×
Ad

ಅಪಹೃತರ ಬಿಡುಗಡೆಗೆ ತಮ್ಮ ಹೆಣ್ಣುಮಕ್ಕಳ ಶಿಕ್ಷಣದ ಬೇಡಿಕೆ ಇಡುವ ಬುಡಕಟ್ಟು ಗುಂಪು!

Update: 2016-07-17 09:29 IST

ಗುವಾಹತಿ, ಜು.17: ಸಾಮಾನ್ಯವಾಗಿ ಉಗ್ರರು ಅಥವಾ ಭಯೋತ್ಪಾದಕರು ಜೈಲಿನಲ್ಲಿರುವ ಸಹಚರರನ್ನು ಬಿಡಿಸಿಕೊಳ್ಳಲು ಅಥವಾ ಹಣವನ್ನು ಪಡೆಯಲು ಒತ್ತೆಯಾಳುಗಳನ್ನು ಇಟ್ಟುಕೊಳ್ಳುತ್ತಾರೆ. ಆದರೆ ಅಸ್ಸಾಂನ ಬುಡಕಟ್ಟು ಗುಂಪೊಂದು, ಸಮುದಾಯದ 100 ಮಂದಿ ಹೆಣ್ಣುಮಕ್ಕಳ ಶಿಕ್ಷಣದ ಹೊಣೆಯನ್ನು ಹೊರುವ ಭರವಸೆ ದೊರಕಿದ ಬಳಿಕ ಒತ್ತೆಯಾಳುಗಳನ್ನು ಬಂಧಮುಕ್ತಗೊಳಿಸಿದ ಅಪರೂಪದ ಘಟನೆ ನಡೆದಿದೆ.

ಬುಡಕಟ್ಟು ಗುಂಪಾದ ಬ್ರೂ ನ್ಯಾಷನಲ್ ಲಿಬರೇಷನ್ ಫ್ರಂಟ್ ಕಾರ್ಯಕರ್ತರು ಜುಲೈ ಮೊದಲ ವಾರ, ಅರಣ್ಯಾಧಿಕಾರಿ ಮನೋಜ್ ಕುಮಾರ್ ಸಿಂಗ್ ಹಾಗೂ ಇತರ ಇಬ್ಬರನ್ನು ದಕ್ಷಿಣ ಅಸ್ಸಾಂನ ಹೈಲಕಂಡಿ ಜಿಲ್ಲೆಯಿಂದ ಅಪಹರಿಸಿತ್ತು. ಅಪಹರಣಗೊಂಡ ಇತರ ಇಬ್ಬರು ಮಿಜೋರಾಂ ಗಡಿಗ್ರಾಮವಾದ ಮುಸ್ಲಿಂ ಬಾಹುಳ್ಯದ ಬದ್ಲಾಬಂದಿಯ ನಿವಾಸಿಗಳು.

ಅಪಹರಣಕಾರರು ಒತ್ತೆಯಾಳುಗಳನ್ನು ಅಸ್ಸಾಂ- ಮಿಜೋರಾಂ ಗಡಿಯ ಅರಣ್ಯಕ್ಕೆ ಒಯ್ದರು. ಗ್ರಾಮಸ್ಥರು ರಣೋತ್ಸಾಹದಲ್ಲಿದ್ದರು. ಜಿಲ್ಲಾಡಳಿತ ಸಭೆಗಳನ್ನು ನಡೆಸಿ ಮುಸ್ಲಿಮರು ಹಾಗೂ ಬ್ರೂ ಜನಾಂಗದ ನಡುವೆ ಸಂಧಾನ ಏರ್ಪಡಿಸಿತ್ತು. ಕೊನೆಗೆ ರಾಜ್ಯಪಾಲರು ಕೂಡಾ ಈ ಬಗ್ಗೆ ಗಮನ ಹರಿಸಿ, 100 ಮಂದಿ ಬ್ರೂ ಸಮುದಾಯದ ಹೆಣ್ಣುಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಕೇಂದ್ರ ಸರಕಾರದ 'ಬೇಟಿ ಬಚಾವೊ ಬೇಟಿ ಪಢಾವೊ' ಆಂದೋಲನದಡಿ ಹೊರುವುದಾಗಿ ಭರವಸೆ ನೀಡಿದರು. ಇದನ್ನು ಸ್ಥಳೀಯ ಸಂಸದರು, ಶಾಸಕರು ಹಾಗೂ ಇತರ ರಾಜಕೀಯ ಮುಖಂಡರು ಒಪ್ಪಿಕೊಂಡರು.
ಸರಕಾರದ ಕ್ರಮದಿಂದ ಅಚ್ಚರಿಗೊಂಡ ಅಪಹರಣಕಾರರು ಇದನ್ನು ಒಪ್ಪಿಕೊಂಡರು. "ಸಮುದಾಯದ ಹಿತಾಸಕ್ತಿಯ ಸಲುವಾಗಿ ನಾವು ಇದನ್ನು ಒಪ್ಪಿಕೊಂಡಿದ್ದೇವೆ" ಎಂದು ಬಿಎನ್ಎಲ್ ವಕ್ತಾರ ಎಸ್.ಚೋರ್ಕಿ ಪ್ರಕಟಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News