×
Ad

ನಿಲ್ಲದ ಕಾಶ್ಮೀರ ಹಿಂಸೆ: ಸಾವಿನ ಸಂಖ್ಯೆ 42ಕ್ಕೇರಿಕೆ

Update: 2016-07-19 20:00 IST

ಶ್ರೀನಗರ,ಜು.19: ದಕ್ಷಿಣ ಕಾಶ್ಮೀರದಲ್ಲಿ ಭದ್ರತಾಪಡೆಗಳು ಹಾಗೂ ಪ್ರತಿಭಟನಕಾರರ ನಡುವೆ ನಡೆದ ಘರ್ಷಣೆಯಲ್ಲಿ ಗಂಭೀರ ಗಾಯಗೊಂಡಿದ್ದ ಮಹಿಳೆಯೊಬ್ಬರು ಮಂಗಳವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆಯುವುದರೊಂದಿಗೆ, ಈ ಕಣಿವೆ ರಾಜ್ಯದಲ್ಲಿ ಕಳೆದ ಹತ್ತು ದಿನಗಳಿಂದ ತಾಂಡವವಾಡುತ್ತಿರುವ ಭೀಕರ ಹಿಂಸಾಚಾರಕ್ಕೆ ಬಲಿ ಯಾದವರ ಸಂಖ್ಯೆ 42ಕ್ಕೇರಿದೆ.
  ಖ್ವಾಝಿಗುಂಡ್‌ನಲ್ಲಿ ಸೇನಾ ವಾಹನವೊಂದರ ಮೇಲೆ ಕಲ್ಲೆಸೆದ ಉದ್ರಿಕ್ತ ಪ್ರತಿಭಟನಕಾರರ ಮೇಲೆ ಭದ್ರತಾಪಡೆಗಳು ಹಾರಿಸಿದ ಗುಂಡು ನಿಲೋಫರ್ ಎಂಬವರಿಗೆ ತಗಲಿ, ಆಕೆ ಗಂಭೀರ ಗಾಯ ಗೊಂಡಿದ್ದರು. ಇಂದು ಆಕೆ ಆಸ್ಪತ್ರೆಯಲ್ಲಿ ಅಸುನೀಗಿದರೆಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಇನ್ನಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು,ಇತರ ಏಳು ಮಂದಿ ಗಾಯಗೊಂಡಿದ್ದರು.
 ದೇವಸರ್ ಎಂಬಲ್ಲಿಗೆ ತೆರಳುತ್ತಿದ್ದ ಸೇನಾ ಗಸ್ತುತಂಡವೊಂದು ಚುರಾಹ್ಟ್ ಖಾಝಿಗುಂಡ್ ಎಂಬಲ್ಲಿ ಪ್ರತಿಭಟನಕಾರರು ನಿರ್ಮಿಸಿದ ರಸ್ತೆ ತಡೆಯನ್ನು ತೆರವುಗೊಳಿಸಲು ಪ್ರಯತ್ನಿಸಿದಾಗ ಕೆಲವರು ಅವರತ್ತ ಕಲ್ಲೆಸೆಯತೊಡಗಿದರು. ದೂರಸರಿಯುವಂತೆ ಸೇನಾತಂಡವು ಪ್ರತಿಭಟನಕಾರರಿಗೆ ಎಚ್ಚರಿಕೆ ನೀಡಿದರೂ, ಅವರು ಮಣಿಯಲಿಲ್ಲವೆನ್ನಲಾಗಿದೆ.

