ಪೇಜಾವರ ಶ್ರೀಗಳೇ ನನ್ನ ಹೈಕಮಾಂಡ್

Update: 2016-07-16 17:42 GMT

ಉಡುಪಿ ರಾಜಾಂಗಣದಲ್ಲಿ ಪೇಜಾವರ ಶ್ರೀ ಮಾನ್ಯ ಮಾಜಿ ಮುಖ್ಯಮಂತ್ರಿ, ಮಾಜಿ ರಾಜ್ಯಪಾಲ, ಮಾಜಿ ವಿದೇಶಾಂಗ ಸಚಿವ, ಮಾಜಿ ಕಾಂಗ್ರೆಸಿಗ ಎಸ್ಸೆಂ ಕೃಷ್ಣ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದಾಕ್ಷಣ ಅವರಿಗೆ ಜ್ಞಾನೋದಯವಾಯಿತು. ಕೃಷ್ಣ ಮಠದಲ್ಲಿ ಪೇಜಾವರಶ್ರೀ ಅವರು ಬೋಧಿಸಿದ ಭಗವದ್ಗೀತೆಯ ಪರಿಣಾಮವಾಗಿ ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರ ಅಖಿಲಾಂಡ ಬ್ರಹ್ಮಾಂಡ ವ್ಯಕ್ತಿತ್ವ ಅರಿವಾಗಿ ಒಮ್ಮೆಲೆ ‘‘ಕೈ ಬಲ ಪಡಿಸಿ ಕೈ ಬಲಪಡಿಸಿ’’ ಎಂದು ಕೂಗಿದರು.

ಪತ್ರಕರ್ತ ಎಂಜಲು ಕಾಸಿ ಮಾತ್ರ ತಪ್ಪು ತಿಳಿದುಕೊಂಡು ‘‘ಯಾರ ಕೈ ಸಾರ್? ಸಿದ್ದರಾಮಯ್ಯ ಅವರ ಕೈಯನ್ನು ಬಲಪಡಿಸಬೇಕೇ?’’ ಎಂದು ಮುಂದಿನ ಸಾಲಿನಿಂದ ಏಕಾಏಕಿ ಕೇಳಿ ಬಿಟ್ಟ. ಪೇಜಾವರ ಶ್ರೀಗಳಿಗೆ ಅತ್ಯಂತ ಮುಜುಗರವಾಗಿ ‘ಶಾಂತಂ ಪಾಪಂ...’’ ಎಂದು ಗೊಣಗಿದರು.
‘‘ನರೇಂದ್ರ ಮೋದಿಯ ಕೈಯನ್ನು ಬಲಪಡಿಸಬೇಕು....ಕಣ್ರೀ...ಅವರು ಈ ದೇಶದಲ್ಲಿ ಹಿಂದೆ ಕಂಡಿಲ್ಲದ, ಮುಂದೆ ಕಾಣದ ಪ್ರಧಾನಮಂತ್ರಿ...ಮತ್ತು ನಾನು ಹಿಂದೆ ಕಂಡಿಲ್ಲದ ಮುಂದೆ ಕಾಣದ ಮಾಜಿ ಮುಖ್ಯಮಂತ್ರಿ...’’

‘‘ನರೇಂದ್ರ ಮೋದಿಯ ಕೈ ಬಲಪಡಿಸಲು ನೀವು ಬಿಜೆಪಿ ಸೇರುವ ಸಾಧ್ಯತೆ ಇದೆಯೆ...?’’ ಕಾಸಿ ತನ್ನ ಸಂದರ್ಶನವನ್ನು ಮುಂದುವರಿಸಿದ.
‘‘ನರೇಂದ್ರ ಮೋದಿಯ ಕೈ ಬಲಪಡಿಸುವ ನಿಟ್ಟಿನಲ್ಲಿ ನೀವು ಕಾಂಗ್ರೆಸ್‌ನೊಳಗೆ ಇರಿ. ನೀವೆಲ್ಲ ಕಾಂಗ್ರೆಸ್‌ನೊಳಗೆ ಇದ್ದರೆ ಸಹಜವಾಗಿಯೇ ನರೇಂದ್ರ ಮೋದಿಯ ಕೈ ಬಲವಾಗುತ್ತಾ ಹೋಗುತ್ತದೆ. ನೀವು ಕಾಂಗ್ರೆಸ್‌ನೊಳಗೆ ಇದ್ದು ಸಿದ್ದರಾಮಯ್ಯ ಅವರ ಕಾಲೆಳೆಯುತ್ತಾ ಇದ್ದರೆ ಸಾಕು ಎಂದು ಪೇಜಾವರಶ್ರೀಗಳು ಆಶೀರ್ವದಿಸಿದ್ದಾರೆ...’’ ಎಂದು ಭಯಭಕ್ತಿಯಿಂದ ಶ್ರೀಗಳೆಡೆಗೆ ಕೈ ಮುಗಿದರು.

