ಭಾರತದ ರಿಯೋ ಒಲಿಂಪಿಕ್ಸ್ ತಂಡಕ್ಕೆ ಬೀಳ್ಕೊಡುಗೆ
ಹೊಸದಿಲ್ಲಿ, ಜು.19: ಭಾರತೀಯ ಒಲಿಂಪಿಕ್ ಅಸೋಸಿಯೇಶನ್(ಐಒಎ) ಸೋಮವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಗೀತ ಮಾಂತ್ರಿಕ ಎ.ಆರ್. ರಹಮಾನ್ ಹಾಗೂ ಬಾಲಿವುಡ್ ನಟ ಸಲ್ಮಾನ್ ಖಾನ್ ಸ್ಫೂರ್ತಿಯುತ ಮಾತುಗಳಿಂದ ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ಅಥ್ಲೀಟ್‌ಗಳಿಗೆ ಬೀಳ್ಕೊಡುಗೆ ನೀಡಿದರು.
ರಿಯೋ ಗೇಮ್ಸ್‌ನ ತರಬೇತಿ ಹಾಗೂ ಸಮಾರಂಭಗಳಲ್ಲಿ ಧರಿಸುವ ಉಡುಪುಗಳ ಅನಾವರಣದೊಂದಿಗೆ ಒಲಿಂಪಿಕ್ ಜ್ವರ ಪ್ರತಿಯೊಬ್ಬರಲ್ಲೂ ಹೆಚ್ಚಾಯಿತು. ಕಾರ್ಯಕ್ರಮದಲ್ಲಿ ಟೆನಿಸ್ ತಾರೆ ಸಾನಿಯಾ ಮಿರ್ಝಾ, ಬ್ಯಾಡ್ಮಿಂಟನ್ ಆಟಗಾರರಾ ಪಿ.ವಿ ಸಿಂಧು ಹಾಗೂ ಕೆ. ಶ್ರೀಕಾಂತ್, ಜಿಮ್ನಾಸ್ಟ್ ದೀಪಾ ಕರ್ಮಾಕರ್, ಕುಸ್ತಿಪಟುಗಳಾದ ಬಬಿತಾ ಕುಮಾರಿ, ವಿನೇಶ್ ಫೋಗತ್, ಜುಡೋ ಪಟು ಅವತಾರ್ ಸಿಂಗ್ ಹಾಗೂ ಟೇಬಲ್ ಟೆನಿಸ್ ಆಟಗಾರ ಮನಿಕಾ ಬಾತ್ರಾ ಸಹಿತ ಇನ್ನಿತರ ಅಥ್ಲೀಟ್‌ಗಳು ಭಾಗವಹಿಸಿದ್ದರು.
ಯಾರೂ ಕೂಡ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ನಾವೇನು ಮಾಡಲಿದ್ದೇವೆಂದು ವಿಶ್ವಕ್ಕೆ ತೋರಿಸಿಕೊಡಿ. ಸಂಗೀತ ಹಾಗೂ ಕ್ರೀಡೆಗಳು ಬಲಿಷ್ಠವಾದ ಒಗ್ಗಟ್ಟಿನ ಅಂಶಗಳಾಗಿವೆ ಎಂದು ಹೇಳಿದ ರಹಮಾನ್, ‘ಕೋಯಿ ಹಮ್‌ಸೇ ಜೀತ್ನಾ ಪಾವೆ’ ಹಾಗೂ ‘ಜೈ ಹೋ’ ಹಾಡುಗಳನ್ನು ಹಾಡಿದರು.