 ‘‘ಕೆಲವು ದುಷ್ಕರ್ಮಿಗಳು ಸೈನಿಕರ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲು ಯತ್ನಿಸಿದರು ಹಾಗೂ ಸೇನಾವಾಹನದ ಮೇಲೂ ಕಲ್ಲೆಸೆಯತೊಡಗಿದು. ಆಗ ಆತ್ಮರಕ್ಷಣೆಗಾಗಿ ಸೇನೆಯು ಗುಂಡು ಹಾರಿಸಬೇಕಾಯಿತೆಂದು’’ ಸೇನಾವಕ್ತಾರರೊಬ್ಬರು ತಿಳಿಸಿದ್ದಾರೆ. ಕಾಶ್ಮೀರಕಣಿವೆಯ ಹತ್ತು ಜಿಲ್ಲೆಗಳಲ್ಲಿ ಕಳೆದೊಂದು ವಾರದಿಂದ ಕರ್ಫ್ಯೂ ಜಾರಿಯಲ್ಲಿದ್ದು, ಪ್ರತಿಭಟನಕಾರರು ಹಾಗೂ ಭದ್ರತಾಪಡೆಗಳ ನಡುವೆ ಘರ್ಷಣೆ ಕೊನೆಗೊಳ್ಳುವ ಯಾವುದೇ ಸೂಚನೆಗಳು ಕಂಡುಬರುತ್ತಿಲ್ಲ.
 ಜುಲೈ 8ರಂದು ಭದ್ರತಾಪಡೆಗಳ ಎನ್‌ಕೌಂಟರ್‌ಗೆ ಹಿಜ್ಭುಲ್ ಮುಜಾಹಿದ್ದೀನ್ ಕಮಾಂಡರ್ ಬುರ್‌ಹಾನ್ ವನಿ ಬಲಿಯಾದ ಬಳಿಕ ಕಾಶ್ಮೀರದೆಲ್ಲೆಡೆ ಹಿಂಸಾಚಾರ ಸ್ಫೋಟಿಸಿತ್ತು.
ಗಲಭೆ ಉಲ್ಬಣಿಸಿರುವ ಹಿನ್ನೆಲೆಯಲ್ಲಿ ಕಾಶ್ಮೀರ ಕಣಿವೆಯಾದ್ಯಂತ ಭಾರೀ ಸಂಖ್ಯೆಯಲ್ಲಿ ಪೊಲೀಸ್ ಹಾಗೂ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ. ಆದರೆ ಮಂಗಳವಾರ ಎಲ್ಲಿಯೂ ಕೂಡಾ ಹೊಸದಾಗಿ ಹಿಂಸಾಚಾರ ಭುಗಿಲೆದ್ದಿರುವ ಬಗ್ಗೆ ವರದಿಯಾಗಿಲ್ಲ. ಈ ಮಧ್ಯೆ ಪ್ರತ್ಯೇಕತಾವಾದಿಗಳ ಮುಷ್ಕರ ಕರೆಗೆ ಸತತ 11ನೇ ದಿನವಾದ ಇಂದು ಕೂಡಾ ಕಾಶ್ಮೀರ ಕಣಿವೆಯಲ್ಲಿ ಜನಜೀವನ ಸ್ತಬ್ಧಗೊಂಡಿದೆ.
 ಪ್ರತ್ಯೇಕತಾವಾದಿ ನಾಯಕರಾದ ಸೈಯದ್ ಅಲಿ ಶಾ ಗಿಲಾನಿ, ಮಿರ್ವೈಝ್ ಉಮರ್ ಫಾರೂಕ್ ಹಾಗೂ ಮುಹಮ್ಮದ್ ಯಾಸಿನ್ ಇಂದು ಜಂಟಿ ಹೇಳಿಕೆಯೊಂದನ್ನು ನೀಡಿ, ಜುಲೈ 22ರವರೆಗೆ ಕಾಶ್ಮೀರ ಬಂದ್ ಮುಂದುವರಿಯಲಿದೆಯೆಂದು ತಿಳಿಸಿದ್ದಾರೆ. ಆದಾಗ್ಯೂ ಜುಲೈ 21ರಿಂದ ಮಧ್ಯಾಹ್ನ 2:00 ಗಂಟೆಯಿಂದ ಅರ್ಧದಿನ ಬಂದ್‌ಗೆ ವಿನಾಯಿತಿ ನೀಡುವುದಾಗಿ ತಿಳಿಸಿದರು.
 ಕಾಶ್ಮೀರದಾದ್ಯಂತ ಮೊಬೈಲ್ ಹಾಗೂ ಇಂಟರ್‌ನೆಟ್ ಸೇವೆಗಳನ್ನೂ ಸ್ಥಗಿತಗೊಳಿಸಲಾಗಿದ್ದು, ಕಳೆದ ನಾಲ್ಕು ದಿನಪತ್ರಿಕೆಗಳೂ ಮಾರುಕಟ್ಟೆಗೆ ಆಗಮಿಸಲಿಲ್ಲವೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News