‘‘ಸಾರ್, ಕಾಂಗ್ರೆಸ್‌ನ ಕೈಯ ಗತಿಯೇನು ಸಾರ್?’’ ಕಾಸಿ ಕೇಳಿದ.

‘‘ಎಲ್ಲಿಯವರೆಗೆ ಹೈಕಮಾಂಡ್ ಕೈ ಸಿದ್ದರಾಮಯ್ಯ ಹೆಗಲ ಮೇಲಿರುತ್ತದೆಯೋ ಅಲ್ಲಿಯವರೆಗೆ ನನ್ನ ಕೈ ಮೋದಿಯ ಕೈಯನ್ನು ಬಲಪಡಿಸುತ್ತಿರುತ್ತದೆ...’’

‘‘ಹಾಗಲ್ಲ ಸಾರ್...ನೀವು, ಮೊಯ್ಲಿ, ಆಸ್ಕರ್‌ರಂತಹ ಹಿರಿಯರನ್ನು ಹೊತ್ತು ತಿರುಗಿ ತಿರುಗಿ ಕಾಂಗ್ರೆಸ್‌ನ ಕೈ ಶಕ್ತಿಹೀನವಾಯಿತು ಎಂಬ ಆರೋಪ ಇದೆಯಲ್ಲ?’’ ಕಾಸಿ ಹೆದರುತ್ತಲೇ ಕೇಳಿದ.

‘‘ನೋಡ್ರೀ...ಕಾಂಗ್ರೆಸ್ ಎಂದರೆ ನಾವು. ನಾವು ಎಂದರೆ ಕಾಂಗ್ರೆಸ್. ಪಿತ್ರಾರ್ಜಿತವಾಗಿ ಬಂದ ಆಸ್ತಿ. ಈಗ ನೋಡಿದರೆ ಯಾರ್ಯಾರೋ ಹೊಸಬರು ಬಂದವರು ಅನುಭವಿಸುತ್ತಿದ್ದಾರೆ. ನಮ್ಮನ್ನು ವೃದ್ಧಾಶ್ರಮಕ್ಕೆ ಸೇರಿಸುವ ಹುನ್ನಾರ ನಡೆಯುತ್ತಿದೆ. ಆದುದರಿಂದ ನಾವೆಲ್ಲ ನರೇಂದ್ರ ಮೋದಿಯ ಕೈಗಳನ್ನು ಭದ್ರ ಪಡಿಸಲು ಮುಂದಾಗಿದ್ದೇವೆ...’’

‘‘ಆದರೂ ಒಂದು ಕಾಲದಲ್ಲಿ ವಿದೇಶಾಂಗ ಖಾತೆ, ರಾಜ್ಯಪಾಲ ಹುದ್ದೆ ಎಂದು ಬಾಲೆಯೆಳೆ ಹಾಕಿ ಅನ್ನ ಹಾಕಿದ ಕೈಗಳಲ್ವ? ಈಗ ಆ ಕೈಗಳನ್ನು ಬಿಟ್ಟು ಮೋದಿಯ ಕೈ ಬಲಪಡಿಸುವುದು ಎಷ್ಟು ಸರಿ ಸಾರ್?’’

