ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಆಡಳಿತ ಮರು ಸ್ಥಾಪಿಸಿದ ಸುಪ್ರೀಂಕೋರ್ಟ್

Update: 2016-07-13 08:28 GMT

  ಹೊಸದಿಲ್ಲಿ, ಜು.13: ಅತ್ಯಂತ ಮಹತ್ವದ ತೀರ್ಪಿನಲ್ಲಿ ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಆಡಳಿತವನ್ನು ಮರುಸ್ಥಾಪಿಸಿರುವ ಸುಪ್ರೀಂಕೋರ್ಟ್ ಈ ಹಿಂದಿನ ಸರಕಾರ ಬೀಳಲು ಕಾರಣವಾಗಿದ್ದ ರಾಜ್ಯಪಾಲರ ಎಲ್ಲ ನಿರ್ಧಾರ ಸಂವಿಧಾನ ವಿರೋಧಿ ಎಂದು ಆದೇಶಿಸಿದೆ.

 ಸುಪ್ರೀಂಕೋರ್ಟ್‌ನ ಈ ತೀರ್ಪಿನಿಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ತೀವ್ರ ಮುಖಭಂಗಕ್ಕೀಡಾಗಿದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆಗೆ ಸಂಬಂಧಿಸಿ ಎರಡನೆ ಬಾರಿ ಕೇಂದ್ರ ಸರಕಾರ ಹಿನ್ನಡೆ ಕಂಡಿದೆ. ಈ ವರ್ಷಾರಂಭದಲ್ಲಿ ಉತ್ತರಾಖಂಡದಲ್ಲಿ ಮುಖ್ಯಮಂತ್ರಿ ಹರೀಶ್ ರಾವತ್ ವಿರುದ್ಧ ಕಾಂಗ್ರೆಸ್‌ನ 9 ಶಾಸಕರು ಬಂಡಾಯ ಎದ್ದಾಗ ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು. ದೀರ್ಘ ಕಾನೂನು ಹೋರಾಟದ ಬಳಿಕ ನ್ಯಾಯಾಲಯ ಕಾಂಗ್ರೆಸ್ ಪರ ತೀರ್ಪು ನೀಡಿತ್ತು.

2015ರ ಡಿಸೆಂಬರ್‌ನಲ್ಲಿ ತುರ್ತು ರಾಜ್ಯ ಅಸೆಂಬ್ಲಿ ಅಧಿವೇಶನವನ್ನು ಕರೆಯಲು ಅವಕಾಶ ನೀಡಿರುವ ರಾಜ್ಯಪಾಲ ಜ್ಯೋತಿ ಪ್ರಸಾದ್ ರಾಜ್‌ಖೋವಾರ ನಿರ್ಧಾರ ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದೆ. ರಾಜ್ಯಪಾಲರು ತನ್ನ ಅಧಿಕಾರದ ವ್ಯಾಪ್ತಿ ಮೀರಿ ವರ್ತಿಸಿದ್ದು ಕಂಡುಬಂದಿದೆ. ರಾಜ್ಯದಲ್ಲಿ ಡಿ.9ರ ಬಳಿಕ ರಾಜ್ಯಪಾಲರು ತೆಗೆದುಕೊಂಡಿರುವ ಎಲ್ಲ ನಿರ್ಧಾರ ಸಮರ್ಥನೀಯವಲ್ಲ ಎಂದು ಜಸ್ಟಿಸ್ ಜೆ.ಎಸ್. ಖೇಹಾರ್ ನೇತೃತ್ವದ ಐವರು ನ್ಯಾಯಾಧೀಶರಿದ್ದ ಸುಪ್ರೀಂಕೋರ್ಟ್ ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ. ಸುಪ್ರೀಂಕೋರ್ಟ್‌ನ ಈ ತೀರ್ಪಿನಿಂದಾಗಿ 2015 ಡಿಸೆಂಬರ್‌ನಿಂದ ಈಶಾನ್ಯ ರಾಜ್ಯದಲ್ಲಿ ತಲೆತೋರಿದ್ದ ರಾಜಕೀಯ ಬಿಕ್ಕಟ್ಟಿಗೆ ತೆರೆ ಬಿದ್ದಿದೆ.

