×
Ad

ಶೇ.31ರಷ್ಟು ಮೋದಿ ಮಂತ್ರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ

Update: 2016-07-09 23:38 IST

ಹೊಸದಿಲ್ಲಿ, ಜು.9: ಎನ್‌ಡಿಎ ಸರಕಾರದ ಸಚಿವ ಸಂಪುಟದಲ್ಲಿರುವ ಶೇ.31ಕ್ಕಿಂತಲೂ ಅಧಿಕ ಸಚಿವರ ಮೇಲೆ ಕ್ರಿಮಿನಲ್ ಮೊಕದ್ದಮೆಗಳಿವೆ ಎನ್ನುವ ಅಂಶ ಅಸೋಸಿಯೇಶನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ನಡೆಸಿದ ವಿಶ್ಲೇಷಣೆಯಿಂದ ಬಹಿರಂಗವಾಗಿದೆ.

ಮೋದಿ ಸಂಪುಟದ 78 ಸಚಿವರ ಪೈಕಿ 24 ಮಂದಿಯ ವಿರುದ್ಧ ಅಪರಾಧ ಪ್ರಕರಣಗಳು ಇರುವುದನ್ನು ಘೋಷಿಸಿಕೊಂಡಿದ್ದಾರೆ. ಈ ಪೈಕಿ 14 ಸಚಿವರ ವಿರುದ್ಧ ಅಂದರೆ ಶೇ.18ರಷ್ಟು ಸಚಿವರ ಮೇಲೆ ಅತ್ಯಾಚಾರ, ಕೊಲೆಯತ್ನ, ಕೋಮು ಸಾಮರಸ್ಯ ಕೆಡಿಸಿದ, ಚುನಾವಣಾ ನಿಯಮ ಉಲ್ಲಂಘನೆಯಂಥ ಗಂಭೀರ ಆರೋಪಗಳಿವೆ. 78 ಸಚಿವ ಪೈಕಿ 72 ಮಂದಿ ಕೋಟ್ಯಧಿಪತಿಗಳು. ಹೊಸದಾಗಿ ಸಂಪುಟಕ್ಕೆ ಸೇರ್ಪಡೆಯಾದ ಸಚಿವರ ಒಟ್ಟು ಸರಾಸರಿ ಆಸ್ತಿ ವೌಲ್ಯ 8.73 ಕೋಟಿ ರೂ. ಆಗಿದೆ. ಕೇಂದ್ರ ಸಂಪುಟದ ಎಲ್ಲ ಸಚಿವರ ಸರಾಸರಿ ಆಸ್ತಿ ವೌಲ್ಯ 12.94 ಕೋಟಿ ರೂ. ಆಗಿದೆ.
ಹೊಸದಾಗಿ ಸಂಪುಟಕ್ಕೆ ಸೇರ್ಪಡೆಯಾದ ಎಂ.ಜಿ.ಅಕ್ಬರ್ ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದು, ಇವರ ಆಸ್ತಿ ವೌಲ್ಯ 44.9 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದಾರೆ. ಇವರು ಹೊಸ ಸಚಿವರಲ್ಲಿ ಅತ್ಯಂತ ಶ್ರೀಮಂತರು. ಉಳಿದಂತೆ ಪಿ.ಪಿ.ಚೌಧರಿ ಎರಡನೆ ಸ್ಥಾನದಲ್ಲಿದ್ದು, ಇವರ ಆಸ್ತಿ ವೌಲ್ಯ 35.36 ಕೋಟಿ ರೂ. ವಿಜಯ್ ಗೋಯಲ್ ಅವರ ಆಸ್ತಿ ವೌಲ್ಯ 29.97 ಕೋಟಿ ರೂ. ಆಗಿದ್ದು, ಇವರು ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾದವರು.
ಇಡೀ ಸಚಿವ ಸಂಪುಟದಲ್ಲಿ ಅರುಣ್ ಜೇಟ್ಲಿ, ಹರ್‌ಸಿಮ್ರತ್ ಬಾದಲ್ ಹಾಗೂ ಪಿಯೂಷ್ ಗೋಯಲ್ ಅತ್ಯಂತ ಶ್ರೀಮಂತ ಸಚಿವರು. ಇವರು ಚುನಾವಣೆ ವೇಳೆ ಸಲ್ಲಿಸಿದ ಅಫಿಡವಿಟ್ ಆಧಾರದಲ್ಲಿ ಈ ವಿಶ್ಲೇಷಣೆ ನಡೆಸಲಾಗಿದೆ. ಅತಿಹೆಚ್ಚಿನ ಸಂಖ್ಯೆಯ ಅಂದರೆ 40 ಸಚಿವರು 41-60 ವಯಸ್ಸಿನವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News