‘‘ಏನ್ರೀ...ನಮಗೆ ಅನ್ನ ಹಾಕಿರುವುದರಿಂದಲೇ ಕಾಂಗ್ರೆಸ್ ಇಷ್ಟರವರೆಗೆ ಬದುಕಿದ್ದುದು. ಈಗ ನೋಡಿ...ನಮ್ಮಂಥವರೆಲ್ಲ ಅನ್ನ ಇಲ್ಲದೆ ಕೊರಗಿ ಸೊರಗಿ ಹೋಗಿದ್ದೇವೆ...ಆದ್ರೂ ನಾವು ಕಾಂಗ್ರೆಸ್‌ನ್ನು ಬಿಟ್ಟು ಹೋಗಿಲ್ಲ ಗೊತ್ತಾ? ಅದುವೇ ಪಕ್ಷ ನಿಷ್ಠೆ...’’
 ‘‘ಸಾರ್ ನಿಮ್ಮಂಥವರಿಗೆ ಅನ್ನ ಹಾಕಿ ಹಾಕಿಯೇ ಕಾಂಗ್ರೆಸ್‌ನ ಅನ್ನ ಖಾಲಿಯಾಯಿತಂತೆ...ನೀವು ಬರೇ ಹಾಕಿದ ಅನ್ನ ತಿನ್ನುವುದು ಬಿಟ್ಟರೆ, ಮನೆಗೆ ಕನ್ನ ಹಾಕಿದ್ದೇ ಹೆಚ್ಚು ಅಂತ ಹೇಳ್ತಾರಲ್ಲ...’’

‘‘ಏನ್ರೀ ಹೇಳ್ತಾರೆ? ನಾನು ಆಕ್ಸ್‌ಫರ್ಡ್‌ನಲ್ಲಿ ಓದಿದ್ದೀನಿ. ಎಂತೆಂತಹ ಬ್ರಾಹ್ಮಣ್ರೂ ನಮಗೆ ಮರ್ಯಾದೆ ಕೊಡ್ತಾ ಇದ್ರು. ಇಂಡಿಯಾ ಟುಡೆ ಪತ್ರಕರ್ತರು ನನ್ನನ್ನು ನಂಬರ್ ವನ್ ಎಂದು ಕರೆದ್ರು...ಆದ್ರೂ ನನಗೆ ಸಿಗಬೇಕಾದ ಸ್ಥಾನ ಸಿಗಲಿಲ್ಲ...ನಾನು ಬದುಕಿರುವಾಗಲೇ ಕರ್ನಾಟಕದಲ್ಲಿ ಇನ್ಯಾರೋ ಮುಖ್ಯಮಂತ್ರಿ ಆಗೋದನ್ನು ನೋಡಬೇಕಾದಂತಹ ಸ್ಥಿತಿ ಬಂತು....ಎಂತಹ ಅನ್ಯಾಯ ಕಣ್ರೀ...ನಾನಿದ್ದಿದ್ರೇ...ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಕೃಷ್ಣ ಸೇರಿ ಇಡೀ ದೇಶವನ್ನೇ ಸಿಂಗಾಪುರ ಮಾಡಿ ಬಿಡ್ತಿದ್ವಿ....ಪೇಜಾವರ ಶ್ರೀಗಳು ಆ ಕಾಲ ಬೇಗ ಬರಲಿ ಎಂದು ಆಶೀರ್ವದಿಸಿದ್ದಾರೆ...’’