‘‘ನೀವು ಶ್ರೇಷ್ಠ ಪ್ರದರ್ಶನ ನೀಡಿ. ಉಳಿದೆಲ್ಲವನ್ನೂ ಭಗವಂತನಿಗೆ ಬಿಡಿ. ಆದರೆ, ದೇವರಿಗೆ ಹೆಚ್ಚು ಭಾರ ಬಿಡಬೇಡಿ’’ ಎಂದು ಒಲಿಂಪಿಕ್‌ನ ಸದ್ಭಾವನಾ ರಾಯಭಾರಿ ಆಗಿರುವ ಸಲ್ಮಾನ್ ಖಾನ್ ತನ್ನದೇ ಶೈಲಿಯಲ್ಲಿ ಅಥ್ಲೀಟ್‌ಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಥ್ಲೀಟ್‌ಗಳು ಹಾಗೂ ಕೋಚ್‌ಗಳಿಗೆ ಟೀಮ್ ಕಿಟ್ ಹಾಗೂ ಪುಷ್ಪಗುಚ್ಛಗಳನ್ನು ನೀಡಲಾಯಿತು.
‘‘ಐಒಎ ಬ್ರಾಂಡ್ ವೌಲ್ಯವನ್ನು 500 ಕೋಟಿ ರೂ.ಗೆ ಏರಿಸುವ ಯೋಜನೆಯಿದೆ. ಈ ಮೂಲಕ ಯುಎಸ್ ಒಲಿಂಪಿಕ್ ಸಂಸ್ಥೆಯಂತೆಯೇ ಆರ್ಥಿಕ ವಾಗಿ ಸಬಲರಾಗಲು ಪ್ರಯತ್ನಿಸಲಿದ್ದೇವೆ. ನಮಗೆ ಮೂಲಭೂತ ಸೌಕರ್ಯಗಳಿಗೆ ಸರಕಾರದ ಬೆಂಬಲದ ಅಗತ್ಯವೂ ಇದೆ’’ ಎಂದು ಐಒಎ ಅಧ್ಯಕ್ಷ ಎನ್. ರಾಮಚಂದ್ರನ್ ಹೇಳಿದ್ದಾರೆ. ರಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಭಾರತದಿಂದ ಒಟ್ಟು 120 ಅಥ್ಲೀಟ್‌ಗಳು(54 ಮಹಿಳೆಯರ ಸಹಿತ) ಭಾಗವಹಿಸುತ್ತಿದ್ದಾರೆ. ಈ ಬಾರಿ ಲಂಡನ್ ಒಲಿಂಪಿಕ್ಸ್‌ಗಿಂತ 30 ಶೇ.ದಷ್ಟು ಹೆಚ್ಚಿನ ಅಥ್ಲೀಟ್‌ಗಳು ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.
‘‘ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ಅಥ್ಲೀಟ್‌ಗಳಿಗೆ ಸರಕಾರ ಉದಾರವಾಗಿ ಆರ್ಥಿಕ ಸಹಾಯ ಮಾಡಿದೆ. ಈ ಹಿಂದೆ ಕಂತಿನ ಪ್ರಕಾರ ಹಣ ಬಿಡುಗಡೆ ಮಾಡಲಾಗುತ್ತಿತ್ತು. ಈ ಬಾರಿ 90 ಶೇ. ಹಣವನ್ನು ಒಂದೇ ಬಾರಿ ಬಿಡುಗಡೆ ಮಾಡಿದ್ದೇವೆ. ಉಳಿದ 10 ಶೇ. ಹಣವನ್ನು ಲೆಕ್ಕಪತ್ರ ಸಲ್ಲಿಸಿದ ಬಳಿಕ ನೀಡಲಾಗುತ್ತದೆ. ದೀಪಾ ಕರ್ಮಾಕರ್ ಹಾಗೂ ಮಹಿಳಾ ಹಾಕಿ ತಂಡ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಕಾರಣ ಒಲಿಂಪಿಕ್ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಆತ್ಮವಿಶ್ವಾಸ ಹೆಚ್ಚಾಗಿದೆ’’ ಎಂದು ಕೇಂದ್ರ ಕ್ರೀಡಾ ಕಾರ್ಯದರ್ಶಿ ರಾಜೀವ್ ಯಾದವ್ ಹೇಳಿದ್ದಾರೆ.