ಮೂವರು ಉಗ್ರರ ಹತ್ಯೆ
Update: 2016-07-16 23:05 IST
ಶ್ರೀನಗರ,ಜು.16: ಹಿಜ್ಬುಲ್ ಮುಜಾಹಿದೀನ್ ಉಗ್ರ ಬುರ್ಹಾನ್ ವಾನಿಯ ಹತ್ಯೆಯನ್ನು ಪ್ರತಿಭಟಿಸಿ ಜಮ್ಮು-ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಹಿಂಸೆಯ ತಾಂಡವದ ನಡುವೆಯೇ ಶನಿವಾರ ಪೂಂಛ್ ಜಿಲ್ಲೆಯ ಸಬ್ಜಿಯಾನ್ ವಿಭಾಗದಲ್ಲಿನ ಅಕ್ಬರ್ ಧೋಕ್ ಪ್ರದೇಶದಲ್ಲಿ ನಿಯಂತ್ರಣ ರೇಖೆಯಲ್ಲಿ ಮೂವರು ಶಂಕಿತ ಉಗ್ರರನ್ನು ಭದ್ರತಾ ಪಡೆಗಳು ಕೊಂದು ಹಾಕಿವೆ.
ಮೂವರೂ ಪಾಕಿಸ್ತಾನದವರಾಗಿದ್ದು, ಲಷ್ಕರೆ ತಯಿಬಾಕ್ಕೆ ಸೇರಿರುವ ಸಾಧ್ಯತೆ ಯಿದೆ ಎಂದು ನಾರ್ದರ್ನ್ ಕಮಾಂಡ್‌ನ ವಕ್ತಾರ ಎಸ್.ಡಿ.ಗೋಸ್ವಾಮಿ ತಿಳಿಸಿದರು.
ಐವರು ಉಗ್ರರ ಗುಂಪೊಂದು ಭಾರತದ ಗಡಿಯೊಳಕ್ಕೆ ನುಸುಳಲು ಯತ್ನಿಸಬಹುದು ಎಂಬ ಗುಪ್ತಚರ ಮಾಹಿತಿಯ ಮೇರೆಗೆ ಸೇನೆಯು ಶೋಧ ಕಾರ್ಯಾಚರಣೆ ಕೈಗೊಂಡಿತ್ತು. ಈ ವೇಳೆ ಮೂವರು ಉಗ್ರರು ಬಲಿಯಾದರೆ ಇನ್ನಿಬ್ಬರು ತಪ್ಪಿಸಿಕೊಂಡಿದ್ದಾರೆ. ಅವರಿಗಾಗಿ ಶೋಧ ಮುಂದುವರಿದಿದೆ.