ದ್ವಿತೀಯ ಸ್ಥಾನ ಉಳಿಸಿಕೊಳ್ಳಲು ಭಾರತಕ್ಕೆ ಭರ್ಜರಿ ಗೆಲುವು ಅಗತ್ಯ
ದುಬೈ, ಜು.19: ಅಗ್ರ ಸ್ಥಾನದಲ್ಲಿರುವ ಆಸ್ಟ್ರೇಲಿಯ ಹಾಗೂ ಎರಡನೆ ರ್ಯಾಂಕಿಂಗ್‌ನಲ್ಲಿ ಭಾರತ ತಂಡ ಮುಂಬರುವ ಶ್ರೀಲಂಕಾ ಹಾಗೂ ವೆಸ್ಟ್‌ಇಂಡೀಸ್ ವಿರುದ್ಧದ ವಿದೇಶಿ ಟೆಸ್ಟ್ ಸರಣಿಯಲ್ಲಿ ಭರ್ಜರಿ ಗೆಲುವು ಸಾಧಿಸಿದರೆ ಐಸಿಸಿ ಟೀಮ್ ರ್ಯಾಂಕಿಂಗ್‌ನಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳಲಿವೆ.
ವೆಸ್ಟ್‌ಇಂಡೀಸ್ ತಂಡ ಗುರುವಾರ ಆ್ಯಂಟಿಗುವಾದಲ್ಲಿ ಆರಂಭವಾಗಲಿರುವ ಭಾರತದ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಆತಿಥ್ಯವಹಿಸಿದೆ. ಆಸ್ಟ್ರೇಲಿಯ ಜು.26 ರಿಂದ ಶ್ರೀಲಂಕಾದ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.
ಭಾರತ ತಂಡ 8ನೆ ರ್ಯಾಂಕಿನಲ್ಲಿರುವ ವೆಸ್ಟ್‌ಇಂಡೀಸ್ ತಂಡಕ್ಕಿಂತ 44 ಅಂಕ ಮುಂದಿದೆ. ಆಸ್ಟ್ರೇಲಿಯ ತಂಡ 7ನೆ ರ್ಯಾಂಕಿನಲ್ಲಿರುವ ಶ್ರೀಲಂಕಾಕ್ಕಿಂತ 33 ಅಂಕಗಳಿಂದ ಮುಂದಿದೆ. ಭಾರತ ಹಾಗೂ ಆಸ್ಟ್ರೇಲಿಯ ಟೆಸ್ಟ್ ಸರಣಿ ಗೆಲ್ಲುವಲ್ಲಿ ವಿಫಲವಾದರೆ ಅಂಕಗಳನ್ನು ಕಳೆದುಕೊಳ್ಳಲಿವೆ.
ಭಾರತ ತಂಡ 112 ಅಂಕದೊಂದಿಗೆ ಎರಡನೆ ಸ್ಥಾನ ಉಳಿಸಿಕೊಳ್ಳಬೇಕಾದರೆ ವಿಂಡೀಸ್ ವಿರುದ್ಧ 3-0 ಅಂತರದಿಂದ ಗೆಲ್ಲಲೇಬೇಕು. ಒಂದು ವೇಳೆ 3-1 ಅಥವಾ 2-0 ಅಂತರದಿಂದ ಸರಣಿ ಜಯಿಸಿದರೆ 110 ಅಂಕಗಳಿಗೆ ಕುಸಿಯುತ್ತದೆ. ಮತ್ತೊಂದೆಡೆ, ವಿಂಡೀಸ್ ತಂಡ 3-1 ಅಥವಾ 2-0 ಅಂತರದಿಂದ ಸರಣಿ ಜಯ ಸಾಧಿಸಿದರೆ 79 ಅಂಕ ಗಳಿಸಲಿದೆ. ಭಾರತ 98 ಅಂಕಕ್ಕೆ ಕುಸಿಯಲಿದೆ.
ಆಸ್ಟ್ರೇಲಿಯ 7ನೆ ರ್ಯಾಂಕಿನ ಲಂಕೆಯ ವಿರುದ್ದ 2-0 ಅಂತರದಿಂದ ಜಯ ಸಾಧಿಸಿದರೆ 118 ಅಂಕವನ್ನು ಉಳಿಸಿಕೊಳ್ಳಲಿದೆ. ಲಂಕಾ 1-0 ಅಂತರದಿಂದ ಜಯ ಸಾಧಿಸಿದರೆ ಸ್ಮಿತ್ ಬಳಗ 111 ಅಂಕಗಳಿಗೆ ಕುಸಿಯಲಿದೆ.