‘‘ಅಂದರೆ ಮುಂದಿನ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ನಿಮ್ಮನ್ನು ಆಯ್ಕೆ ಮಾಡುವ ಸಾಧ್ಯತೆ ಇದೆಯಾ?’’ ಕಾಸಿ ಕುತೂಹಲದಿಂದ ಕೇಳಿದ.
‘‘ಛೆ...ಛೆ...ಹಾಗಲ್ಲಾರಿ...ಕಾಂಗ್ರೆಸ್‌ನಿಂದಾನೆ ಪೇಜಾವರ ಶ್ರೀಗಳು ನನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವ ಸಾಧ್ಯತೆಯಿದೆ. ಬಿಜೆಪಿಯಿಂದ ಯಡಿಯೂರಪ್ಪ ಮುಖ್ಯಮಂತ್ರಿ ಅಭ್ಯರ್ಥಿ. ಹೀಗೆ...ಯಾರು ಗೆದ್ದರೂ ಮೋದಿಯ ಕೈ ಬಲವಾಗುತ್ತಲ್ಲ ಎನ್ನುವ ಆಸೆ ಅವರದು...’’
‘‘ಆದರೆ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವುದು ಕಾಂಗ್ರೆಸ್ ಹೈಕಮಾಂಡ್ ಅವರಲ್ಲವೆ?’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ಯಾವ ಹೈಕಮಾಂಡ್ ಕೂಡ ಪೇಜಾವರಶ್ರೀಗಳಿಗಿಂತ ಮೇಲೆ ಅಲ್ಲ. ಕಳೆದ ಪರ್ಯಾಯಕ್ಕೆ ಸಿದ್ದರಾಮಯ್ಯ ಬರದೇ ಇರುವುದು ಪೇಜಾವರಶ್ರೀಗಳಿಗೆ ಸಿಕ್ಕಾಪಟ್ಟೆ ಬೇಜಾರಾಗಿದೆ. ಸಿದ್ದರಾಮಯ್ಯ ಬರುತ್ತಾರೆ ಎಂದು ಶೂದ್ರ ಪಂಕ್ತಿಯಲ್ಲಿ ವಿಶೇಷ ಬಾಳೆಯೆಲೆಯಲ್ಲಿ ವಿವಿಧ ಭಕ್ಷಗಳನ್ನು ಬಡಿಸಿಟ್ಟಿದ್ದರಂತೆ. ಹಾಗೆಯೇ ಅವರು ಪ್ರವೇಶಿಸಿದ ಜಾಗವನ್ನು ಶುದ್ಧೀಕರಿಸಲು ಗಂಗಾಜಲವನ್ನೂ ತರಿಸಿಟ್ಟಿದ್ದರಂತೆ. ಕನಕನ ಕಿಂಡಿಯಲ್ಲಿ ಕೃಷ್ಣ ದರ್ಶನಕ್ಕೂ ಏರ್ಪಾಡು ಮಾಡಿದ್ದರಂತೆ...ಇಷ್ಟೆಲ್ಲ ವ್ಯವಸ್ಥೆ ಮಾಡಿದರೂ ಅವರು ಪರ್ಯಾಯಕ್ಕೆ ಆಗಮಿಸದೇ ಆ ಸಾಬಿ ಇಬ್ರಾಹೀಮನನ್ನು ತನ್ನ ಪರವಾಗಿ ಕಳುಹಿಸಿದರಲ್ಲ ಎಂದು ಅವರಿಗೆ ಸಖತ್ ಬೇಜಾರಾಯಿತಂತೆ...ಶೂದ್ರ ಪಂಕ್ತಿ, ದಲಿತ ಪಂಕ್ತಿಯಜೊತೆಗೆ ಮ್ಲೇಚ್ಛ ಪಂಕ್ತಿ ಎನ್ನುವ ಹೊಸ ಪಂಕ್ತಿಯನ್ನು ಹಾಕುವಂತಹ ಸನ್ನಿವೇಶ ನಿರ್ಮಾಣವಾಯಿತಂತೆ...ಸಿದ್ದರಾಮಯ್ಯ ಏನಾದರೂ ಉಡುಪಿಗೆ ಬಂದಿದ್ದರೆ, ಸಿದ್ದರಾಮಯ್ಯ ಊಟ ಮಾಡಿದ ಸ್ಥಳವನ್ನು ವೀಕ್ಷಿಸಲು ಸಿದ್ದನ ಕಿಂಡಿ ಎಂಬ ಕಿಂಡಿ ಕೊರೆದು, ಭಕ್ತಾದಿಗಳಿಂದ ಹಣ ಸಂಗ್ರಹ ಮಾಡುವ ಯೋಜನಯನ್ನೂ ರೂಪಿಸಿದ್ದರಂತೆ...ಸಿದ್ದರಾಮಯ್ಯಬೇಜವಾಬ್ದಾರಿಯಿಂದ ಎಲ್ಲವೂ ವ್ಯರ್ಥವಾಯಿತು. ಇದು ನಿಜಕ್ಕೂ ರಾಜ್ಯದ ಘನತೆಗೆ ಮಾಡಿದ ಅವಮಾನ....ಆದುದರಿಂದಲೇ ಪರ್ಯಾಯಕ್ಕೆ ಬಂದ ಆಸ್ಕರ್, ಮೊಯ್ಲಿ ಮೊದಲಾದವರಿಗೆ ನನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡುವುದಕ್ಕೆ ಮತ್ತು ಮೋದಿಯ ಕೈ ಬಲ ಪಡಿಸುವುದಕ್ಕೆ ಸೂಚನೆ ನೀಡಿದ್ದಾರೆ....ಹಾಗೆಯೇ ನನ್ನ ಕಾಲುಗಳನ್ನು ಬಲಪಡಿಸುವುದಕ್ಕೆ ಕೂಡ ಮೊಯ್ಲಿ, ಆಸ್ಕರ್ ಅವರಿಗೆಸೂಚನೆ ನೀಡಲಾಗಿದೆ...’’ ಕೃಷ್ಣ ಅವರು ಸವಿವರವಾಗಿ ಕಾಸಿಗೆ ತಿಳಿಸಿದರು.

