ಅರುಣಾಚಲದಲ್ಲಿ ಬಿಜೆಪಿಗೆ ಕಾಂಗ್ರೆಸ್ ತಿರುಮಂತ್ರ ಪೇಮಾ ಖಂಡು ನೂತನ ಮುಖ್ಯಮಂತ್ರಿ
ಇಟಾನಗರ್, ಜು.16: ಅರುಣಾಚಲಪ್ರದೇಶದಲ್ಲಿ ನಡೆದ ನಾಟಕೀಯ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ನಬಂ ಟುಕಿಯವರ ಬದಲಿಗೆ ಪ್ರೇಮ ಖಂಡು ಅವರನ್ನು ಹೊಸ ನಾಯಕನನ್ನಾಗಿ ಕಾಂಗ್ರೆಸ್ ಪಕ್ಷವಿಂದು ಆಯ್ಕೆ ಮಾಡಿದೆ. ಖಂಡು ಇಬ್ಬರು ಪಕ್ಷೇತರರು ಸಹಿತ 45 ಕಾಂಗ್ರೆಸ್ ಶಾಸಕರ ಬೆಂಬಲದೊಂದಿಗೆ ಸರಕಾರ ರಚನೆಗೆ ಅಹವಾಲು ಮಂಡಿಸಿದ್ದಾರೆ.
ಕ್ಷಿಪ್ರವಾಗಿ ಬದಲಾದ ಬೆಳವಣಿಗೆಯಲ್ಲಿ ಸುಪ್ರೀಂ ಕೋರ್ಟ್‌ನಿಂದ ಕೆಳಗಿಳಿಸಲ್ಪಟ್ಟ ಬಂಡುಕೋರ ಮುಖ್ಯಮಂತ್ರಿ ಖಾಲಿಕೊ ಪುಲ್, 30 ಮಂದಿ ಬಂಡುಕೋರ ಶಾಸಕರೊಂದಿಗೆ ಕಾಂಗ್ರೆಸ್‌ನ ತೆಕ್ಕೆಗೆ ಮರಳಿದ್ದಾರೆ.
ರಾಜ್ಯಪಾಲ ತಥಾಗತ ರಾಯ್, ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವಂತೆ ಟುಕಿಯವರಿಗೆ ನಿರ್ದೇಶನ ನೀಡಿದ್ದರು. ಅದಕ್ಕೆ ಕೆಲವೇ ತಾಸುಗಳ ಮೊದಲು, ಕಾಂಗ್ರೆಸ್ ಶಾಸಕಾಂಗ ಪಕ್ಷವು ಸಭೆ ಸೇರಿ ದಿವಂಗತ ಮುಖ್ಯಮಂತ್ರಿ ದೋರ್ಜಿ ಖಂಡು ಅವರ ಪುತ್ರ, 37ರ ಹರೆಯದ ಪ್ರೇಮ ಖಂಡು ಅವರನ್ನು ತನ್ನ ಹೊಸ ನಾಯಕನನ್ನಾಗಿ ಆಯ್ಕೆ ಮಾಡಿತು.
ಖಂಡು ಅವರ ಹೆಸರನ್ನು ಟುಕಿ ಸೂಚಿಸಿದ್ದು, ಹಾಜರಿದ್ದ 44 ಮಂದಿ ಶಾಸಕರು ಅದನ್ನು ಅವಿರೋಧವಾಗಿ ಅಂಗೀಕರಿಸಿದರು. ಉಚ್ಚಾಟಿತ ಮುಖ್ಯಮಂತ್ರಿ ಖಾಲಿಕೊ ಪುಲ್ ಬಂಡುಕೋರ ಶಾಸಕರೊಂದಿಗೆ ಸಭೆಗೆ ಹಾಜರಾಗಿದ್ದರು. ಆದರೆ, ಸ್ಪೀಕರ್ ನಬಂ ರೆಬಿಯಾ ಉಪಸ್ಥಿತರಿರಲಿಲ್ಲ.
60 ಸದಸ್ಯ ಬಲದ ಅರುಣಾಚಲಪ್ರದೇಶ ವಿಧಾನಸಭೆಯಲ್ಲಿ ಹಾಲಿ 58 ಸದಸ್ಯರಿದ್ದು, ಇಬ್ಬರು ಪಕ್ಷೇತರರು ಸಹಿತ 47 ಶಾಸಕರ ಬೆಂಬಲ ತನಗಿದೆಯೆಂದು ಕಾಂಗ್ರೆಸ್ ಪ್ರತಿಪಾದಿಸಿದೆ.
ಶಾಸಕಾಂಗ ಪಕ್ಷದ ಸಭೆಗೆ ಮೊದಲು ರಾಜ್ಯಪಾಲರನ್ನು ಭೇಟಿಯಾಗಿದ್ದ ಟುಕಿ, ಸಿಎಲ್‌ಪಿ ನಾಯಕ ಹಾಗೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಇಚ್ಛೆ ಹಾಗೂ ನೂತನ ನಾಯಕನ ಆಯ್ಕೆಯ ನಿರ್ಧಾರದ ಬಗ್ಗೆ ತಿಳಿಸಿದ್ದರು.