ಆರೆಸ್ಸೆಸ್‌ನಿಂದ ಗಾಂಧೀಜಿ ಹತ್ಯೆ’’ ಹೇಳಿಕೆಗೆ ವಿಷಾದ ಸೂಚಿಸಿ ಇಲ್ಲವೇ ವಿಚಾರಣೆ ಎದುರಿಸಿ

Update: 2016-07-19 09:22 GMT

ಹೊಸದಿಲ್ಲಿ, ಜು.19: ‘ರಾಷ್ಟ್ರಪಿತ ಮಹಾತ್ಮಾ ಗಾಂಧಿಯನ್ನು ಕೊಂದಿದ್ದು ಆರೆಸ್ಸೆಸ್’ ಎಂಬ ಹೇಳಿಕೆಗೆ ಕ್ಷಮೆಕೋರಬೇಕು ಇಲ್ಲವೇ ವಿಚಾರಣೆಯನ್ನು ಎದುರಿಸಲು ಸಿದ್ಧವಾಗಬೇಕು ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಸುಪ್ರೀಂಕೋರ್ಟ್ ಮಂಗಳವಾರ ಸೂಚಿಸಿದೆ.
ಈ ವಿಷಯ ವಿಚಾರಣೆಯಲ್ಲಿರುವುದರಿಂದ ಆರೆಸ್ಸೆಸ್ ವಿರುದ್ಧ ಹೇಳಿಕೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ವಿಷಯ ಏನಿದೆ ಎಂಬುದನ್ನು ರಾಹುಲ್ ಸಾಬೀತುಪಡಿಸಬೇಕು. ಒಂದು ಸಂಸ್ಥೆಯ ಬಗ್ಗೆ ದೂಷಣೆ ಮಾಡುವ ಹಕ್ಕು ನಿಮಗಿಲ್ಲ ಎಂದು ಕೋರ್ಟ್ ತಾಕೀತು ಮಾಡಿದೆ.
ಇದೊಂದು ಐತಿಹಾಸಿಕ ವಿಷಯವಾಗಿದ್ದು, ಇದು ಸರಕಾರದ ದಾಖಲೆಯಲ್ಲಿದೆ ಎಂದು ವಾದಿಸಿದ ರಾಹುಲ್ ಗಾಂಧಿ ಪರ ವಕೀಲರಾದ ಕಪಿಲ್ ಸಿಬಾಲ್, ಆರೆಸ್ಸೆಸ್ ವಿರುದ್ಧ ನೀಡಲಾಗಿರುವ ಹೇಳಿಕೆಯನ್ನು ಸಮರ್ಥಿಸಲು ಯತ್ನಿಸಿದರು.
ಒಂದು ವೇಳೆ ರಾಹುಲ್ ಗಾಂಧಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಬಯಸಿದರೆ, ಕ್ಷಮೆಕೋರಲು ಸಿದ್ಧರಾಗದೇ ಇದ್ದರೆ, ವಿಚಾರಣೆ ಎದುರಿಸುವುದೇ ಸೂಕ್ತ ಎಂದು ನ್ಯಾಯಾಲಯ ಹೇಳಿದೆ.
 
ಮುಂದಿನ ವಿಚಾರಣೆಯನ್ನು ಎರಡು ವಾರ ಮುಂದೂಡಬೇಕೆಂಬ ರಾಹುಲ್ ಗಾಂಧಿ ಕೋರಿಕೆಯನ್ನು ತಿರಸ್ಕರಿಸಿದ ದೀಪಕ್ ಮಿಶ್ರಾ ಹಾಗೂ ಆರ್‌ಎಫ್ ನಾರಿಮನ್ ಅವರಿದ್ದ ನ್ಯಾಯಪೀಠ ವಿಚಾರಣೆಯನ್ನು ಜು.27ಕ್ಕೆ ಮುಂದೂಡಿದೆ.

ಮಾ.2014ರ ಥಾಣೆ ಜಿಲ್ಲೆಯ ಸಾರ್ವಜನಿಕ ರ್ಯಾಲಿಯೊಂದರಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಆರೆಸ್ಸೆಸ್ ಗಾಂಧೀಜಿಯನ್ನು ಹತ್ಯೆ ಗೈದಿತ್ತು. ಇಂದು ಅವರ ಜನರೇ(ಬಿಜೆಪಿ) ಗಾಂಧಿ ಬಗ್ಗೆ ಮಾತನಾಡುತ್ತಾರೆ..... ಬಿಜೆಪಿ ಸರ್ದಾರ್ ಪಟೇಲ್ ಹಾಗೂ ಗಾಂಧೀಜಿಗೆ ವಿರುದ್ಧವಾಗಿತ್ತು’’ ಎಂದು ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News