×
Ad

15 ವರ್ಷಕ್ಕಿಂತ ಹಳೆಯ ಡೀಸೆಲ್ ವಾಹನಗಳಿಗೆ ಎನ್‌ಒಸಿ ಬೇಡ: ಎನ್‌ಜಿಟಿ

Update: 2016-07-20 20:39 IST

ಹೊಸದಿಲ್ಲಿ, ಜು.20: ದಿಲ್ಲಿಯಲ್ಲಿ 15 ವರ್ಷಕ್ಕಿಂತ ಹಳೆಯ ಡೀಸೆಲ್ ವಾಹನಗಳ ನೋಂದಣಿಯನ್ನು ಮೊದಲು ರದ್ದುಗೊಳಿಸಬೇಕು ಹಾಗೂ ದಿಲ್ಲಿ ರಾಷ್ಟ್ರ ರಾಜಧಾನಿ ವಲಯದ ಹೊರಗೆ ಓಡಾಡಲು ಅವುಗಳಿಗೆ ನಿರಾಕ್ಷೇಪ ಪತ್ರ ನೀಡಬಾರದೆಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ಇಂದು ಆದೇಶಿಸಿದೆ.
ಕೇವಲ 15 ವರ್ಷದೊಳಗಿನ ನೋಂದಾವಣೆಯನ್ನು ರದ್ದುಗೊಳಿಸಲಾದ ಡೀಸೆಲ್ ವಾಹನಗಳಿಗಷ್ಟೇ ಸರಕಾರ ನಿಗದಿಪಡಿಸುವ ವಾಹನ ಸಮ್ಮರ್ದ ಕಡಿಮೆಯಿರುವ ದಿಲ್ಲಿ-ಎನ್‌ಐಆರ್‌ನ ಆಯ್ದ ಹೊರವಲಯ ಪ್ರದೇಶಗಳಲ್ಲಿ ಮಾತ್ರ ಸಂಚರಿಸಲು ನಿರಾಕ್ಷೇಪ ಪತ್ರ ನೀಡಬಹುದೆಂದು ಅದು ಹೇಳಿದೆ.
15 ವರ್ಷಗಳಿಗಿಂತ ಹಳೆಯ ಹಾಗೂ ಬಿಎಸ್-1, ಬಿಎಸ್-2 ಡೀಸೆಲ್ ವಾಹನಗಳೆಲ್ಲವನ್ನೂ ಗುಜರಿಗೆ ಹಾಕಬೇಕು. ಅವುಗಳಿಗೆ ಎನ್‌ಒಸಿ ನೀಡಬಾರದೆಂದು ನ್ಯಾಯಮೂರ್ತಿ ಸ್ವತಂತ್ರಕುಮಾರ್ ನೇತೃತ್ವದ ಪೀಠವೊಂದು ನಿರ್ದೇಶನ ನೀಡಿದೆ.
ಅದು, 10 ವರ್ಷಕ್ಕಿಂತ ಹಳೆಯ ಡೀಸೆಲ್ ವಾಹನಗಳು ನಗರದಲ್ಲಿ ಓಡಾಡದಂತೆ ಅವುಗಳ ನೋಂದಣಿ ರದ್ದುಗೊಳಿಸಬೇಕೆಂಬ ತನ್ನ ಈ ಹಿಂದಿನ ಆದೇಶದ ಕುರಿತು ಸ್ಪಷ್ಟೀಕರಣ ನೀಡುತ್ತಿತ್ತು.
ಡೀಸೆಲ್ ವಾಹನಗಳ ನೋಂದಣಿ ರದ್ದತಿಯನ್ನು ಯಾವುದೇ ತಪ್ಪಿಲ್ಲದ ಪರಿಣಾಮಕಾರಿಯಾಗಿ ಮಾಡಬೇಕೆಂದು ತಾವು ಸ್ಪಷ್ಟಪಡಿಸುತ್ತಿದ್ದೇವೆಂದು ಪೀಠ ಹೇಳಿದೆ. ಆದಾಗ್ಯೂ 15 ವರ್ಷಕ್ಕಿಂತ ಹಳೆಯ ಡೀಸೆಲ್ ವಾಹನಗಳ ನೋಂದಣಿ ರದ್ದತಿಯನ್ನು ಮೊದಲು ಮಾಡುವಂತೆ ಅದು ನೋಂದಣಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ನೋಂದಣಿ ರದ್ದುಗೊಳಿಸಿದ 15 ವರ್ಷದೊಳಗಿನ ಡೀಸೆಲ್ ವಾಹನಗಳಿಗೂ ದಿಲ್ಲಿ-ಎನ್‌ಸಿಆರ್‌ನಲ್ಲಿ ಓಡಾಡಲು ಅವಕಾಶ ನೀಡಬಾರದು. ಅವುಗಳಿಗೆ ಕಡಿಮೆ ವಾಹನ ದಟ್ಟಣೆಯಿರುವ ಬೇರೆ ಯಾವುದಾದರೂ ಸ್ಥಳದಲ್ಲಿ ನೋಂದಣಿ ಮಾಡಿಸಿಕೊಳ್ಳಲು ಸಾಧ್ಯವಾಗುವಂತೆ ಅಧಿಕಾರಿಗಳು ನಿರಾಕ್ಷೇಪ ಪತ್ರ ನೀಡಬೇಕೆಂದು ಪೀಠ ಸ್ಪಷ್ಟಪಡಿಸಿದೆ.
ಗಾಳಿಯ ಚದುರುವಿಕೆ ಹೆಚ್ಚಾಗಿರುವ ಹಾಗೂ ವಾಹನ ದಟ್ಟಣೆ ಕಡಿಮೆಯಿರುವ ಪ್ರದೇಶಗಳನ್ನು ಗುರುತಿಸುವಂತೆ ಹಸಿರು ನ್ಯಾಯಾಧಿಕರಣವು ಸರಕಾರಗಳಿಗೆ ಸಲಹೆ ನೀಡಿದೆ.
ಸರಕಾರಗಳು ಗುರುತಿಸುವ ಪ್ರದೇಶಗಳಿಗೆ ಮಾತ್ರ ಎನ್‌ಒಸಿ ನೀಡುವಂತೆ ಪೀಠವು ದಿಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ(ಆರ್‌ಟಿಒ) ಆದೇಶಿಸಿದೆ.
ವಾಹನಗಳನ್ನು ಗುಜರಿಗೆ ಹಾಕುವ ಹಾಗೂ ಅಂತಹ ನೀತಿಗೆ ಬದ್ಧರಾಗುವವರಿಗೆ ಒದಗಿಸಲಾಗುವ ಲಾಭಗಳ ಕುರಿತು ಸಮಿತಿಯೊಂದರ ಅಭಿಪ್ರಾಯ ಪಡೆಯುವಂತೆ ಅದು ಭಾರೀ ಕೈಗಾರಿಕೆಗಳ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ. ವಾಹನ ಮಿತಿ ನಿಗದಿಯ ವಿಚಾರದಲ್ಲಿ ಪ್ರತಿಕ್ರಿಯೆ ನೀಡುವಂತೆಯೂ ಪೀಠವು ದಿಲ್ಲಿ ಸರಕಾರಕ್ಕೆ ಸೂಚಿಸಿದೆ.
 ಮುಟ್ಟುಗೋಲು ಹಾಕಿದವುಗಳೂ ಸೇರಿದಂತೆ ನೋಂದಣಿ ರದ್ದುಪಡಿಸಲಾದ ಡೀಸೆಲ್ ವಾಹನಗಳನ್ನು ನಿಲ್ಲಿಸಲು ದಿಲ್ಲಿ ಸಾರಿಗೆ ನಿಗಮ ಹಾಗೂ ಸಂಚಾರ ಪೊಲೀಸರಿಗೆ ಸ್ಥಳಾವಕಾಶ ಒದಗಿಸುವಂತೆ ಅದು ದಿಲ್ಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News