ತು 1998ರಲ್ಲಿ ಲಂಡನ್ ಮತ್ತು ಕೆಲವು ಐರೋಪ್ಯ ದೇಶಗಳಲ್ಲಿ ಫಾರ್ಮ್ಯುಲಾ ವನ್ ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಕಿಂಗ್‌ಫಿಷರ್ ಲಾಂಛನವನ್ನು ಪ್ರದರ್ಶಿಸಲು ಫೆರಾ ನಿಯಮಗಳನ್ನು ಉಲ್ಲಂಘಿಸಿ ಬ್ರಿಟಿಷ್ ಸಂಸ್ಥೆಯೊಂದಕ್ಕೆ 200,000 ಡಾಲರ್ ಪಾವತಿ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಮಲ್ಯಗೆ ಸಮನ್ಸ್‌ಗಳನ್ನು ಹೊರಡಿಸಿತ್ತು.

ಸಮನ್ಸ್‌ಗಳಿಗೆ ಸ್ಪಂದಿಸಿ ಇಡಿ ಎದುರು ಹಾಜರಾಗಲು ವಿಫಲಗೊಂಡಿದ್ದ ಮಲ್ಯ ವಿರುದ್ಧ ಇಲ್ಲಿಯ ನ್ಯಾಯಾಲಯದಲ್ಲಿ 2000,ಮಾ.8ರಂದು ದೂರು ದಾಖಲಾಗಿತ್ತು ಮತ್ತು ಫೆರಾದಡಿ ಅವರ ವಿರುದ್ಧ ಆರೋಪಗಳನ್ನು ರೂಪಿಸಲಾಗಿತ್ತು.

ಕಳೆದ ಮಾರ್ಚ್‌ನಿಂದಲೂ ಲಂಡನ್ನಿನಲ್ಲಿರುವ ಮಲ್ಯರನ್ನು ಅಕ್ರಮ ಹಣ ವಹಿವಾಟು ಪ್ರಕರಣದಲ್ಲಿ ಘೋಷಿತ ಅಪರಾಧಿಯೆಂದು ವಿಶೇಷ ನ್ಯಾಯಾಲಯವು ಸಾರಿದೆ. ಸುದೀರ್ಘ ಕಾಲದಿಂದ ಸ್ಥಗಿತಗೊಂಡಿರುವ ಅವರ ಕಿಂಗ್‌ಫಿಷರ್ ಏರ್‌ಲೈನ್ಸ್‌ನಿಂದ ಬರಬೇಕಾಗಿರುವ 9,000 ಕೋ.ರೂ.ಗಳ ಸಾಲಬಾಕಿಯನ್ನು ವಸೂಲು ಮಾಡಲು ಬ್ಯಾಂಕುಗಳು ಒದ್ದಾಡುತ್ತಿವೆ.

ರವಿವಾರ ಸಿಲ್ವರ್‌ಸ್ಟೋನ್‌ನಲ್ಲಿ ನಡೆಯಲಿರುವ ಬ್ರಿಟಿಷ್ ಗ್ರಾಂಡ್ ಪ್ರಿಕ್ಸ್‌ಗಾಗಿ ತನ್ನ ಫೋರ್ಸ್ ಇಂಡಿಯಾ ತಂಡದ ಪೂರ್ವಭಾವಿ ಅಭ್ಯಾಸ ಶುಕ್ರವಾರ ಲಂಡನ್ನಿನಲ್ಲಿ ನಡೆದ ಸಂದರ್ಭ ಮಲ್ಯ ಬಹಿರಂಗವಾಗಿ ಕಾಣಿಸಿಕೊಂಡಿದ್ದರು. ಉಲ್ಲಸಿತರಾಗಿದ್ದ ಅವರು ಸ್ಪರ್ಧಾಳು ಚಾಲಕರೊಂದಿಗೆ ಸಂಭಾಷಣೆ ನಡೆಸಿದ್ದಲ್ಲದೆ, ಪತ್ರಿಕಾ ಗೋಷ್ಠಿಯಲ್ಲಿಯೂ ಮಾತನಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News