×
Ad

ಸಂಸತ್ತಿನ ಮಳೆಗಾಲದ ಅಧಿವೇಶನದ ಕಾರ್ಯವ್ಯೆಹ ಚರ್ಚೆಗೆ ಕಾಂಗ್ರೆಸ್ ನಾಯಕರ ಸಭೆ

Update: 2016-07-16 22:59 IST

ಹೊಸದಿಲ್ಲಿ, ಜು.16: ಸಂಸತ್ತಿನ ಮಳೆಗಾಲದ ಅಧಿವೇಶನ ಸೋಮವಾರ ಆರಂಭಗೊಳ್ಳಲಿದೆ. ಅದಕ್ಕೆ ಪೂರ್ವಭಾವಿಯಾಗಿ ಇಂದು ಕಾಂಗ್ರೆಸ್ ನಾಯಕರು ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ, ಜಿಟಿಎಸ್ ಮಸೂದೆ ಸಹಿತ ಪ್ರಮುಖ ವಿಷಯಗಳ ಕುರಿತು ಕಾಂಗ್ರೆಸ್‌ನ ಕಾರ್ಯವ್ಯೆಹದ ಕುರಿತು ಚರ್ಚಿಸಿದ್ದಾರೆ.
ಸೋನಿಯಾರ ನಿವಾಸದಲ್ಲಿ ನಡೆದ ಸಭೆಗೆ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಝಾದ್, ಪಕ್ಷದ ಮೇಲ್ಮನೆ ಉಪನಾಯಕ ಆನಂದ ಶರ್ಮಾ ಹಾಗೂ ಲೋಕಸಭೆಯ ಮುಖ್ಯ ಸಚೇತಕ ಜ್ಯೋತಿರಾದಿತ್ಯ ಸಿಂಧ್ಯಾ ಸಹಿತ ಹಲವು ನಾಯಕರು ಹಾಜರಾಗಿದ್ದಾರೆ.
ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯಸಭೆಯ ಮುಖ್ಯ ಸಚೇತಕ ಸತ್ಯವೃತ ಚೌಧರಿ ಸಹ ಸಭೆಯಲ್ಲಿ ಉಪಸ್ಥಿತರಿರುವ ನಿರೀಕ್ಷೆಯಿದೆ.
ದೀರ್ಘಕಾಲದಿಂದ ಬಾಕಿಯುಳಿದಿರುವ ಜಿಎಸ್‌ಟಿ ಮಸೂದೆ ಅಂಗೀಕಾರದ ಸಂಬಂಧ ಸರಕಾರವು ನಿನ್ನೆ ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗಿ ಬೆಂಬಲ ಕೋರಿತ್ತು.
ಅರುಣಾಚಲ ಪ್ರದೇಶದ ಕಾಂಗ್ರೆಸ್ ಸರಕಾರವನ್ನು ಪುನಃಸ್ಥಾಪಿಸಿ 2015ರ ಡಿ.15ರ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿರುವ ವಿಷಯದಲ್ಲಿ ಸರಕಾರ ಹಾಗೂ ಬಿಜೆಪಿಯನ್ನು ಉಭಯ ಸದನಗಳಲ್ಲೂ ಒಂಟಿ ಕಾಲಲ್ಲಿ ನಿಲ್ಲಿಸಬಯಸಿದೆಯೆಂದು ಮೂಲಗಳು ತಿಳಿಸಿವೆ.
ವಿವಿಧ ವಿಷಯಗಳಲ್ಲಿ ಪಕ್ಷದ ನಿಲುವಿನ ಕುರಿತು ಅಗ್ರ ನಾಯಕರು ಚರ್ಚೆ ನಡೆಸಿದ್ದಾರೆನ್ನಲಾಗಿದೆ.
ಸಂಸತ್ತಿನ ಮಳೆಗಾಲದ ಅಧಿವೇಶನ ಸೋಮವಾರ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಸರಕಾರವು ರವಿವಾರ ಸರ್ವಪಕ್ಷ ಸಭೆಯೊಂದನ್ನು ಕರೆದಿದ್ದು, ಬಾಕಿಯುಳಿದಿರುವ ಮಸೂದೆಗಳ ಮಂಜೂರಾತಿಗೆ ವಿಪಕ್ಷಗಳ ಬೆಂಬಲವನ್ನು ಯಾಚಿಸಲಿದೆ.
ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಸಹ ರವಿವಾರ ಸಂಜೆ ಸರ್ವಪಕ್ಷ ಸಭೆಯೊಂದನ್ನು ನಡೆಸಲಿದ್ದು, ಸಂಸತ್ತಿನ ಸುಗಮ ಕಾರ್ಯಾಚರಣೆಗೆ ಎಲ್ಲ ಪಕ್ಷಗಳ ಬೆಂಬಲ ಕೋರಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News