×
Ad

ಮನೆಗೆಲಸದವರಿಗೆ ಕನಿಷ್ಠ ವೇತನ ನಿಗದಿಪಡಿಸಿದ ಕುವೈಟ್

Update: 2016-07-16 00:10 IST

ಕುವೈತ್, ಜು.15: ಗಲ್ಫ್ ರಾಷ್ಟ್ರಗಳಲ್ಲಿಯೇ ಪ್ರಪ್ರಥಮವಾಗಿ ಕುವೈತ್ ಮನೆಗೆಲಸದವರಿಗೆ ಕನಿಷ್ಠ ವೇತನ ನಿಗದಿಪಡಿಸಿದೆ. ಈ ನಿರ್ಧಾರದಿಂದ ಕುವೈತ್ ನಲ್ಲಿ ಕೆಲಸ ಮಾಡುವ ಸಾವಿರಾರು ಮಂದಿ ಪ್ರಯೋಜನ ಪಡೆಯಲಿದ್ದಾರೆ. ಇಲ್ಲಿ ಮನೆಗೆಲಸ ನಿರ್ವಹಿಸುವವರಲ್ಲಿ ಬಹುಸಂಖ್ಯಾತರು ಏಷ್ಯಾ ದೇಶಗಳಿಂದ ಬಂದವರಾಗಿದ್ದಾರೆ. ಆಂತರಿಕ ವ್ಯವಹಾರಗಳ ಸಚಿವ ಶೇಖ್ ಮುಹಮ್ಮದ್ ಖಾಲಿದ್ ಅಲ್-ಸಬಾಹ್ ಅವರು ಹೊರಡಿಸಿದ ಅಧಿಸೂಚನೆಯೊಂದರಲ್ಲಿ ಮನೆಗೆಲಸದವರಿಗೆ ತಿಂಗಳಿಗೆ 60 ದಿನಾರ್ (200 ಡಾಲರ್) ಕನಿಷ್ಠ ವೇತನ ನಿಗದಿ ಪಡಿಸಲಾಗಿದೆಯಲ್ಲದೆ ಹಲವಾರು ಇತರ ಸವಲತ್ತುಗಳನ್ನು ಒದಗಿಸುವ ಬಗ್ಗೆಯೂ ಹೇಳಲಾಗಿದೆ. ಗಲ್ಫ್ ರಾಷ್ಟ್ರಗಳಲ್ಲಿ ಮನೆಗೆಲದವರ ಮೇಲೆ ದೌರ್ಜನ್ಯ ನಡೆಸಿದ ಹಲವು ಪ್ರಕರಣಗಳು ಇತ್ತೀಚೆಗೆ ವರದಿಯಾದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದಿದೆ. ಕಳೆದ ವರ್ಷ ದೇಶದ ಸಂಸತ್ತು ಅನುಮೋದಿಸಿದ ಮಹತ್ವದ ಕಾನೂನು ಜಾರಿಗೊಳಿಸುವ ಉದ್ದೇಶದಿಂದ ಹೊರಡಿಸಲಾದ ಈ ಅಧಿಸೂಚನೆಯಂತೆ ನಿಗದಿತ ಅವಧಿಗಿಂತ ಹೆಚ್ಚು ಕೆಲಸ ಮಾಡಿದ ನೌಕರರಿಗೆ ಮಾಲಕರು ಓವರ್ ಟೈಮ್ ಭತ್ತ್ಯೆನೀಡಬೇಕಾಗುತ್ತದೆ. ಇದರ ಹೊರತಾಗಿ ಮನೆಗೆಲಸದವರಿಗೆ ವಾರಕ್ಕೊಂದು ದಿನ ರಜೆ, ವಾರ್ಷಿಕ 30 ದಿನಗಳ ವೇತನ ಸಹಿತ ರಜೆ, ದಿನಕ್ಕೆ 12 ಗಂಟೆ ಕೆಲಸ ಹಾಗೂ ನಂತರ ವಿರಾಮ ಹಾಗೂ ಕಾಂಟ್ರಾಕ್ಟ್ ಮುಗಿದ ಬಳಿಕ ಒಂದು ತಿಂಗಳ ಸಂಬಳವನ್ನು ವಿಶೇಷ ಸವಲತ್ತಾಗಿ ಒದಗಿಸಬೇಕಾಗಿದೆ.

ಕುವೈತ್‌ನಲ್ಲಿ ಒಟ್ಟು 6 ಲಕ್ಷ ಮನೆಗೆಲಸದ ಮಹಿಳೆಯರಿದ್ದಾರೆಂದು ಅಂದಾಜಿಸಲಾಗಿದ್ದರೆ, ಗಲ್ಫ್ ದೇಶಗಳಾದ್ಯಂತ ಕನಿಷ್ಠ 24 ಲಕ್ಷ ಮಂದಿ ಮನೆಗೆಲಸದವರಿದ್ದಾರೆ ಹಾಗೂ ಅವರ ಹಕ್ಕುಗಳ ರಕ್ಷಣೆಗೆ ಯಾವುದೇ ಕಾನೂನು ಇಲ್ಲವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News