‘‘ಸಿದ್ದರಾಮಯ್ಯ ಅವರು ಒಳ್ಳೆಯ ಸರಕಾರವನ್ನೇ ನೀಡುತ್ತಿದ್ದಾರಲ್ಲ ಸಾರ್...ಬಡವರಿಗೆ ಒಂದು ಕೆಜಿ ಅಕ್ಕಿ ಕೊಡ್ತಾರೆ...ಸಬ್ಸಿಡಿ ಕೊಡ್ತಾರೆ....ಆ ಭಾಗ್ಯ, ಈ ಭಾಗ್ಯ...’’ ಕಾಸಿ ಹೇಳಿದ.

‘‘ನೋಡ್ರಿ ನನ್ನ ಆಳ್ವಿಕೆಯ ಕಾಲದಲ್ಲೇ ಕರ್ನಾಟಕದ ಬಡವರೆಲ್ಲರನ್ನು ಶ್ರೀಮಂತಗೊಳಿಸಿದ್ದೇನೆ....ಹೀಗಿರುವಾಗ ಇವರಿಗೆ ಒಂದು ರೂಪಾಯಿಗೆ ಒಂದು ಕೆಜಿ ಅಕ್ಕಿ ಕೊಡುವ ಅಗತ್ಯ ಏನಿತ್ತು? ಇವರು ಅಕ್ಕಿ ಕೊಟ್ಟು ದಾನಶೂರ ಎನಿಸಿದರು. ಆದರೆ ನನ್ನ ಕಾಲದಲ್ಲಿ ಒಂದು ರೂಪಾಯಿಗೆ ಇನ್ಫೋಸಿಸ್‌ನವರಿಗೆ ಭೂಮಿಕೊಟ್ಟಿದ್ದೇನೆ. ಐಟಿ, ಬಿಟಿಯವರಿಗೆ ಸಬ್ಸಿಡಿಯಲ್ಲಿ ಇಡೀ ಬೆಂಗಳೂರನ್ನೇ ಹರಿದು ಹಂಚಿ ಕೊಟ್ಟಿದ್ದೇನೆ. ಬಡವರಿಗೆ ಅಕ್ಕಿ ಕೊಟ್ಟರೆ ಅವರು ಅದನ್ನು ಕುಡಿದು ನಾಶ ಮಾಡುತ್ತಾರೆ. ರಸ್ತೆ ಕೆಲಸಕ್ಕೆ, ಚರಂಡಿ ಕೆಲಸಕ್ಕೆ ಜನ ಸಿಗಲ್ಲ. ಆದರೆ ಇನ್ಫೋಸಿಸ್‌ನಂತಹ ದೊಡ್ಡವರಿಗೆ ಒಂದು ರೂಪಾಯಿಯಲ್ಲಿ ಭೂಮಿ, ನೀರು ಎಲ್ಲ ಕೊಟ್ರೆ...ಅದರಿಂದ ಅಭಿವೃದ್ಧಿಯಾಗತ್ತೆ. ವಿಶ್ವದ ಗಮನ ನಮ್ಮ ಕಡೆಗೆ ಹರಿಯತ್ತೆ...ಆದುದರಿಂದಲೇ ಮತ್ತೆ ನಾನು ಮುಖ್ಯಮಂತ್ರಿಯಾಗುತ್ತೇನೆ....ಇನ್ಫೋಸಿಸ್‌ಗೆ ಭೂಮಿಭಾಗ್ಯ, ಮಲ್ಯನಿಗೆ ಸಾಲಭಾಗ್ಯ, ವಿದೇಶಿ ಕಂಪೆನಿಗಳಿಗೆ ರೈತರ ಜಮೀನು ಭಾಗ್ಯ ಹೀಗೆ ಭಾಗ್ಯಗಳ ಮೇಲೆ ಭಾಗ್ಯಗಳನ್ನು ಕೊಟ್ಟು ನರೇಂದ್ರ ಮೋದಿಯ ಕೈಯನ್ನು ಬಲಪಡಿಸುತ್ತೇನೆ....’’ ಕೃಷ್ಣ ತನ್ನ ಯೋಜನೆಗಳನ್ನೆಲ್ಲ ಒಂದೊಂದಾಗಿ ಘೋಷಿಸುತ್ತಾ ಹೋದರು.

