×
Ad

ರಯೀಸ್- ಕಾಬಿಲ್ ಮೀಟಿಂಗ್ : ಇಬ್ಬರು ಜಾಣರು ಚರ್ಚಿಸಿದ್ದೇನು?

Update: 2016-07-20 23:35 IST

ಮುಂದಿನ ವರ್ಷ ರಯೀಸ್ ಮತ್ತು ಕಾಬಿಲ್ ಏಕಕಾಲದಲ್ಲಿ ಬಿಡುಗಡೆಯಾಗಿ ದೊಡ್ಡ ಸಂಘರ್ಷ ಏರ್ಪಡುವುದನ್ನು ತಪ್ಪಿಸಲು ಶಾರುಖ್ ಖಾನ್ ಪ್ರಯತ್ನಿಸುವಂತಿದೆ. ಹೀಗಾಗಿ ಕಳೆದ ರಾತ್ರಿ ಅವರು ಹೃತಿಕ್ ರೋಶನ್ ರ ಜುಹು ಮನೆಗೆ ಭೇಟಿಕೊಟ್ಟರು. ಆ ಸಂದರ್ಭದಲ್ಲಿ ಶಾರುಖ್ ಕಾಬಿಲ್ ಸಿನಿಮಾದ ನಿರ್ಮಾಪಕ ರಾಕೇಶ್ ರೋಶನ್ ಜೊತೆಗೆ ಹಲವು ಗಂಟೆಗಳ ಕಾಲ ಮಾತನಾಡಿದ್ದಾರೆ.
ನಂತರ ಟ್ವೀಟ್ ಮಾಡಿದ ಶಾರುಖ್ ಖಾನ್, ಸ್ನೇಹಿತ, ಗುರು, ಕುಟುಂಬದವರೇ ಆದ ಒಬ್ಬರನ್ನು ಬಹಳ ದಿನಗಳ ನಂತರ ಭೇಟಿಯಾದೆ. ರಾಕೇಶ್ ರೋಶನ್ ನನಗೆ ನೆನಪಿಸಿದ್ದೇನೆಂದರೆ ಅತಿಯಾಗಿ ಮಾಡುವ ಅಗತ್ಯವಿಲ್ಲ. ಒಂದನ್ನು ಸರಿಯಾಗಿ ಮಾಡಿದರೆ ಸಾಕು. ಧನ್ಯವಾದಗಳು ಸರ್ ಎಂದು ಹೇಳಿದ್ದಾರೆ.
ಈ ಟ್ವೀಟ್ ನೋಡಿದರೆ ಭೇಟಿ ಉತ್ತಮವಾಗಿ ಅಂತ್ಯಗೊಂಡಿದೆ. ರಿತೇಶ್ ಸಿದ್ವಾನಿ ಕೂಡ ರೋಶನ್ ಮನೆಯಲ್ಲಿ ಶಾರುಖ್ ಜೊತೆಗಿದ್ದರು. ಆದರೆ ಈ ಸಭೆಯ ಬಗ್ಗೆ ಅಧಿಕೃತವಾದ ವಿವರಗಳೇನೂ ಇನ್ನೂ ಬಂದಿಲ್ಲ. ಈ ಮೊದಲಿಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾರುಖ್ ಖಾನ್, ನಾವು ಹೃತಿಕ್ ಜೊತೆ ಮಾತನಾಡಿದ್ದೇವೆ. ರಿತೇಶ್ ಸಿದ್ವಾನಿ ಮತ್ತು ಫರಾನ್ ಅಖ್ತರ್ ಕೂಡ ಮಾತನಾಡಿದ್ದಾರೆ. ಅದಾಗಿ ತಿಂಗಳಾಗಿದೆ. ಆದರೆ ಈಗ ಕೆಲವು ಹೊಂದಾಣಿಕೆಗಳಿಗೆ ಪ್ರಯತ್ನಿಸುತ್ತಿದ್ದೇವೆ. ಕಾಬಿಲ್ ನಿರ್ಮಾಪಕ ರಾಕೇಶ್ ಮತ್ತು ರಿತೇಶ್ ಮತ್ತು ಫರ್ಹಾನ್ ಇನ್ನೊಮ್ಮೆ ಭೇಟಿಯಾಗಲಿದ್ದಾರೆ. ಸಂಘರ್ಷವಾಗದಂತೆ ಪರಿಸ್ಥಿತಿ ನಿಭಾಯಿಸಲು ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ.
ಕಾರಣವನ್ನು ವಿವರಿಸಿದ ಶಾರುಖ್, ದೊಡ್ಡ ಸಿನಿಮಾಗಳು ಕನಿಷ್ಠ 3500ರಿಂದ 4000 ಥಿಯೇಟರಲ್ಲಿ ಬಿಡುಗಡೆಯಾಗಬೇಕು. ಎರಡು ದೊಡ್ಡ ಸಿನಿಮಾಗಳು ಬಿಡುಗಡೆಯಾಗುವಾಗ ನಮಗೆ ಬೇಕಾದಷ್ಟು ವ್ಯಾಪಕ ಪ್ರಮಾಣದ ಚಿತ್ರಮಂದಿರಗಳು ಸಿಗುವುದಿಲ್ಲ. ನಮ್ಮಲ್ಲಿ 8,000ದಿಂದ 10,000 ಚಿತ್ರಮಂದಿರಗಳು ಬರುವವರೆಗೆ ಎರಡು ದೊಡ್ಡ ಸಿನಿಮಾಗಳು ಜೊತೆಯಾಗಿ ಬಿಡುಗಡೆಯಾಗುವಂತಿಲ್ಲ. ರಯೀಸ್ ಬಾಗಶಃ ಸಿದ್ಧವಾಗಿದೆ. ಕೊನೆಯ ಶಾಟ್ ಮಾತ್ರ ಚಿತ್ರೀಕರಣವಾಗಬೇಕಿದೆ ಎಂದು ಹೇಳಿದ್ದಾರೆ.
ಹೃತಿಕ್ ರೋಶನ್ ಕೂಡ ಈಬಗ್ಗೆ ಮೊಹೆಂಜೊದಾರೋ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ನಾನು ಮತ್ತು ಶಾರುಖ್ ನಟರು. ಈ ವಿಷಯವನ್ನು ನಿರ್ಮಾಪಕರು ಮಾತನಾಡಿ ಪರಿಹರಿಸಬೇಕು ಎಂದು ಹೃತಿಕ್ ಹೇಳಿದ್ದರು.
ಕೃಪೆ: http://www.hindustantimes.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News