100 ಸ್ಥಾನಗಳಲ್ಲಿ ಮುಸ್ಲಿಮರಿಗೆ ಟಿಕೆಟ್: ಬಿಎಸ್ಪಿ ನಿರ್ಧಾರ
ಬಿಜನೋರ್, ಜು.10: ಮುಂದಿನ ವರ್ಷ ನಡೆಯುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಕೋಮು ರಾಜಕೀಯಕ್ಕೆ ಪ್ರತಿಯಾಗಿ ಬಿಎಸ್ಪಿ ನಾಯಕಿ "ದಲಿತ- ಮುಸ್ಲಿಂ" ರಣತಂತ್ರ ರೂಪಿಸಿದ್ದಾರೆ. ರಾಜ್ಯದಲ್ಲಿ 100 ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುವುದು ಎಂದು ಬಿಎಸ್ಪಿ ನಾಯಕಿ ಮಾಯಾವತಿ ಪ್ರಕಟಿಸಿದ್ದಾರೆ. ಬಿಜನೋರ್ನ ಎಂಟು ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳನ್ನು ಮುಸ್ಲಿಂ ಅಭ್ಯರ್ಥಿಗಳಿಗೆ ಮೀಸಲಿಡುವುದಾಗಿ ಭರವಸೆ ನೀಡಿದ್ದಾರೆ.
ಇನ್ನೊಂದೆಡೆ ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ ನಾಲ್ಕನ್ನು ಮುಸ್ಲಿಮರಿಗೆ ನೀಡಲು ಸಮಾಜವಾದಿ ಪಕ್ಷ ನಿರ್ಧರಿಸಿದೆ. ಬಿಎಸ್ಪಿ ರಾಜ್ಯಾದ್ಯಂತ ಮುಸ್ಲಿಮರಿಗೆ ನೀಡಲು ಉದ್ದೇಶಿಸಿರುವ 100 ಸ್ಥಾನಗಳ ಪೈಕಿ ಬಹುತೇಕ ಪಶ್ಚಿಮ ಉತ್ತರಪ್ರದೇಶದ ಕ್ಷೇತ್ರಗಳಾಗಿವೆ.
ಬಿಜನೋರ್ ಮುಸ್ಲಿಂ ಬಾಹುಳ್ಯದ ಜಿಲ್ಲೆಯಾಗಿದ್ದು, ಬಹುತೇಕ ಕ್ಷೇತ್ರಗಳಲ್ಲಿ ಒಂದು ಲಕ್ಷ ಮುಸ್ಲಿಮರು ಹಾಗೂ 50 ಸಾವಿರ ದಲಿತ ಮತಗಳಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ ನಾಲ್ಕು ಹಾಗೂ ಎಸ್ಪಿ ಎರಡು ಸ್ಥಾನಗಳನ್ನು ಇಲ್ಲಿ ಗೆದ್ದಿದ್ದವು. ಎರಡು ಮೀಸಲು ಕ್ಷೇತ್ರಗಳಾಗಿವೆ.
"ಮಾಯಾವತಿಯವರ ಈ ಐತಿಹಾಸಿಕ ನಿರ್ಧಾರದಿಂದ ಪಕ್ಷಕ್ಕೆ ಲಾಭವಾಗುತ್ತದೆ" ಎಂಬ ವಿಶ್ವಾಸವನ್ನು ಪಕ್ಷದ ಮೊರದಾಬಾದ್ ಮಂಡಲ ಸಂಚಾಲಕ ಜಿತೇಂದ್ರ ಸಾಗರ್ ವ್ಯಕ್ತಪಡಿಸಿದ್ದಾರೆ. ಆದರೆ ಬಿಎಸ್ಪಿ ತಂತ್ರದಿಂದ ನಮ್ಮ ಪಕ್ಷಕ್ಕೆ ಯಾವುದೇ ಹಾನಿಯಾಗದು ಎಂಬ ವಿಶ್ವಾಸವನ್ನು ಎಸ್ಪಿ ಜಿಲ್ಲಾಧ್ಯಕ್ಷ ಅನಿಲ್ ಯಾದವ್ ವ್ಯಕ್ತಪಡಿಸಿದ್ದಾರೆ.