 ‘‘ಅರುಣಾಚಲ ಪ್ರದೇಶದಲ್ಲಿ ಗಡಿಯಾರ ತಿರುಗಿ ಬಂದಿದೆ’’ ಎಂದು ಜಸ್ಟಿಸ್ ಜೆಎಸ್ ಖೇಹಾರ್ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

 ಕಳೆದ ವರ್ಷದ ನವೆಂಬರ್‌ನಲ್ಲಿ ಮುಖ್ಯಮಂತ್ರಿ ತುಕಿ ವಿರುದ್ಧ ಕಾಂಗ್ರೆಸ್‌ನ 21 ಶಾಸಕರು ಬಂಡಾಯ ಎದ್ದ ಹಿನ್ನೆಲೆಯಲ್ಲಿ ಅರುಣಾಚಲ ಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು ತಲೆ ಎತ್ತಿತ್ತು. ಕಾಂಗ್ರೆಸ್ 60 ಸದಸ್ಯರ ಅಸೆಂಬ್ಲಿಯಲ್ಲಿ 26ಕ್ಕೆ ಕುಸಿದಿತ್ತು. ಕೇಂದ್ರ ಸರಕಾರ ಜನವರಿ 26 ರಂದು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿತ್ತು.

  ಭಿನ್ನಮತೀಯ ಬಣದ ನಾಯಕ ಕಲಿಖಾವೊ ಪುಲ್ ಫೆಬ್ರವರಿ 19 ರಂದು ಕಾಂಗ್ರೆಸ್‌ನ 19 ಬಂಡಾಯ ಶಾಸಕರು ಹಾಗೂ 11 ಬಿಜೆಪಿ ಶಾಸಕರ ಬೆಂಬಲದಿಂದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ರಾಜ್ಯಪಾಲರ ನಿರ್ಧಾರ ‘ರಾಜಕೀಯ ಪ್ರೇರಿತ’ವಾಗಿತ್ತು. ರಾಜ್ಯಪಾಲರು ಚುನಾಯಿತ ಸರಕಾರವನ್ನು ಬೀಳಿಸಲು ಕೇಂದ್ರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಸ್ಪೀಕರ್ ನಬಾಮ್ ರೆಬಿಯಾ ಸುಪ್ರೀಂಕೋರ್ಟ್‌ಗೆ ದೂರು ಸಲ್ಲಿಸಿದ್ದರು.

ಸುಪ್ರೀಂಕೋರ್ಟ್‌ನಲ್ಲಿ ಗವರ್ನರ್ ಪರವಾಗಿ ವಾದ ಮಂಡಿಸಿದ್ದ ಕೇಂದ್ರ ಸರಕಾರ, ‘‘ರಾಜ್ಯಪಾಲರು ತಮ್ಮ ಅಧಿಕಾರವನ್ನು ಚಲಾಯಿಸಿದ್ದಾರೆ. ರಾಜ್ಯದ ಕಾನೂನು-ಸುವವ್ಯಸ್ಥೆ ಸಂಪೂರ್ಣ ಹದಗೆಟ್ಟ ಬಳಿಕ 2015ರಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು ಎಂದು ಹೇಳಿತ್ತು.

ಮೋದಿ ಸರಕಾರಕ್ಕೆ ಕಪಾಳ ಮೋಕ್ಷ: ಕೇಜ್ರಿವಾಲ್

ಸುಪ್ರೀಂಕೋರ್ಟ್‌ನ ಐತಿಹಾಸಿಕ ತೀರ್ಪು ಸರ್ವಾಧಿಕಾರಿ ಮೋದಿ ಸರಕಾರಕ್ಕೆ ಮತ್ತೊಂದು ಕಪಾಳಮೋಕ್ಷವಾಗಿದೆ. ಮೋದಿಜಿ ಇನ್ನು ಮೇಲಾದರೂ ಚುನಾಯಿತ ಸರಕಾರದಲ್ಲಿ ಮಧ್ಯಪ್ರವೇಶಿಸುವುದನ್ನು ನಿಲ್ಲಿಸಬೇಕು. ಸುಪ್ರೀಂನ ಈ ತೀರ್ಪು ಅವರಿಗೆ ಪಾಠವಾಗಬೇಕು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News