ಹರ್ಯಾಣದಲ್ಲೂ ‘ಗೋ ತೆರಿಗೆ’ ಪ್ರಸ್ತಾವ
ಚಂಡಿಗಡ, ಜು.9: ಪಂಜಾಬ್‌ನ ಬಳಿಕ ಇದೀಗ ಹರ್ಯಾಣದಲ್ಲಿ ಗೋ ಸಂರಕ್ಷಣೆಗೆ ನಿಧಿಯನ್ನು ಕ್ರೋಡೀಕರಿಸಲು ‘ಗೋ ತೆರಿಗೆ’ ಹೇರುವಂತೆ ರಾಜ್ಯದ ಬಿಜೆಪಿ ಸರಕಾರದ ಮುಂದೆ ಪ್ರಸ್ತಾವವೊಂದನ್ನಿರಿಸಲಾಗಿದೆ.
ರಾಜ್ಯದಲ್ಲಿ ಗೋವುಗಳ ಕಲ್ಯಾಣಕ್ಕಾಗಿ ನಿಧಿಯೊಂದನ್ನು ಸೃಷ್ಟಿಸಲು ಬ್ಯಾಂಕ್ವೆಟ್ ಹಾಲ್ ಬುಕ್ಕಿಂಗ್‌ನ ಮೇಲೆ ರೂ.2,100, ಮನೋರಂಜನೆ ತೆರಿಗೆ ಸಂಗ್ರಹದ ಮೇಲೆ ಶೇ.5, ಒಂದು ಚೀಲ ಆಹಾರ ಧಾನ್ಯದ ಮೇಲೆ ರೂ.1 ತೆರಿಗೆ ವಿಧಿಸಬೇಕು ಹಾಗೂ ರಾಜ್ಯ ಸರಕಾರದ ವ್ಯವಸ್ಥಾಪನದಲ್ಲಿರುವ ದೇವಾಲಯಗಳ ಕಾಣಿಕೆ ಸಂಗ್ರಹದ ಶೇ.50ರಷ್ಟನ್ನು ಬಳಸಬೇಕೆಂಬ ಪ್ರಸ್ತಾವವನ್ನು ಹರ್ಯಾಣ ಗೌ ಸೇವಾ ಆಯೋಗವು ಸರಕಾರದ ಮುಂದಿರಿಸಿದೆ.
ರಾಜ್ಯದ ಗೋವುಗಳ ಕಲ್ಯಾಣಕ್ಕಾಗಿ ನಿಧಿಯೆತ್ತಲು ತಾವು ಹರ್ಯಾಣ ಸರಕಾರದ ಮುಂದೆ ಪ್ರಸ್ತಾಪವೊಂದನ್ನಿರಿಸಿದ್ದೇವೆ. ಈ ರೀತಿ ಸಂಗ್ರಹಿಸಲಾದ ನಿಧಿಯನ್ನು ಗೋವುಗಳ ಕಲ್ಯಾಣಕ್ಕಾಗಿ ಖರ್ಚು ಮಾಡಲಾಗುವುದು. ಪ್ರಸ್ತಾಪವು ಸರಕಾರದ ಪರಿಶೀಲನೆಯಲ್ಲಿದೆಯೆಂದು ಹರ್ಯಾಣ ಗೌ ಸೇವಾ ಆಯೋಗದ ಅಧ್ಯಕ್ಷ ಭಣಿರಾಮ್ ಮಂಗ್ಲಾ ಇಂದು ತಿಳಿಸಿದ್ದಾರೆ.
ಹರ್ಯಾಣದ ಗೋಶಾಲೆಗಳಲ್ಲಿ 3.20 ಲಕ್ಷ ಗೋವುಗಳಿದ್ದು, 1.17 ಲಕ್ಷ ಬೀಡಾಡಿ ದನಗಳಿವೆಯೆಂದು ಅವರು ಹೇಳಿದ್ದಾರೆ.
ಪಂಜಾಬ್‌ನಲ್ಲಿ ಸ್ಥಳೀಯ ಸಂಸ್ಥೆಗಳ ಇಲಾಖೆಯು ಈಗಾಗಲೇ ‘ಗೋ ತೆರಿಗೆ’ಯ ಕುರಿತು ಪ್ರಸ್ತಾವಿಸಿದೆ. ದ್ವಿಚಕ್ರ, ನಾಲ್ಕು ಚಕ್ರಗಳ ವಾಹನಗಳು, ತೈಲ ಟ್ಯಾಂಕರ್ ಖರೀದಿ, ವಿದ್ಯುತ್ ಬಳಕೆ, ಹವಾನಿಯಂತ್ರಿತ ಮದುವೆ ಹಾಲ್‌ಗಳು, ಸಾಮಾನ್ಯ ಹಾಲ್‌ಗಳು, ಸಿಮೆಂಟ್ ಚೀಲ, ಭಾರತದಲ್ಲಿ ತಯಾರಿಸಿದ ವಿದೇಶಿ ಮದ್ಯ ಹಾಗೂ ಪಂಜಾಬ್ ಮೀಡಿಯಂ ಲಿಕ್ಕರ್‌ಗಳ ಮೇಲೆ ತೆರಿಗೆ ವಿಧಿಸುವ ಮೂಲಕ ನಿಧಿ ಸಂಗ್ರಹಿಸುವಂತೆ ಅದು ಸಲಹೆ ನೀಡಿದೆ.