ಮೊದಲ ಅಭ್ಯಾಸ ಪಂದ್ಯ ಡ್ರಾ, ಮಿಂಚಿದ ಮಿಶ್ರಾ

Update: 2016-07-11 18:06 GMT

ಸೈಂಟ್‌ಕಿಟ್ಸ್, ಜು.11: ಭಾರತ ಹಾಗೂ ವೆಸ್ಟ್‌ಇಂಡೀಸ್ ಕ್ರಿಕೆಟ್ ಮಂಡಳಿ ಅಧ್ಯಕ್ಷರ ಇಲೆವೆನ್ ತಂಡಗಳ ನಡುವಿನ ಎರಡು ದಿನಗಳ ಅಭ್ಯಾಸ ಪಂದ್ಯ ನಿರೀಕ್ಷೆಯಂತೆಯೇ ಡ್ರಾನಲ್ಲಿ ಕೊನೆಗೊಂಡಿತು.

 ಅಭ್ಯಾಸ ಪಂದ್ಯದಲ್ಲಿ ಭಾರತದ ವೇಗದ ಬೌಲರ್‌ಗಳು ಮಿಂಚಲು ವಿಫಲರಾದರೆ, ಸ್ಪಿನ್ನರ್ ಅಮಿತ್ ಮಿಶ್ರಾ ಎರಡನೆ ದಿನದ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿ ಗಮನ ಸೆಳೆದರು.

ಅಭ್ಯಾಸ ಪಂದ್ಯದ ಎರಡನೆ ಹಾಗೂ ಅಂತಿಮ ದಿನವಾದ ರವಿವಾರ ಶೈ ಹೋಪ್ ಬಾರಿಸಿದ ಅಜೇಯ ಶತಕವೇ ಹೈಲೈಟ್ಸ್ ಎನಿಸಿಕೊಂಡಿತು. ಡಬ್ಲುಐಸಿಬಿ ಮಂಡಳಿ ಅಧ್ಯಕ್ಷರ ಇಲೆವೆನ್ ಪಂದ್ಯ ಡ್ರಾನಲ್ಲಿ ಕೊನೆಗೊಂಡಾಗ 7 ವಿಕೆಟ್‌ಗಳ ನಷ್ಟಕ್ಕೆ 281 ರನ್ ಗಳಿಸಿತ್ತು.

ವೆಸ್ಟ್‌ಇಂಡೀಸ್‌ನ ಪರ ಈ ತನಕ ಕೇವಲ 6 ಟೆಸ್ಟ್ ಪಂದ್ಯಗಳನ್ನು ಆಡಿರುವ ಹೋಪ್ 355 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದು 229 ಎಸೆತಗಳನ್ನು ಎದುರಿಸಿದ್ದರು. ವಾರ್ನರ್ ಪಾರ್ಕ್‌ನಲ್ಲಿ ಶತಕ ಬಾರಿಸಿದ 22ರ ಹರೆಯದ ಹೋಪ್ ಇನಿಂಗ್ಸ್‌ನಲ್ಲಿ 15 ಬೌಂಡರಿಗಳಿದ್ದವು.

ಭಾರತ ನಿನ್ನೆಯ ಮೊತ್ತ 6ಕ್ಕೆ 258 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿದ ಬಳಿಕ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ(4-67) ಪರಿಣಾಮಕಾರಿ ಪ್ರದರ್ಶನ ನೀಡಿದರು. ಮೋಡಕವಿದ ವಾತಾವರಣದ ಲಾಭ ಪಡೆಯಲು ಭಾರತದ ವೇಗದ ಬೌಲರ್‌ಗಳು ವಿಫಲರಾದರು. ಅನಿಶ್ಚಿತ ಪ್ರದರ್ಶನ ನೀಡಿ ನಿರಾಸೆಗೊಳಿಸಿದರು.

ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ದೀರ್ಘಸಮಯದ ಬಳಿಕ ತಂಡಕ್ಕೆ ವಾಪಸಾಗಿದ್ದ ಭುವನೇಶ್ವರ್ ಕುಮಾರ್ ಹಾಗೂ ಮುಹಮ್ಮದ್ ಶಮಿ ಆರಂಭದಲ್ಲಿ ಚೆನ್ನಾಗಿಯೇ ಬೌಲಿಂಗ್ ಮಾಡಿದ್ದರು. ಕುಮಾರ್, ಅಧ್ಯಕ್ಷರ ಇಲೆವೆನ್ ತಂಡದ ನಾಯಕ ಲಿಯೊನ್ ಜಾನ್ಸನ್ ವಿಕೆಟ್‌ನ್ನು ಬೇಗನೆ ಉರುಳಿಸಿದ್ದರು. ಮತ್ತೊಂದೆಡೆ ಉತ್ತಮ ವೇಗದ ಮೂಲಕ ಬ್ಯಾಟ್ಸ್‌ಮನ್‌ಗಳಿಗೆ ಪರೀಕ್ಷೆಯೊಡ್ಡಿದರು.

ಆದರೆ, ಭಾರತದ ಬೌಲರ್‌ಗಳು ದಿಢೀರನೆ ಲಯ ಕಳೆದುಕೊಂಡರು. ನಾಯಕ ವಿರಾಟ್ ಕೊಹ್ಲಿ ವೇಗಿಗಳಾದ ಇಶಾಂತ್ ಶರ್ಮ ಹಾಗೂ ಉಮೇಶ್ ಯಾದವ್‌ರನ್ನು ದಾಳಿಗಿಳಿಸಿದರೂ ಪ್ರಯೋಜನವಾಗಲಿಲ್ಲ. ಈ ಇಬ್ಬರು ಬೌಲರ್‌ಗಳು ಅಸ್ಥಿರ ಪ್ರದರ್ಶನ ನೀಡಿದರು.

ಉಭಯ ತಂಡಗಳು ಇದೇ ಮೈದಾನದಲ್ಲಿ ಜು.14 ರಿಂದ 16ರ ತನಕ ಎರಡನೆ ಅಭ್ಯಾಸ ಪಂದ್ಯವನ್ನು ಆಡಲಿದೆ. ಆ ಬಳಿಕ ಜು.21 ರಿಂದ 25ರ ತನಕ ಆ್ಯಂಟಿಗುವಾದ ಸರ್‌ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ವೆಸ್ಟ್‌ಇಂಡೀಸ್‌ನ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿದೆ.

ಸಂಕ್ಷಿಪ್ತ ಸ್ಕೋರ್

ಭಾರತ: 93 ಓವರ್‌ಗಳಲ್ಲಿ 258/6 ಡಿಕ್ಲೇರ್

(ರೋಹಿತ್ ಶರ್ಮ ಔಟಾಗದೆ 54, ಶಿಖರ್ ಧವನ್ 51, ಕೆಎಲ್ ರಾಹುಲ್ 50, ಜೆ. ವಾರ್ರಿಕನ್ 2-61)

ವೆಸ್ಟ್‌ಇಂಡೀಸ್ ಕ್ರಿಕೆಟ್ ಮಂಡಳಿ ಅಧ್ಯಕ್ಷರ ಇಲೆವೆನ್:

87 ಓವರ್‌ಗಳಲ್ಲಿ 281/7

(ಶೈಹೋಪ್ ಔಟಾಗದೆ 118, ರಾಜೇಂದ್ರ ಚಂದ್ರಿಕ 69, ಅಮಿತ್ ಮಿಶ್ರಾ 4-67).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News