‘‘ರೈತರಿಗೆ ಆತ್ಮಹತ್ಯೆ ಭಾಗ್ಯವನ್ನು ಘೋಷಿಸಿದ್ದು ನೀವೇ ಅಲ್ವಾ ಸಾರ್?’’ ಕಾಸಿ ನೆನಪಿಸಿದ.

‘‘ಹೌದ್ರಿ...ನನ್ನ ಕಾಲದಲ್ಲಿ ರೈತರ ಆತ್ಮಹತ್ಯೆ ಮಾಡಿಕೊಂಡು ಅಭಿವೃದ್ಧಿಗೆ ದಾರಿಯನ್ನು ಸುಗಮಮಾಡಿಕೊಡ್ತಾ ಇದ್ದರು. ಆದರೆ ಇದೀಗ ಪೊಲೀಸರಿಗೆ ಆತ್ಮಹತ್ಯೆ ಭಾಗ್ಯ ಬಂದು ಬಿಟ್ಟಿದೆ. ಒಂದು ಕಾಲದಲ್ಲಿ ಬೀದಿಗಿಳಿದ ರೈತರನ್ನು ಗೋಲಿ ಬಾರ್ ಮಾಡುತ್ತಿದ್ದ ಪೊಲೀಸರೇ ಇಂದು ಆತ್ಮಹತ್ಯೆ ಮಾಡುವ ಸ್ಥಿತಿ ಬಂದಿದೆ.... ಪೊಲೀಸರಿಂದ ಆತ್ಮಹತ್ಯೆ ಎನ್ನುವ ಬದಲು ಪೊಲೀಸರೇ ಆತ್ಮಹತ್ಯೆ ಎಂಬ ವರದಿಗಳನ್ನು ಓದುವ ಸ್ಥಿತಿ ಬಂದಿದೆ’’

‘‘ಸಾರ್ ಮುಂದಿನ ನಿಮ್ಮ ಕಾರ್ಯಕ್ರಮ ಏನು ಸಾರ್?’’ ಕಾಸಿ ಕೇಳಿದ.

‘‘ಯಾವ ಪಕ್ಷದಲ್ಲಿ ಧರ್ಮಕ್ಕೆ ಊಟ ಸಿಗತ್ತೋ ಅಲ್ಲಿ ಉಂಡು ಪಕ್ಷದ ನಾಯಕರ ಕೈಗಳನ್ನು ಬಲಪಡಿಸುವುದು. ಮತ್ತು ಈಗ ಇರುವ ಮುಖ್ಯಮಂತ್ರಿಯ ಕಾಲೆಳೆದು ಆ ಮೂಲಕ ಪೇಜಾವರಶ್ರೀಗಳ ಪ್ರಸಾದದ ಋಣವನ್ನು ತೀರಿಸುವುದು...’’ ಪಕ್ಕದಲ್ಲೇ ಹಸನ್ಮುಖರಾಗಿ ಕುಳಿತಿದ್ದ ಪೇಜಾವರಶ್ರೀಗಳಿಗೆ ಸಾಷ್ಟಾಂಗ ಎರಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News