ರಾಜ್ಯವೊಂದು ತನ್ನ ಪ್ರಜೆಗಳನ್ನೇ ಕೊಲ್ಲುವುದು ಸ್ವಯಂ-ವಿನಾಶ
ಶ್ರೀನಗರ, ಜು.16: ರಾಜ್ಯವೊಂದು ತನ್ನದೇ ನಾಗರಿಕ ರನ್ನು ಕೊಲ್ಲುವುದು ಹಾಗೂ ಅಂಗಹೀನಗೊಳಿಸುವುದು ಸ್ವಯಂ ಘಾಸಿ ಹಾಗೂ ಸ್ವಯಂ ನಾಶದ ಅತ್ಯಂತ ಕೆಟ್ಟ ರೀತಿಯಾಗಿದೆಯೆಂದು ಐಎಎಸ್ ಪರೀಕ್ಷೆಯಲ್ಲಿ ಅತ್ಯುನ್ನತ ಸ್ಥಾನ ಗಳಿಸಿರುವ ಪ್ರಥಮ ಕಾಶ್ಮೀರಿ, ಶಾ ಫಝಲ್ ಶುಕ್ರವಾರ ಹೇಳಿದ್ದಾರೆ.
ಕಾಶ್ಮೀರದ ಶಾಲಾ ಶಿಕ್ಷಣ ನಿರ್ದೇಶಕರಾಗಿ ನಿಯೋಜನೆಗೊಂಡಿರುವ ಅವರು, ತನ್ನ ಚಿತ್ರವನ್ನು ಭಯೋತ್ಪಾದಕರ ಕಮಾಂಡರ್ ಬುರ್ಹಾನ್ ವಾನಿಯ ಚಿತ್ರದ ಬದಿಯಲ್ಲಿ ಪ್ರದರ್ಶಿಸಿ ಹೋಲಿಕೆ ಮಾಡಿದ್ದ ಟಿವಿ ವಾಹಿನಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತನ್ನ ಭಾವಚಿತ್ರವನ್ನು ಹತನಾಗಿರುವ ಭಯೋತಾದಕ ಗುಂಪಿನ ಕಮಾಂಡರ್ ಒಬ್ಬನ ಭಾವಚಿತ್ರದ ಬದಿಯಲ್ಲಿಟ್ಟು ಹೋಲಿಸುವ ಮೂಲಕ ರಾಷ್ಟ್ರೀಯ ಮಾಧ್ಯಮದ ಒಂದು ವಿಭಾಗವು ಸುಳ್ಳನ್ನು ನಗದೀಕರಿಸುವ, ಜನರನ್ನು ವಿಭಜಿಸುವ ಹಾಗೂ ಇನ್ನಷ್ಟು ದ್ವೇಷವನ್ನು ಸೃಷ್ಟಿಸುವ ತನ್ನ ಪಾರಂಪರಿಕ ಕ್ರೌರ್ಯದೆಡೆಗೆ ಮತ್ತೆ ಮರಳಿದೆಯೆಂದು ಶಾ ಫಝಲ್ ಫೇಸ್‌ಬುಕ್ ಪೋಸ್ ಒಂದರಲ್ಲಿ ಬರೆದಿದ್ದಾರೆ.
ಕಾಶ್ಮೀರವು ಮೃತರಾಗಿರುವ ತನ್ನವರಿಗಾಗಿ ಶೋಕಿಸುತ್ತಿರುವ ವೇಳೆ, ಸುದ್ದಿ ಕೊಠಡಿಗಳ ಪ್ರಚಾರ ಹಾಗೂ ಪ್ರಚೋದನೆ ಕಾಶ್ಮೀರದಲ್ಲಿ ನಿಯಂತ್ರಿಸಲಾಗದ ನೋವು ಹಾಗೂ ಆಕ್ರೋಶವನ್ನು ಬೆಳೆಸುತ್ತಿದೆ. ಕೇವಲ ಟಿಆರ್‌ಪಿಗಾಗಿ ಕಾಶ್ಮೀರ ಕಣಿವೆಗೆ ಬೆಂಕಿ ಹಚ್ಚ ಬಯಸಿ ರುವ ವಿನಾಶಕಾರಿಗಳಿಂದ ತಾವು ಸುರಕ್ಷಿತ ಅಂತರದಲ್ಲಿರಬೇಕೆಂದು ಅವರು ಹೇಳಿದ್ದಾರೆ.